ಹೊಸದಿಲ್ಲಿ: ಖಲಿಸ್ಥಾನ ಉಗ್ರರ ಬೆದರಿಕೆಯನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಭಾರತ ಸರಕಾರದ ಜತೆಗೆ ನಿಕಟ ಸಂಪರ್ಕ ಇರಿಸಿಕೊಳ್ಳಲಾಗಿದೆ. ಯಾವುದೇ ರೀತಿಯ ಹಿಂಸೆಯನ್ನು ನಮ್ಮ ಸರಕಾರ ಒಪ್ಪಿ ಕೊಳ್ಳುವುದಿಲ್ಲ ಎಂದು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಹೇಳಿದ್ದಾರೆ.
ಜಿ20 ರಾಷ್ಟ್ರಗಳ ಸಮ್ಮೇಳನಕ್ಕಾಗಿ ಹೊಸದಿಲ್ಲಿಗೆ ಆಗಮಿಸಿದ ಬಳಿಕ “ಎಎನ್‌ಐ’ ಸುದ್ದಿ ಸಂಸ್ಥೆ ಜತೆಗೆ ಮಾತನಾಡಿದ ಅವರು ನಮ್ಮ ಸಚಿವರು ಭಾರತ ಪ್ರವಾಸ ಕೈಗೊಂಡಿದ್ದರು. ಈ ಸಂದರ್ಭದಲ್ಲಿ ಖಲಿಸ್ಥಾನ ಉಗ್ರರ ಚಟುವಟಿಕೆ ಮಟ್ಟ ಹಾಕುವ ಬಗ್ಗೆ ಮಾತುಕತೆ ನಡೆಸಲಾಗಿತ್ತು ಎಂದರು.
ಹಿಂದೂ ಎನ್ನುವೆ: ಹಿಂದೂ ಎನ್ನಲು ನನಗೆ ಹೆಮ್ಮೆಯಾಗುತ್ತಿದೆ. ಅದೇ ರೀತಿ ನನ್ನನ್ನು ಬೆಳೆಸಲಾಗಿದೆ. ಈ ಬಾರಿಯ ಭಾರತ ಪ್ರವಾಸದಲ್ಲಿ ದೇಗುಲಗಳಿಗೆ ಭೇಟಿ ನೀಡಲು ನನಗೆ ಸಾಧ್ಯ ವಾದೀತು ಎಂಬ ಭಾವನೆಯಲ್ಲಿದ್ದೇನೆ ಎಂದರು.
ಬೆಂಗಳೂರಿನಿಂದಲೇ ಮದುವೆ: ಭಾರತದ ಅಳಿಯ ಅಂತ ಕರೆಸಿಕೊಳ್ಳುವುದು ವಿಶೇಷ ಭಾವ ಉಂಟು ಮಾಡಿದೆ ಎಂದು ರಿಷಿ ಸುನಕ್‌ಗೆ ಹೇಳಿದ್ದಾರೆ. ತಮಗೆ ಬೆಂಗಳೂರಿನಿಂದಲೇ ಮದುವೆಯಾದದ್ದು ಎಂದು ಹೇಳಿದ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಭಾರತ ತನಗೆ ಅತ್ಯಂತ ಆತ್ಮೀಯವಾಗಿರುವ, ಹತ್ತಿರವಾಗಿರುವ ದೇಶ, ಅದರ ಅಳಿಯ ಅನಿಸಿಕೊಳ್ಳುವುದು ಬಹಳ ವಿಶೇಷ ಎಂದಿದ್ದಾರೆ.
ಜೈ ಸೀತಾರಾಮ್ ಎಂದು ಸ್ವಾಗತ
ಬ್ರಿಟನ್ ಪ್ರಧಾನಿ ರಿಷಿ ಸುನಕ್‌ರನ್ನು ಕೇಂದ್ರ ಸಚಿವ ಅಶ್ವಿನಿ ಚೌಬೆ ಸ್ವಾಗತಿಸಿದ್ದಾರೆ. ಈ ಸಂದರ್ಭದಲ್ಲಿ ಸಚಿವ ಚೌಬೆ ಜೈ ಸೀತಾರಾಮ್ ಎಂದು ಸ್ವಾಗತಿಸಿದರು. ಅವರಿಗೆ ರುದ್ರಾಕ್ಷಿ, ಭಗವದ್ಗೀತೆ, ಹನುಮಾನ್ ಚಾಲೀಸಾ ಪುಸ್ತಕವನ್ನು ಉಡುಗೊರೆಯಾಗಿ ನೀಡಿದ್ದಾರೆ.