Advertisement

ನಾನು ಎಕನಾಮಿಕ್ಸ್‌ ಸ್ಟುಡೆಂಟ್‌: ಶಿವಲಿಂಗೇಗೌಡ

10:49 PM Mar 10, 2022 | Team Udayavani |

ವಿಧಾನಸಭೆ : ಬಜೆಟ್‌ ಮೇಲಿನ ಭಾಷಣ ಮಾಡುವಾಗ ಸ್ಪೀಕರ್‌ ಪೀಠದಲ್ಲಿದ್ದ ಉಪ ಸಭಾಧ್ಯಕ್ಷ ಆನಂದ ಮಾಮನಿ ಬೇಗ ಮುಗಿಸಿ ಎಂದು ಹೇಳಿದ್ದರಿಂದ ಆಕ್ರೋಶಗೊಂಡ ಜೆಡಿಎಸ್‌ ಶಾಸಕ ಶಿವಲಿಂಗೇಗೌಡ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಲು ಮುಂದಾದ ಪ್ರಸಂಗ ನಡೆಯಿತು.

Advertisement

ಕಾಂಗ್ರೆಸ್‌ನ ರಮೇಶ್‌ಕುಮಾರ್‌ ಹಾಗೂ ಕೃಷ್ಣ ಬೈರೇಗೌಡ, ಜೆಡಿಎಸ್‌ ಶಾಸಕ ಅನ್ನದಾನಿ ಶಿವಲಿಂಗೇಗೌಡ ಪರವಾಗಿ ಅವರಿಗೆ ಅವಕಾಶ ನೀಡುವಂತೆ ಮನವಿ ಮಾಡಿದರು. ಅವರ ಮನವಿಗೆ ಉಪ ಸಭಾಧ್ಯಕ್ಷ ಆನಂದ ಮಾಮನಿ ಶಿವಲಿಂಗೇಗೌಡರಿಗೆ ಮಾತನಾಡಲು ಅವಕಾಶ ಕಲ್ಪಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಿವಲಿಂಗೇಗೌಡ, ನಾನು ಡಿಗ್ರಿಯಲ್ಲಿ ಎಕನಾಮಿಕ್ಸ್‌ ಸ್ಟುಡೆಂಟ್‌, ರಾಜ್ಯದ ಎಲ್ಲ ಬಜೆಟ್‌ಗಳನ್ನು ಓದಿಕೊಂಡೇ ಇಲ್ಲಿಗೆ ಬಂದಿದ್ದೇನೆ. ನನಗೆ ಅವಕಾಶ ಕೊಟ್ಟರೆ, ಬಜೆಟ್‌ನ ಲೋಪಗಳ ಎಲ್ಲವನ್ನೂ ಎಳೆ ಎಳೆಯಾಗಿ ಬಿಚ್ಚಿಡುತ್ತೇನೆ. ಆದರೆ, ನಮಗೆ ಅವಕಾಶ ನೀಡುವುದಿಲ್ಲ. ನಾನು ಪಂಚೆ ಟವಲ್‌ ಹಾಕಿಕೊಂಡು ಬರುತ್ತೇನೆ ಎಂದು ಸಾಮಾನ್ಯದವನು ಎಂದುಕೊಳ್ಳಬೇಡಿ. ಬಜೆಟ್‌ನ ಎಲ್ಲ ಬಂಡವಾಳವೂ ನನಗೆ ಗೊತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಪುರಸ್ಕೃತ ಯೋಜನೆಗಳಿಂದ ರಾಜ್ಯಕ್ಕೆ ಬರುವ ಅನುದಾನದಲ್ಲಿ ಕೊರತೆಯಾಗುತ್ತಿದೆ. ಕೆಂದ್ರದಿಂದ ಹೆಚ್ಚಿನ ಅನುದಾನ ಪಡೆಯಲು ಸರ್ಕಾರ ಪ್ರಯತ್ನ ಮಾಡಬೇಕು. ರಾಜ್ಯ ಸರ್ಕಾರ 14000 ಕೋಟಿ ರಾಜಸ್ವ ಕೊರತೆ ಎದುರಿಸುತ್ತಿದ್ದು, ರಾಜ್ಯದಿಂದ 3 ಲಕ್ಷ ಕೋಟಿ ತೆರಿಗೆಯನ್ನು ಕೇಂದ್ರಕ್ಕೆ ಕಳುಹಿಸುತ್ತೇವೆ. ಆದರೆ, ರಾಜ್ಯಕ್ಕೆ ಕೆವಲ 47 ಸಾವಿರ ಕೋಟಿ ರೂ. ಬರುತ್ತದೆ. ಇದರಿಂದ ರಾಜ್ಯದ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ ಎಂದರು.

ಕಾಳಿ ಯೋಜನೆಗೆ ದೇಶಪಾಂಡೆ ವಿರೋಧ, ಎಚ್‌.ಕೆ. ಪಾಟೀಲ್‌ ಸ್ವಾಗತ
ವಿಧಾನಸಭೆ : ಕಾಳಿ ನದಿ ನೀರನ್ನು ಉತ್ತರ ಕರ್ನಾಟಕ ಭಾಗದ ಐದು ಜಿಲ್ಲೆಗಳಿಗೆ ಬಳಕೆ ಮಾಡಿಕೊಳ್ಳುವ ಬಗ್ಗೆ ಬಜೆಟ್‌ನಲ್ಲಿ ಘೋಷಣೆ ಮಾಡಿರುವ ಕಾಂಗ್ರೆಸ್‌ನ ಇಬ್ಬರ ನಾಯಕರು ಪರ ವಿರೋಧ ಅಭಿಪ್ರಾಯ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು.

Advertisement

ಕಾಂಗ್ರೆಸ್‌ನ ಹಳಿಯಾಳ ಶಾಸಕ ಆರ್‌.ವಿ.ದೇಶಪಾಂಡೆ, ರಾಜ್ಯ ಸರ್ಕಾರ ಕಾಳಿ ನದಿ ಯೋಜನೆಯ ಸಾಧಕ ಬಾಧಕ ನೋಡಬೇಕು. ಈ ಯೋಜನೆ ಜಾರಿ ಮಾಡುವುದು ಕಷ್ಟ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ವಿಧಾನಸಭೆಯಲ್ಲಿ ಬಜೆಟ್‌ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಕುಡಿಯುವ ನೀರಿನ ಸಮಸ್ಯೆ ಇದೆ. ಕಾಳಿ ನದಿಯಿಂದ ವಿದ್ಯುತ್‌ ಉತ್ಪಾದನೆ ಮಾಡಲಾಗುತ್ತಿದೆ. ಅತಿ ಕಡಿಮೆ ವೆಚ್ಚದಲ್ಲಿ ವಿದ್ಯುತ್‌ ಉತ್ಪಾದನೆಯಾಗುತ್ತಿದ್ದು, ರಾಜ್ಯ ಸರ್ಕಾರ ಈ ಯೋಜನೆಯನ್ನು ಜಾರಿಗೊಳಿಸುವುದು ಸೂಕ್ತವಲ್ಲ ಎಂದು ಹೇಳಿದರು.

ಅವರು ಮಾತನಾಡುವ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಕಾಂಗ್ರೆಸ್‌ನ ಗದಗ ಕ್ಷೇತ್ರದ ಎಚ್‌.ಕೆ. ಪಾಟೀಲ್‌, ಕಾಳಿ ನದಿಯಲ್ಲಿ ಸಾಕಷ್ಟು ನೀರು ಹರಿದು ಸಮುದ್ರಕ್ಕೆ ಹರಿದು ಹೋಗುವುದರಿಂದ ಈ ಯೋಜನೆಯೇ ಬೇಡ ಎನ್ನುವುದು ಸರಿಯಲ್ಲ. ರಾಜ್ಯ ಸರ್ಕಾರ ಕಾಳಿ ನದಿ ನೀರನ್ನು ಉತ್ತರ ಕರ್ನಾಟಕದ ಹುಬ್ಬಳ್ಳಿಧಾರವಾಡ ಸೇರಿದಂತೆ ಅನೇಕ ನಗರಗಳಿಗೆ ಕುಡಿಯುವ ನೀರಿಗೆ ಬಳಸಿಕೊಳ್ಳಲು ಯೋಜನೆ ರೂಪಿಸಿದ್ದು ಒಳ್ಳೆಯ ಬೆಳವಣಿಗೆ. ಈ ಯೋಜನೆ ವೈಜ್ಞಾನಿಕವಾಗಿದೆಯೋ ಇಲ್ಲವೋ ಎನ್ನುವುದರ ಬಗ್ಗೆ ಮಾತ್ರ ಪರಿಶೀಲನೆ ನಡೆಸಿ ಯೋಜನೆ ರೂಪಿಸಬಹುದು. ಯೋಜನೆ ಬೇಡ ಎನ್ನುವುದು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸಚಿವರ ಗೈರು ಪ್ರತಿಪಕ್ಷ ಸದಸ್ಯರ ಆಕ್ರೋಶ
ವಿಧಾನಸಭೆ: ವಿಧಾನಸಭೆ ನಡೆಯುವಾಗ ಸಚಿವರು ಗೈರು ಹಾಜರಾಗಿದ್ದಕ್ಕೆ ಪ್ರತಿಪಕ್ಷಗಳ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಗಮನ ಸೆಳೆಯುವ ಸೂಚನೆಯ ಸಂದರ್ಭದಲ್ಲಿ ಸಚಿವರು ಇಲ್ಲದ ಕಾರಣ ಉತ್ತರ ಕೊಡಲು ಯಾರೂ ಇಲ್ಲ ಎಂದು ಉಪ ಸಭಾಧ್ಯಕ್ಷ ಆನಂದ ಮಾಮನಿ ಶುಕ್ರವಾರ ಪ್ರಸ್ತಾಪಿಸಲು ಅವಕಾಶ ಕಲ್ಪಿಸುವುದಾಗಿ ಹೇಳಿದರು. ಅವರ ಮಾತಿನಿಂದ ಆಕ್ರೋಶಗೊಂಡ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಸದನ ನಡೆಯುವ ಸಂದರ್ಭದಲ್ಲಿ ಸಚಿವರು ಸದನದಲ್ಲಿ ಇರದೇ ಎಲ್ಲಿಗೆ ಹೋಗುತ್ತಾರೆ. ಇವರಿಗೆ ಜವಾಬ್ದಾರಿ ಇರಬಾರದೇ, ಮುಖ್ಯಮಂತ್ರಿಗಳು ಸಚಿವರಿಗೆ ಎಚ್ಚರಿಕೆ ನೀಡಬೇಕು ಎಂದು ಆಗ್ರಹಿಸಿದರು.

ಅವರಿಗೆ ಧ್ವನಿಗೂಡಿಸಿದ ಜೆಡಿಎಸ್‌ ಶಾಸಕ ಎ.ಟಿ.ರಾಮಸ್ವಾಮಿ, ಸದನ ನಡೆಯುವ ಸಂದರ್ಭದಲ್ಲಿ ಸಚಿವರು ಎಲ್ಲಿಗೆ ಹೋಗಿದ್ದಾರೆ ಎನ್ನುವುದನ್ನು ಸದನಕ್ಕೆ ತಿಳಿಸಿ, ಸದನಕ್ಕಿಂತ ಮುಖ್ಯವಾದ ಕೆಲಸ ಸಚಿವರಿಗೆ ಏನಿದೆ ಎನ್ನುವುದನ್ನು ತಿಳಿಸಿ ಎಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಉಪ ಸಭಾಧ್ಯಕ್ಷ ಆನಂದ ಮಾಮನಿ, ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದು ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next