Advertisement

ಮೇಲ್ಮನೆಗೆ ನಾನೇ ಫೈನಲ್‌, ನನ್ನ ಹಕ್ಕುಚ್ಯುತಿ ಬಗ್ಗೆ ಕಾನೂನು ತಜ್ಞರ ಜತೆ ಸಮಾಲೋಚಿಸಿ ಕ್ರಮ

01:21 AM Dec 25, 2024 | Team Udayavani |

ಬೆಳಗಾವಿ ಚಳಿಗಾಲದ ಅಧಿವೇಶನ ಮುಗಿದು ವಾರವಾಗುತ್ತಾ ಬಂದರೂ ಸಿ.ಟಿ.ರವಿ ಹೇಳಿದ್ದಾರೆನ್ನಲಾಗಿರುವ ಅಶ್ಲೀಲ ಪದ ಸೃಷ್ಟಿಸಿದ ವಿವಾದದ ಕಿಚ್ಚು ಮಾತ್ರ ಇನ್ನೂ ಧಗಧಗಿಸುತ್ತಿದೆ. ಘಟನೆಗೆ ಸಂಬಂಧಿಸಿದಂತೆ ವಿಧಾನ ಪರಿಷತ್‌ ಸಭಾಪತಿ ತಮ್ಮ ನಿರ್ಧಾರ ಪ್ರಕಟಿಸಿದ ನಂತರವೂ ನಡೆದ ಹಲವು ಬೆಳವಣಿಗೆಗಳು ಆ ವಿವಾದದ ಸುತ್ತ ಗಿರಕಿ ಹೊಡೆಯುತ್ತಿವೆ. ಒಂದೆಡೆ, ವಿಧಾನಸಭಾ ಅಧ್ಯಕ್ಷರು ಇದೇ ಘಟನೆ ಯನ್ನು ಹಕ್ಕುಬಾಧ್ಯತಾ ಸಮಿತಿಗೆ ನೀಡಿದ್ದಾರೆ.

Advertisement

ಮತ್ತೊಂದೆಡೆ ಪೊಲೀಸರು, ಘಟನಾ ಸ್ಥಳದ ಅಂದರೆ ಮೇಲ್ಮನೆಯ ಮಹಜರು ಮಾಡಲು ನಿರ್ಧರಿಸಿದ್ದಾರೆ. ಇದೆಲ್ಲದರ ನಡುವೆ ಇಡೀ ಮೇಲ್ಮನೆಯ ಮುಖ್ಯಸ್ಥರಾಗಿರುವ ತಮ್ಮ ಹಕ್ಕಿಗೆ ಚ್ಯುತಿ ಬಂದಿರುವ ಬಗ್ಗೆ ಸಭಾಪತಿ ಬಸವರಾಜ ಹೊರಟ್ಟಿ ಅನುಮಾನ ವ್ಯಕ್ತಪಡಿಸಿದ್ದಾರೆ. ಆ ನಿಟ್ಟಿನಲ್ಲಿ ಕಾನೂನು ತಜ್ಞರು ಮತ್ತು ಕಾರ್ಯದರ್ಶಿಗಳೊಂದಿಗೆ ಸಮಾಲೋಚನೆ ನಡೆಸಲು ನಿರ್ಧರಿಸಿದ್ದಾರೆ. ಒಟ್ಟಾರೆಯಾಗಿ, ಈ ಪ್ರಕರಣದ ವಿವಿಧ ಆಯಾಮಗಳ ಪರಿಶೀಲನೆಯಲ್ಲಿ ವ್ಯಸ್ತರಾಗಿರುವ ಸಭಾಪತಿ ಬಸವರಾಜ ಹೊರಟ್ಟಿ “ಉದಯವಾಣಿ‘ಯೊಂದಿಗೆ ನೇರಾ-ನೇರ ಮಾತನಾಡಿದ್ದಾರೆ.

1. ಮೇಲ್ಮನೆಯ ಕಸ್ಟೋಡಿಯನ್‌ ನೀವು. ನಿಮ್ಮ ಉಪಸ್ಥಿತಿಯಲ್ಲೇ ಇಂಥ‌ದ್ದೊಂದು ಘಟನೆ ನಡೆದಿದೆ. ಇದೊಂದು ಕಪ್ಪುಚುಕ್ಕೆ ಆಯಿತಲ್ಲವೇ?
ಕಪ್ಪುಚುಕ್ಕೆ ಹೇಗೆ ಆಗುತ್ತದೆ? ಸದನ ಮುಂದೂಡಿದ ಅವಧಿಯಲ್ಲಿ ನಡೆದ ಘಟನೆ ಇದಾಗಿದೆ. ಆದಾಗ್ಯೂ ನಾನು ಎರಡೂ ಕಡೆಯವರನ್ನು ಕರೆಸಿ ವಿಚಾರಣೆ ನಡೆಸಿ ರೂಲಿಂಗ್‌ ಕೊಟ್ಟಿದ್ದೇನೆ. ಅದರ ನಂತರ ಹೊರಗಡೆ ನಡೆದ ಬೆಳವಣಿಗೆಗಳಿಗೂ ನನಗೂ ಮತ್ತು ನಾನು ಕಸ್ಟೋಡಿಯನ್‌ ಆಗಿರುವ ಸದನಕ್ಕೂ ಸಂಬಂಧ ಇಲ್ಲ.

2. ನೀವು ರೂಲಿಂಗ್‌ ಕೊಟ್ಟ ನಂತರವೂ ಕೆಳಮನೆಯಲ್ಲಿ ಅದೇ ಘಟನೆಗೆ ಸಭಾಧ್ಯಕ್ಷರು ಹಕ್ಕುಬಾಧ್ಯತಾ ಸಮಿತಿಗೆ ನೀಡಿ ರೂಲಿಂಗ್‌ ಕೊಟ್ಟಿದ್ದಾರೆ. ಅದರ ಬಗ್ಗೆ ಏನು ಹೇಳುತ್ತೀರಿ?
ನೋಡಿ, ಇಬ್ಬರ ನಡುವೆ ವಾಕ್ಸಮರ ನಡೆದಿದೆ. ಒಬ್ಬರು ಮೇಲ್ಮನೆ ಸದಸ್ಯರಾಗಿದ್ದರೆ, ಮತ್ತೊಬ್ಬರು ಕೆಳಮನೆ ಸದಸ್ಯರಾಗಿದ್ದಾರೆ. ಹಾಗಾಗಿ, ಕೆಳಮನೆಯಲ್ಲೂ ಅದು ಪ್ರಸ್ತಾಪವಾಗಿ ರೂಲಿಂಗ್‌ ನೀಡಲಾಗಿದೆ. ಅದಕ್ಕೆ ಅವರು (ಸಭಾಧ್ಯಕ್ಷರು) ಅಂತಿಮವಾಗಿದ್ದರೆ, ಅಲ್ಲಿ ನಡೆದಿದ್ದಕ್ಕೆ ಮತ್ತು ಅದನ್ನು ಆಧರಿಸಿ ನೀಡುವ ತೀರ್ಪಿಗೆ ಅವರು ಸ್ವತಂತ್ರರಾಗಿದ್ದಾರೆ. ಆದರೆ, ಇಲ್ಲಿ ಮಾತ್ರ (ಮೇಲ್ಮನೆಯಲ್ಲಿ) ನಾನೇ ಫೈನಲ್‌.

3. ಮೇಲ್ಮನೆ ನಿಮ್ಮ ಅಧೀನದಲ್ಲೇ ಇರುವ ಆವರಣ. ನೀವೇ ಹೇಳಿದಂತೆ ರೂಲಿಂಗ್‌ ಕೂಡ ಕೊಟ್ಟಾಗಿತ್ತು. ನಿಮ್ಮ ಮಾತನ್ನು ಮೀರಿ ಎರಡೂ ಕಡೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ಅದು ಸಭಾಪತಿ ಹಕ್ಕುಚ್ಯುತಿ ಆಗುವುದಿಲ್ಲವೇ?
ಪೊಲೀಸರಿಗೆ ಕೊಟ್ಟ ದೂರಿನಲ್ಲಿ ವಿಧಾನ ಪರಿಷತ್ತಿನಲ್ಲಿ ನಡೆದ ಘಟನೆ ಅಂತ ಉಲ್ಲೇಖೀಸಲಾಗಿದೆ. ಪರಿಷತ್ತಿನಲ್ಲಿ ಎಂದು ಉಲ್ಲೇಖೀಸಿರುವುದೇ ತಪ್ಪು. ಮತ್ತೂಂದೆಡೆ ನಾನು ರೂಲಿಂಗ್‌ ನೀಡಿದ ಘಟನೆ ಬಗ್ಗೆಯೇ ದೂರು ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಸಭಾಪತಿ ಹಕ್ಕಿಗೆ ಚ್ಯುತಿ ಬಂದಿದೆಯೇ ಎಂಬುದರ ಕುರಿತು ಕಾನೂನು ತಜ್ಞರೊಂದಿಗೆ ಪರಿಶೀಲನೆ ಮಾಡಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ.

Advertisement

4.ಈಗ ಸ್ಥಳ ಮಹಜರು ಮಾಡಲು ಅವಕಾಶ ಇಲ್ಲ ಅನ್ನುತ್ತಿದ್ದೀರಿ. ಹಾಗಿದ್ದರೆ, ತನಿಖೆಗೆ ಅಡ್ಡಿಪಡಿಸಿದಂತೆ ಆಗುವುದಿ ಲ್ಲವೇ? ಅಷ್ಟಕ್ಕೂ ಪೊಲೀಸರು ಸದನದ ಮಹಜರು ಮಾಡಲು ನಿಯಮಗಳಲ್ಲಿ ಅವಕಾಶ ಇದೆಯೇ?
ನನಗೆ ಗೊತ್ತಿರುವಂತೆ ನಿಯಮದಲ್ಲಿ ಇದಕ್ಕೆ ಅವಕಾಶ ಇದ್ದಂತಿಲ್ಲ. ಸದನದೊಳಗೆ ಪೊಲೀಸರು ಬರುವಂತಿಲ್ಲ. ಒಂದು ವೇಳೆ ಬಂದರೆ ಪೊಲೀಸರೇ ಜೈಲಿಗೆ ಹೋಗುತ್ತಾರೆ. ಆದಾಗ್ಯೂ ಮತ್ತೊಮ್ಮೆ ಈ ವಿಚಾರದಲ್ಲಿ ನಾನು ಕಾರ್ಯದರ್ಶಿಗಳೊಂದಿಗೆ ಚರ್ಚಿಸಿ, ನಿಯಮಗಳು ಏನು ಹೇಳುತ್ತವೆ ಅಂತ ನೋಡಿ ಕಾನೂನು ರೀತಿ ಕ್ರಮ ಕೈಗೊಳ್ಳುತ್ತೇನೆ.

5. ಇಡೀ ಘಟನೆ ಮತ್ತು ನಂತರದ ಬೆಳವಣಿಗೆಗಳ ಬಗ್ಗೆ ನೀವು ಕೊಟ್ಟ ತೀರ್ಪು ತೃಪ್ತಿ ತಂದಿದೆಯೇ?
ಇಲ್ಲಿ ಮತ್ತೂಮ್ಮೆ ಸ್ಪಷ್ಟಪಡಿಸಲು ಇಚ್ಛಿಸುತ್ತೇನೆ. ಮುಖ್ಯವಾಗಿ ಈ ಘಟನೆ ನಡೆಯಬಾರದಿತ್ತು, ನಡೆದು ಹೋಗಿರುವುದು ವಿಷಾದನೀಯ. ಘಟನೆ ನಡೆದಾಗ ನಾನು ಇರಲಿಲ್ಲ. ಒಂದು ವೇಳೆ ನಾನು ಇದ್ದಿದ್ದರೆ, ಅಷ್ಟೆಲ್ಲಾ ವಾಗ್ವಾದಕ್ಕೆ ಅವಕಾಶವನ್ನೂ ಕೊಡುತ್ತಿರಲಿಲ್ಲ. ಘಟನೆ ನಡೆದ ತಕ್ಷಣ ನನಗೆ ಲಭ್ಯವಾದ ಮಾಹಿತಿಯನ್ನು ಆಧರಿಸಿ ಸೂಚನೆ ನೀಡಿದ್ದೇನೆ.

6. ವಿಚಾರಣೆ ನಡೆಸಿರುವುದಾಗಿ ಹೇಳಿದಿರಿ. ಹಾಗಿದ್ದರೆ, ಆ ವೇಳೆ ಸಿ.ಟಿ. ರವಿ ತಮ್ಮ ಮೇಲಿನ ಆರೋಪವನ್ನು ಒಪ್ಪಿಕೊಂಡರಾ?
ಮೊದಲು ಸಚಿವರು ತಮ್ಮ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿರುವುದಾಗಿ ರವಿ ವಿರುದ್ಧ ನನ್ನ ಬಳಿ ದೂರು ಕೊಟ್ಟರು. ತಕ್ಷಣ ನಾನು ರವಿಯನ್ನು
ಕರೆಸಿ, ನಿನ್ನ ಮೇಲೆ ಇಂಥದ್ದೊಂದು ಕಂಪ್ಲೇಂಟ್‌ ಬಂದಿದೆ ಅಂತ ಕೇಳಿದಾಗ, “ನನಗೂ ಅವರು (ಸಚಿವರು) ಅವಹೇಳನಕಾರಿಯಾಗಿ ಬೈದಿದ್ದಾರೆ ಸರ್‌, ಬೇಕಿದ್ದರೆ ಕರೆದು ಕೇಳಿ’ ಅಂದರು. ನಾನು ಆಗ ಮಾಹಿತಿ ತರಿಸಿಕೊಂಡೆ. ಇದಿಷ್ಟೇ ನನಗೆ ಗೊತ್ತಿರುವುದು.

7. ಚಿಂತಕರ ಚಾವಡಿಯಲ್ಲಿ ಇತ್ತೀಚೆಗೆ ಇಂಥ ಅಹಿತಕರ ಘಟನೆಗಳಿಗೆ ಸಾಕ್ಷಿಯಾಗುತ್ತಲೇ ಇದೆ. ಹಾಗಿದ್ದರೆ, ಇನ್ನಷ್ಟು ಕಠಿಣ ನಿಯಮ ಗಳನ್ನು ರೂಪಿಸುವ ಅವಶ್ಯಕತೆ ಇದೆಯೇ?
ಈಗಿರುವ ನಿಯಮಗಳೆಲ್ಲವೂ ಸರಿಯಾಗಿವೆ. ಆದರೆ, ಅದರಂತೆ ನಡೆದುಕೊಳ್ಳುವುದು ಕಡಿಮೆ ಆಗುತ್ತಿದೆ ಎಂಬುದೇ ಬೇಸರದ ಸಂಗತಿ. ನನ್ನ ಪ್ರಕಾರ ನಿಯಮಗಳ ಬದಲಾವಣೆ ಅವಶ್ಯಕತೆ ಇಲ್ಲ. ಹಿರಿಯರ ಮನೆ ಅದು. ಅದರ ಘನತೆಗೆ ಧಕ್ಕೆ ಬಾರದಂತೆ ನಡೆದುಕೊಳ್ಳುವ ಕರ್ತವ್ಯ ನಮ್ಮೆಲ್ಲರದ್ದಾಗಿದೆ. ಮುಂದಿನ ದಿನಗಳಲ್ಲಿ ಇಂಥ ಘಟನೆಗಳು ಮರುಕಳಿಸದಂತೆ ಎಲ್ಲರೂ ಎಚ್ಚರವಹಿಸಬೇಕು.

8. ಉತ್ತರ ಕರ್ನಾಟಕದಲ್ಲಿ ನಡೆದ ಈ ಬಾರಿಯ ಅಧಿವೇಶನ ತೃಪ್ತಿ ತಂದಿದೆಯೇ?
ಖಂಡಿತ ತೃಪ್ತಿ ತಂದಿದೆ. ನಡಾವಳಿಯ ಬಹುತೇಕ ವಿಷಯಗಳನ್ನು ಪೂರ್ಣಗೊಳಿಸಿದ್ದೇವೆ. ಜಿಲ್ಲಾಡಳಿತವೂ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿತ್ತು. ವಿಶೇಷವಾಗಿ ಮೂರು ದಿನಗಳು ಉತ್ತರ ಕರ್ನಾಟಕ ಸಮಸ್ಯೆಗಳ ಕುರಿತು ಚರ್ಚೆ ನಡೆದಿದೆ. ರಾತ್ರಿ 10.30ರವರೆಗೆ ಮೇಲ್ಮನೆ ಕಲಾಪಗಳು ನಡೆದಿದ್ದು, ಸದಸ್ಯರೆಲ್ಲರೂ ಅದರಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ. ಇದೆಲ್ಲವೂ ನನಗೆ ವೈಯಕ್ತಿಕವಾಗಿ ತೃಪ್ತಿ ತಂದಿದೆ. ಆದರೆ, ಕೊನೆಯ ದಿನ ನಡೆದ ಘಟನೆಯು ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತೆ ಮಾಡಿಬಿಟ್ಟಿತು.

ಉದಯವಾಣಿ ಸಂದರ್ಶನ: ವಿಜಯಕುಮಾರ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next