ಹಳಿಯಾಳ: ರಾಮ ಮಂದಿರ ಕುರಿತು ರಾಜಕೀಯ ಮಾಡುವುದು ವಿಷಾದನೀಯ. ನಾನು ರಾಮಭಕ್ತ, ರಾಮಮಂದಿರ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದು ಕಾಂಗ್ರೆಸ್ ನ ಹಿರಿಯ ರಾಜಕಾರಣಿ ,ಮಾಜಿ ಸಚಿವ ಆರ್. ವಿ .ದೇಶಪಾಂಡೆ ಹೇಳಿದರು.
ಭಾನುವಾರ ತಮ್ಮ ಗೃಹ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಾಮನ ಆಶೀರ್ವಾದದಿಂದಲೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿದೆ. ಆದರೆ ಈ ವಿಷಯದಲ್ಲಿ ರಾಜಕೀಯ ಮಾಡುತ್ತಿರುವುದು ಅತ್ಯಂತ ವಿಷಾದನೀಯ ಎಂದು ಬೇಸರ ವ್ಯಕ್ತಪಡಿಸಿದರು.
ಪಕ್ಷ, ಸಂಘಟನೆ ಹಾಗೂ ವ್ಯಕ್ತಿ ರಾಮಮಂದಿರ ವಿಚಾರದಲ್ಲಿ ಭಾಗಿಯಾಗುತ್ತಿರುವುದು ಸರಿಯಲ್ಲ. ಇದು ದೇಶದ ಎಲ್ಲ ಜನರ ಕೊಡುಗೆಯಾಗಿದೆ. ದಿವಂಗತ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ರಾಮಮಂದಿರದ ಬೀಗ ತೆರೆದಿದ್ದರು. ಆದರೆ ರಾಮನ ಹೆಸರಿನಲ್ಲಿ ರಾಜಕೀಯ ಮಾಡಲಿಲ್ಲ ಎಂದರು.
ಸಂಸದರ ಹೇಳಿಕೆ ಬೇಜಾಬ್ದಾರಿತನದ್ದು:
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಕುರಿತು ಸಂಸದ ಅನಂತ್ ಕುಮಾರ್ ಹೆಗಡೆ ನೀಡಿರುವ ಹೇಳಿಕೆ ಬೇಜಾಬ್ದಾರಿತನದಿಂದ ಕೂಡಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಹೆಗಡೆ ಅವರು ತಮ್ಮ ಇತಿಮಿತಿಯಲ್ಲಿ ಮಾತನಾಡಬೇಕು. ಬೇಜವಾಬ್ದಾರಿತನದ ಹೇಳಿಕೆಯಿಂದ ಮತದಾರರ ಮನಸ್ಸು ಗೆಲ್ಲಲು ಸಾಧ್ಯವಿಲ್ಲ ಎಂದರು.
ಆಡಳಿತ ಸುಧಾರಣಾ ಆಯೋಗದ ಮೂಲಕ ಉತ್ತಮ ಕಾರ್ಯ ನಿರ್ವಹಿಸಲು ಪ್ರಾಮಾಣಿಕರಾಗಿ ಪ್ರಯತ್ನಿಸುತ್ತೇನೆ. ಜನಸಾಮಾನ್ಯರಿಗೆ ಅರ್ಥವಾಗುವ ಹಾಗೂ ಸರಳ ಮತ್ತು ಸುಲಭವಾಗಿ ಸೇವೆ ದೊರೆಯುವಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.