Advertisement
ಸುದ್ದಿಗಾರರ ಜತೆ ಅವರು ಮಾತನಾಡಿ, ಘಟನೆ ಸದನದ ಮುಂದೆ ನಡೆದಿದೆ. ಅದನ್ನೀಗ ಸಿಐಡಿಗೆ ಕೊಟ್ಟಿರುವುದಾಗಿ ಗೃಹ ಸಚಿವರು ಹೇಳುತ್ತಿದ್ದಾರೆ. ಸ್ಥಳ ಮಹಜರು ಕುರಿತು ಬೆಳಗಾವಿ ಪೊಲೀಸ್ ಆಯುಕ್ತರು ಪತ್ರ ಬರೆದಿದ್ದಾರೆ. ಅಂತಹ ಪರಿಸ್ಥಿತಿ ಎದುರಾದರೆ ನಮ್ಮದೇ ನಿಯಮದ ಪ್ರಕಾರ ಅವಕಾಶ ಮಾಡಿಕೊಡುತ್ತೇವೆ. ಕಾನೂನು ವ್ಯಾಪ್ತಿ ಬಿಟ್ಟು ನಾವು ಏನೂ ಮಾಡಲಾಗುವುದಿಲ್ಲ. ಪ್ರಕರಣವು ಸದನ ಮುಂದೂಡಿದಾಗ ನಡೆದಿದ್ದರೂ ಪರಿಷತ್‌ನಲ್ಲಿಯೇ ನಡೆದಿರುವುದು. ಆದರೆ, ಸರಕಾರ ಸದನದ ಹೊರಗೆ ನಡೆದ ಪ್ರಕರಣವೆಂದು ಸಿಐಡಿಗೆ ವಹಿಸಿದೆ ಎಂದು ತಿಳಿದು ಬಂದಿದೆ. ಏನೇ ಕ್ರಮ ಕೈಗೊಳ್ಳುವುದಿದ್ದರೂ ಸಭಾಪತಿ ಅನುಮತಿ ಬೇಕಾಗುತ್ತದೆ ಎಂದರು.
ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಒಬ್ಬ ಮಂತ್ರಿಯಾಗಿ ಅಲ್ಲ, ಮಹಿಳೆಯಾಗಿ ನಾವು ನೋಡಬೇಕು. ಅಲ್ಲದೇ ಸಿ.ಟಿ.ರವಿ ಅವರನ್ನು ಪೊಲೀಸರು ಅಮಾನುಷವಾಗಿ ಎತ್ತಿಕೊಂಡು ಹೋಗಿದ್ದು ತಪ್ಪು. ಅವರು ಸದನದ ಸದಸ್ಯರಾಗಿ ದೂರು ಕೊಟ್ಟರೆ ಪರಿಶೀಲನೆ ಮಾಡಲು ಸಮಿತಿ ಎದುರು ಅವರನ್ನು ಕರೆಯಿಸುತ್ತೇವೆ. ಚರ್ಚಿಸಿ ತಪ್ಪಿತಸ್ಥರೆಂದು ಕಂಡು ಬಂದರೆ ಕ್ರಮ ಕೈಗೊಳ್ಳಲು ಸೂಚಿಸುತ್ತೇವೆ ಎಂದರು. ಪ್ರಕರಣ ನಮ್ಮ ವ್ಯಾಪ್ತಿಗೆ ಬಂದಾಗ ತೀರ್ಮಾನ ಕೈಗೊಂಡು ಮುಗಿಸಲಾಗಿತ್ತು. ಅದಕ್ಕಾಗಿ ಮುಗಿದ ಅಧ್ಯಾಯ ಎಂದು ಕೂಡ ನಾನು ಹೇಳಿದ್ದೆ. ಲಕ್ಷ್ಮೀ ಹೆಬ್ಟಾಳ್ಕರ್ ಅಥವಾ ಇನ್ಯಾರಾದರೂ ಮತ್ತೆ ಹೊಸದಾಗಿ ದೂರು ಕೊಟ್ಟರೂ ಎಫ್‌ಎಸ್‌ಎಲ್‌ಗೆ ಕಳುಹಿಸಿ, ವರದಿ ಆಧರಿಸಿ ಸಮಿತಿ ಎದುರು ಕರೆಯುತ್ತೇವೆ. ಆದರೆ ಸದನದೊಳಗೆ ಆಗಿರುವ ಘಟನೆ ಬಗ್ಗೆ ನನಗೆ ಮಾಹಿತಿ ಇಲ್ಲ. ಎರಡೂ ಕಡೆ ಯೋಚನೆ ಮಾಡಬೇಕಾಗುತ್ತದೆ ಎಂದರು.