ಹುಬ್ಬಳ್ಳಿ: ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ನನ್ನನ್ನು ದೆಹಲಿಗೆ ಬರುವಂತೆ ತಿಳಿಸಿದ್ದರಿಂದ ಹೋಗಿದ್ದೆ. ಈ ಸಂದರ್ಭದಲ್ಲಿ ಎಲ್ಲಾ ವಿಚಾರಗಳನ್ನು ತಿಳಿಸಿದ್ದೇನೆ. ನನ್ನೊಂದಿಗೆ ವಿಸ್ತೃತವಾಗಿ ಚರ್ಚಿಸಿದ್ದು, ನನಗೆ ಟಿಕೆಟ್ ದೊರೆಯಲಿದೆ ಎನ್ನುವ ವಿಶ್ವಾಸವಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ತಿಳಿಸಿದರು.
ಗುರುವಾರ ರಾತ್ರಿ ದೆಹಲಿಯಿಂದ ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಎಲ್ಲಾ ವಿಚಾರಗಳನ್ನು ರಾಷ್ಟ್ರೀಯ ಅಧ್ಯಕ್ಷರು ಸಮಧಾನದಿಂದ ಕೇಳಿದ್ದಾರೆ. ಈ ಕುರಿತು ರಾಜ್ಯ ಹಾಗೂ ರಾಷ್ಟ್ರ ನಾಯಕರೊಂದಿಗೆ ಮಾತನಾಡಿ ಸೂಕ್ತ ಪರಿಹಾರ ನೀಡುತ್ತೇವೆ. ಒಂದೆರಡು ದಿನ ಸಮಯವಾಕಾಶ ನೀಡುವಂತೆ ತಿಳಿಸಿದ್ದರಿಂದ ವಾಪಸ್ಸು ಬಂದಿದ್ದೇನೆ. ನನಗೆ ಟಿಕೆಟ್ ನೀಡುವಂತೆ ಬೇಡಿಕೆಯಿಟ್ಟಿದ್ದೇನೆಯೇ ಹೊರತು, ಮಗನಿಗೆ ಅಥವಾ ಇನ್ನಾರಿಗೋ ಕೊಡುವಂತೆ ಹೇಳಿಲ್ಲ ಎಂದು ತಿಳಿಸಿದರು.
ಈ ಕುರಿತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಕೂಡ ಮಾತನಾಡಿದ್ದೇನೆ. ಅವರು ಕೂಡ ಜೆ.ಪಿ.ನಡ್ಡಾ, ಅಮಿತ್ ಶಾ ಸೇರಿದಂತೆ ಹಲವು ನಾಯಕರೊಂದಿಗೆ ಮಾತನಾಡಿದ್ದಾರೆ. ಜಗದೀಶ ಶೆಟ್ಟರ್ ಅವರಿಗೆ ಟಿಕೆಟ್ ನೀಡುವಂತೆ ತಿಳಿಸಿದ್ದಾರೆ. ಇದು ಜಗದೀಶ ಶೆಟ್ಟರ್ ಪ್ರಶ್ನೆಯಲ್ಲ. ಇದು ಇಡೀ ಉತ್ತರ ಕರ್ನಾಟಕ ಪ್ರಶ್ನೆಯಾಗಿದ್ದು, ಆ ಭಾಗದಲ್ಲಿ ಅವರ ಪ್ರಭಾವವಿದೆ. ಹೀಗಾಗಿ ಅವರಿಗೆ ಟಿಕೆಟ್ ನೀಡಲೇಬೇಕು ಎಂದು ಅವರು ಕೂಡ ಒತ್ತಾಯಿಸಿದ್ದಾರೆ.
ಸಕರಾತ್ಮಕ ಭರವಸೆಯಿದೆ
ಯಡಿಯೂರಪ್ಪ ಅವರು ಹಿರಿಯ ನಾಯಕರಿಗೆ ಹೇಳಿದ್ದಾರೆ. ನಾನು ಕೂಡ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿಯಾಗಿ ಸಮಗ್ರ ರಾಜಕೀಯ ಕುರಿತು ಮಾತನಾಡಿದ್ದೇನೆ. ಹೀಗಾಗಿ ನನಗೆ ಸಕರಾತ್ಮಕ ಭರವಸೆಯಿದೆ. ಈ ಕುರಿತು ಜೆ.ಪಿ.ನಡ್ಡಾ ಅವರು ಆಹ್ವಾನಿಸಿದ ಹಿನ್ನೆಲೆಯಲ್ಲಿ ಅವರೊಬ್ಬರನ್ನು ಬಿಟ್ಟು ಬೇರೆ ಯಾರನ್ನೂ ಭೇಟಿಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ನಿಮಗೆ ಟಿಕೆಟ್ ಸಿಗಬಾರದು ಎಂದು ಹಲವರು ಪ್ರಯತ್ನ ಮಾಡಿದ್ದಾರೆ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಬೇರೆಯವರ ಬಗ್ಗೆ ನಾನೇನು ಮಾತನಾಡುವುದಿಲ್ಲ. ಅವರಿವರೊಂದಿಗೆ ಮಾತನಾಡುವ ಬದಲು ನೇರವಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರೊಂದಿಗೆ ಸವಿಸ್ತಾರವಾಗಿ ಮಾತನಾಡಿದ್ದೇನೆ. ಎರಡನೇ ಪಟ್ಟಿ ಬಂದ ನಂತರ ನಾವು ಚರ್ಚೆ ಮಾಡಿದ್ದೇವೆ. ಹೀಗಾಗಿ ಎರಡನೇ ಪಟ್ಟಿಯಲ್ಲಿ ಹಸರು ಕೈ ತಪ್ಪಿತು ಎನ್ನುವ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದರು.