Advertisement

ನನಗೆ ಸಿಎಂ ಆಗೋ ಅರ್ಹತೆಯಿದೆ

10:41 PM Sep 25, 2019 | Lakshmi GovindaRaju |

ಬೆಳಗಾವಿ: “ನನಗೆ ಮುಖ್ಯಮಂತ್ರಿ ಆಗುವ ಎಲ್ಲ ಅರ್ಹತೆ ಇದ್ದು 8 ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಸಾಕಷ್ಟು ರಾಜಕೀಯ ಅನುಭವವಿರುವುದರಿಂದ ಒಂದು ವೇಳೆ ಸಿಎಂ ಆದರೆ ಸಮಗ್ರ ಕರ್ನಾಟಕ ಅಭಿವೃದ್ಧಿ ಮಾಡುತ್ತೇನೆ’ ಎಂದು ಹೇಳುವ ಮೂಲಕ ಶಾಸಕ ಉಮೇಶ ಕತ್ತಿ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ವೇದಿಕೆ ಮಾಡಿಕೊಟ್ಟಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ನಾನು ಅದೃಷ್ಟದ ಬಲದಿಂದ ಮುಖ್ಯಮಂತ್ರಿಯಾದರೆ ನೀರಾವರಿಗೆ ಮೊದಲ ಆದ್ಯತೆ ನೀಡಲಾಗುವುದು. ಕೃಷ್ಣ ನೀರಿನ ಉಪಯೋಗಕ್ಕೆ ಹೆಚ್ಚು ಒತ್ತು ನೀಡುತ್ತೇನೆಂದರು.

Advertisement

ಸಚಿವ ಸ್ಥಾನದ ನಿರೀಕ್ಷೆಯಿತ್ತು: ಯಡಿಯೂರಪ್ಪ ಸರ್ಕಾರದಲ್ಲಿ ಸಚಿವ ಸ್ಥಾನ ಕೈ ತಪ್ಪಿದ ವಿಚಾರ ಪ್ರಸ್ತಾಪಿಸಿದ ಕತ್ತಿ, ರಾಜಕೀಯದಲ್ಲಿ 35 ವರ್ಷ ಕೆಲಸ ಮಾಡಿದ್ದು ಅದೇ ಆಧಾರದ ಮೇಲೆ ಸಚಿವ ಸ್ಥಾನ ಸಿಗಬಹುದೆಂಬ ನಿರೀಕ್ಷೆ ಇತ್ತು. ಆದರೆ, ಬದಲಾವಣೆ ಮಾಡಿ ನೋಡಲು ಹೈಕಮಾಂಡ್‌ ತೀರ್ಮಾನಿಸಿದೆ. ಹೀಗಾಗಿ ಪಕ್ಷದ ತೀರ್ಮಾನಕ್ಕೆ ಬದ್ಧನಾಗಿದ್ದೇನೆ. ಮತ್ತೂಮ್ಮೆ ಅವಕಾಶ ಸಿಕ್ಕರೆ ಬೆಳಗಾವಿ ಅಭಿವೃದ್ಧಿ ಮಾಡುವೆ ಎಂದರು. ನನ್ನ ವಿರುದ್ಧ ಷಡ್ಯಂತ್ರ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಜತೆಗೆ ಸಚಿವ ಸ್ಥಾನ ಯಾರಿಂದಲೂ ತಪ್ಪಿಲ್ಲ. ಅದು ಹಣೆಬರಹದಲ್ಲಿ ಬರೆದಿರಬೇಕು. ಸಚಿವ ಸ್ಥಾನ ತಪ್ಪಿದ್ದಕ್ಕೆ ನನಗೆ ಯಾವುದೇ ಅಸಮಾಧಾನ ಇಲ್ಲ. ಶಾಸಕನಾಗಿ ಕ್ಷೇತ್ರದ ಕೆಲಸ ಮಾಡುತ್ತೇನೆಂದರು.

ಪ್ರತ್ಯೇಕ ರಾಜ್ಯಕ್ಕೆ ಹೋರಾಟ: “ಪ್ರತ್ಯೇಕ ರಾಜ್ಯದ ಹೋರಾಟ ಹುಟ್ಟು ಹಾಕಿದ್ದು ನಾನೇ. ಅನ್ಯಾಯ ಸಂದರ್ಭ ಧ್ವನಿ ಎತ್ತುತ್ತೇನೆ. ಉತ್ತರ ಕರ್ನಾಟಕದಲ್ಲಿ ಇನ್ನೂ ಅಭಿವೃದ್ಧಿ ಕೆಲಸ ಸಾಕಷ್ಟು ಆಗಬೇಕಿದೆ. ಪ್ರತ್ಯೇಕತೆ ಕೂಗು ಎಬ್ಬಿಸುವ ಸಂದರ್ಭ ಬಂದರೆ ಹೋರಾಟಕ್ಕೆ ಸಿದ್ಧ. ಅನ್ಯಾಯವಾದಾಗ ಪ್ರತಿಭಟನೆ ಮಾಡುವುದು ನಮ್ಮ ಜವಾಬ್ದಾರಿ. ಮುಖ್ಯಮಂತ್ರಿ ಆಗುವ ಸಂದರ್ಭ ಬಂದರೆ ರಾಜ್ಯ ಕಟ್ಟುತ್ತೇನೆ’ ಎಂದರು.

ನೆರೆಯಿಂದ ಉತ್ತರ ಕರ್ನಾಟಕದಲ್ಲಿ ಅದರಲ್ಲೂ ಬೆಳಗಾವಿ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಹಾನಿಯಾಗಿದೆ. ಹೀಗಾಗಿ ಈಗ ಬೆಂಗಳೂರಿನಲ್ಲಿ ಅಧಿವೇಶನ ನಡೆಸಲಾಗುತ್ತಿದೆ. ಮುಂದೆ ಬೆಳಗಾವಿಯಲ್ಲಿ ಅಧಿವೇಶನ ನಡೆಸಲು ಸರ್ಕಾರ ಬದ್ಧ ಎಂದರು. ಉಪಚುನಾವಣೆಯ ಎಲ್ಲ 15 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಗೋಕಾಕ್‌ನಲ್ಲಿ ಅಶೋಕ ಪೂಜಾರಿ, ಕಾಗವಾಡದಲ್ಲಿ ರಾಜು ಕಾಗೆ, ಅಥಣಿಯಲ್ಲಿ ಲಕ್ಷ್ಮಣ ಸವದಿಗೆ ಟಿಕೆಟ್‌ ಸಿಗುವ ಸಾಧ್ಯತೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next