Advertisement

ನಾನು ಮನುಷ್ಯತ್ವ ಇರುವ ಹಿಂದೂ

11:40 AM Jan 16, 2018 | |

ಬೆಂಗಳೂರು: ನಾನು ಹಿಂದೂಗಳ ವಿರೋಧಿಯಲ್ಲ. ಮನುಷ್ಯತ್ವ ಇರುವ ಹಿಂದೂ ಆಗಿದ್ದೇನೆ. ಮನುಷ್ಯತ್ವ ಇಲ್ಲದವರು ನನ್ನನ್ನು ಹಿಂದೂ ವಿರೋಧಿ ಎನ್ನುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Advertisement

ನಗರದ ಕುಮಾರಸ್ವಾಮಿ ಬಡಾವಣೆಯಲ್ಲಿ ಹಮ್ಮಿಕೊಂಡಿದ್ದ ಬೀರೇಶ್ವರ ಸ್ವಾಮಿ ದೇವಾಲಯದ ಉದ್ಘಾಟನೆ, ಕನಕದಾಸರ 530ನೇ ಜನ್ಮದಿನಾಚರಣೆ ಹಾಗೂ ಕನಕ ದಾಸರ 40 ಅಡಿಯ ಪುತ್ಥಳಿ ಅನಾವರಣಗೊಳಿಸಿ ಮಾತನಾಡಿದರು.

ಮಲೆಯ ಮಹದೇಶ್ವರ ಬೆಟ್ಟದಲ್ಲಿರುವ ದೇವರಿಗೆ, ನಂಜುಂಡೇಶ್ವರ ಸ್ವಾಮಿ, ಮೈಸೂರಿನ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುತ್ತೇನೆ. ನಾನು ಹಿಂದು ವಿರೋಧಿಯಾಗಿದ್ದರೆ ಈ ಎಲ್ಲ ದೇವಸ್ಥಾನಕ್ಕೆ ಏಕೆ ಹೋಗುತ್ತಿದ್ದೆ? ಮನುಷ್ಯ ಮನುಷ್ಯರ ನಡುವೆ ಭೇದಭಾವ ಮಾಡುವವರು ಹೀಗೆಲ್ಲ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಬರಬಾರದು ಎಂದು ಶತಾಯಗತಾಯ ಪ್ರಯತ್ನ ಮಾಡುತ್ತಿದ್ದಾರೆ. ಕಾಂಗ್ರೆಸ್‌ ಸರ್ಕಾರ ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯುತ್ತಿದೆ. ಧರ್ಮದ ಹೆಸರಿನಲ್ಲಿ ಯಾರನ್ನು ವಿಂಗಡಿಸುತ್ತಿಲ್ಲ. ಇದು ಅವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಎಲ್ಲರ ರಕ್ತ ಒಂದೇ ಅದಕ್ಕೆ ಜಾತಿ, ಧರ್ಮ ಇಲ್ಲ. ಮನುಷ್ಯತ್ವ ಹಾಗೂ ಮಾನವೀಯತೆ ಕಳೆದುಕೊಳ್ಳಬಾರದು ಎಂದರು.

ಕೈಚಳಕ ನಡೆಯಲ್ಲ: ಯಾರೋ ಒಬ್ಬರು ಉತ್ತರ ಭಾರತದಿಂದ ಬಂದು ಕರ್ನಾಟಕದಲ್ಲಿ ಚಮತ್ಕಾರ ಮಾಡಲು ಸಾಧ್ಯವಿಲ್ಲ. ಕುವೆಂಪು, ಬಸವಣ್ಣ, ಕನಕದಾಸ ಹಾಗೂ ಶರೀಫ‌ರ ನಾಡಿದು. ಉತ್ತರ ಪ್ರದೇಶದ ಕೈಚಳಕ ಇಲ್ಲಿ ನಡೆಯಲ್ಲ.

Advertisement

ಅಸೂಯೆಯಿಂದ ನನ್ನ ಮೇಲೆ ದಾಳಿ ಮಾಡುತ್ತಿದ್ದಾರೆ ಎಂದು ಹೇಳಿದರು. ಕಾಗಿನೆಲೆ ಬೆಂಗಳೂರು ಶಾಖಾ ಮಠದ ಈಶ್ವರಾನಂದ ಪುರಿ ಸ್ವಾಮಿ, ಸಚಿವ ರೋಷನ್‌ ಬೇಗ್‌, ಮಾಜಿ ಮೇಯರ್‌ ವೆಂಕಟೇಶ್‌ ಮೂರ್ತಿ ಇತರರು ಇದ್ದರು.

ಬೆಂಗಳೂರಿನ ಕನಕಗಿರಿಯಲ್ಲಿ ಕನಕ ಭವನ ನಿರ್ಮಾಣಕ್ಕೆ ಸಂಬಂಧಿಸಿದ ಪ್ರಸ್ತಾವನೆ ಸಿದ್ಧಪಡಿಸಿ, ಸರ್ಕಾರಕ್ಕೆ ಸಲ್ಲಿಸಿ. ಭವನ ನಿರ್ಮಾಣಕ್ಕೆ ಬೇಕಾದ ಎಲ್ಲಾ ರೀತಿಯ ವ್ಯವಸ್ಥೆಯನ್ನು ಸರ್ಕಾರದಿಂದ ಮಾಡಲಾಗುತ್ತದೆ.
-ಸಿದ್ದರಾಮಯ್ಯ, ಮುಖ್ಯಮಂತ್ರಿ

ಕನಕದಾಸರು ಸಮಾಜ ಸುಧಾರಕ: ಕನಕದಾಸರು ಸಂತ ಮಾತ್ರವಲ್ಲ ಬಹುಮುಖ ವ್ಯಕ್ತಿತ್ವದ ದಾರ್ಶನಿಕ. ಅವರನ್ನು ವಿಶ್ವಮಾನವ ಎಂದು ಗುರುತಿಸಿದ್ದಾರೆ. ಸಮಾಜ ಸುಧಾರಕರಾಗಿ, ಸಾಹಿತಿಯಾಗಿ ಜಾತಿ ವ್ಯವಸ್ಥೆ ಗಟ್ಟಿಯಾಗಿದ್ದ ಕಾಲದಲ್ಲಿ ಅದನ್ನು ವಿರೋಧಿಸಿ ಜನರಲ್ಲಿ ಏಕತೆ ಮೂಡಿಸಿದ್ದಾರೆ. ಮೇಲು ಕೀಳು ಬಡವ ಎನ್ನುವುದು ಜನರ ಮಧ್ಯೆ ಗಟ್ಟಿಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next