Advertisement

ನಾನೊಬ್ಬ ಕಾಮನ್‌ ಮ್ಯಾನ್‌, ಜನ ಸ್ಟಾರ್‌ ಡಮ್‌ ಕೊಟ್ಟಿದ್ದಾರಷ್ಟೇ.: ಶಿವಣ್ಣ special ಮಾತು

09:57 AM Jul 09, 2021 | Team Udayavani |

ಮಟ ಮಟ ಮಧ್ಯಾಹ್ನ… ಬಿಸಿಲ ಧಗೆ ಜೋರಾಗಿಯೇ ಇತ್ತು. ಹೆಸರಘಟ್ಟದ ಗಲ್ಲಿಯಲ್ಲಿ ಆ್ಯಕ್ಷನ್‌ ಎಪಿಸೋಡ್‌ ಫೋಟೋಶೂಟ್‌ನಲ್ಲಿದ್ದ ಶಿವರಾಜ್‌ ಕುಮಾರ್‌ ಶಾಟ್‌ ಮುಗಿಸಿಕೊಂಡು ಬಂದು ಮಾತಿಗೆ ಕುಳಿತರು. ಸಿನಿಮಾ ಬಿಡುಗಡೆಯಿಂದ ಆರಂಭವಾದ ಮಾತು ಹಲವು ಆಯಾಮಗಳನ್ನು ಪಡೆದುಕೊಂಡು ಮುಂದೆ ಸಾಗಿತು. ಆ ಮಾತುಗಳು ಇಲ್ಲಿವೆ…

Advertisement

“ಸ್ಟಾರ್ ಸಿನಿಮಾ ಬಂದ ಕೂಡಲೇ ಏನೋ ಬದಲಾವಣೆ ಆಗಿಬಿಡುತ್ತೋ ಅನ್ನೋದನ್ನು ನಾನು ನಂಬಲ್ಲ. ಸಿನಿಮಾ ಅಂದ ಮೇಲೆ ಎಲ್ಲವೂ ಒಂದೇ. ಎಲ್ಲರಿಗೂ ಸಮಾನ ಅವಕಾಶ ಕೊಡಬೇಕು. ಕೆಲವೇ ಕೆಲವು ಮಂದಿ ಸೇರಿ ಯಾರು ಬರಬೇಕು, ಯಾರು ಬರಬಾರದು ಎಂಬುದನ್ನು ನಿರ್ಧರಿಸೋದು ಸರಿಯಲ್ಲ. ಹೊಸಬರ ಸಿನಿಮಾ ಚೆನ್ನಾಗಿದ್ದರೆ ಅವರಿಗೂ ಅವಕಾಶ ಕೊಡಬೇಕು. ಎಲ್ಲರನ್ನು ಒಂದೇ ಸಮಾನವಾಗಿ ನೋಡಿದಾಗಲೇ ಚಿತ್ರರಂಗ ಬೆಳೆಯೋಕೆ ಸಾಧ್ಯ ’

– ಆಗ ತಾನೇ ತಮ್ಮ 123ನೇ ಚಿತ್ರದ ಆ್ಯಕ್ಷನ್‌ ಎಪಿಸೋಡ್‌ ಫೋಟೋ ಶೂಟ್‌ ಮುಗಿಸಿಕೊಂಡು ಬಂದು ಕುಳಿತಿದ್ದ ಶಿವರಾಜ್‌ ಕುಮಾರ್‌ ನೇರವಾಗಿ ಹೀಗೆ ಹೇಳಿದರು. ಅವರ ಮಾತಲ್ಲಿ ಒಂದು ಅರ್ಥವಿತ್ತು. ಸಿನಿಮಾ ಎಂದ ಮೇಲೆ ಎಲ್ಲವೂ ಒಂದೇ. ಕಡಿಮೆ ಬಜೆಟ್‌ನ ಸಿನಿಮಾ ಕೋಟಿಗಟ್ಟಲೇ ಬಿಝಿನೆಸ್‌ ಮಾಡಿದ ಉದಾಹರಣೆ ಇದೆ. ಕೋಟಿಗಟ್ಟಲೇ ಬಜೆಟ್‌ನ ಸಿನಿಮಾ ಇನ್ನಿಲ್ಲದಂತೆ ನೆಲಕಚ್ಚಿದ್ದು ಇದೇ. ಅದೇ ಕಾರಣದಿಂದ ಸ್ಟಾರ್‌ ಸಿನಿಮಾ, ಹೊಸ ಬರಸಿನಿಮಾ ಎಂದು ನೋಡುವುದನ್ನು ಬಿಡಬೇಕು ಎನ್ನುವುದು ಶಿವಣ್ಣ ಮಾತು. ಶೇ 50 ಸೀಟು ಭರ್ತಿಯೊಂದಿಗೆ ಚಿತ್ರ ಮಂದಿರಕ್ಕೆ ಅವಕಾಶ ಕೊಟ್ಟರೆ ಶಿವಣ್ಣ ಅವರ “ಭಜರಂಗಿ-2′ ಬರುತ್ತಾ ಎಂಬ ಕುತೂಹಲ ಸಹಜ. ಇದಕ್ಕೆ ಉತ್ತರಿಸುವ ಶಿವಣ್ಣ, “ಇದನ್ನು ನಾನು ನಿರ್ಧರಿಸೋದಕ್ಕಾಗೋದಿಲ್ಲ. ಆ ಸಿನಿಮಾ ನಿರ್ಮಾಪಕರು ನಿರ್ಧರಿಸಬೇಕು. ಶೇ 50 ಅವರಿಗೆ ಓಕೆ ಅಂದರೆ ಬರಲಿ. ಇದರಲ್ಲಿ ನನ್ನದೇನು ಇಲ್ಲ. ಎಲ್ಲವೂ ಅವರಿಗೆ ಬಿಟ್ಟಿದ್ದು’ ಎಂದರು.

ಇದನ್ನೂ ಓದಿ:ಪ್ರಾಯಶಃ ಎಂಬ ಕಿಲ್ಲಿಂಗ್ ಸ್ಟೋರಿ: ಕೃಷ್ಣಾ ಭಟ್, ಶೈನ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ

ಮಾತು ಮುಂದುವರೆಯಿತು. ಇತ್ತೀಚೆಗೆ ಅತೀ ಹೆಚ್ಚು ದಿನ ಶೂಟಿಂಗ್‌ ಮಾಡುವ ಟ್ರೆಂಡ್‌ ಅನ್ನು ಶಿವಣ್ಣ ಗಮನಿಸಿದ್ದಾರೆ. “ನಿಮ್ಮ ಕಥೆಗೆ ಅಗತ್ಯ ಎಷ್ಟಿದೆಯೋ ಅಷ್ಟು ದಿನ ಶೂಟಿಂಗ್‌ ಮಾಡಿ. ಅದು ಬಿಟ್ಟು, ಶೋಕಿಗಾಗಿ 100, 150 ದಿನ ಶೂಟಿಂಗ್‌ ಮಾಡಬೇಡಿ. ರಾಜಮೌಳಿ, ಶಂಕರ್‌ ಮಾಡ್ತಾರೆ ನಾವ್ಯಾಕೆ  ಮಾಡಬಾರದು ಎಂದು ಮಾಡಬೇಡಿ. ಸಣ್ಣ ಬಜೆಟ್‌ ನಲ್ಲೂ ಒಳ್ಳೆಯ ಸಿನಿಮಾ ಮಾಡಬಹುದು. ಅದೇ ಕಾರಣಕ್ಕಾಗಿ ನಾನೀಗ ಅನಗತ್ಯವಾಗಿ ನಿರ್ದೇಶಕರು ಶೂಟ್‌ ಮಾಡಲು ಪ್ಲ್ರಾನ್‌ ಮಾಡಿಕೊಂಡರೆ ಬೇಡ ಎನ್ನು ತ್ತೇನೆ. ಸುಖ ಸುಮ್ಮನೆ ಯಾವುದೋ  ದೂರದ ಊರಿಗೆ ಹೋಗಿ ಎರಡು ಶಾಟ್‌ ತೆಗೆದುಕೊಂಡು ಬಂದು ನಿರ್ಮಾಪಕರಿಗೆ ಹೊರೆ ಮಾಡುವ ಬದಲು ಅದನ್ನು ಇಲ್ಲೇ ಎಲ್ಲೋ ಹತ್ತಿರದಲ್ಲಿ ಪ್ಲ್ರಾನ್‌ ಮಾಡಿ ಎನ್ನುತ್ತೇನೆ’ ಎಂದು ನಿರ್ಮಾಪಕರ ಬಗೆಗಿನ ಕಾಳಜಿ ವ್ಯಕ್ತಪಡಿಸತ್ತಾರೆ.

Advertisement

ನಾನೊಬ್ಬ ಕಾಮನ್‌ ಮ್ಯಾನ್‌

ಕನ್ನಡ ಚಿತ್ರರಂಗಕ್ಕೆ ಸಮಸ್ಯೆ ಬಂದರೂ ಈಗ ಮೊದಲು ಹೋಗೋದು ಶಿವಣ್ಣ ಬಳಿ. “ಶಿವಣ್ಣ ನೀವು ಹೇಳಿದರೆ ಆಗಿಬಿಡುತ್ತೆ’ ಎಂಬ ಮಾತನ್ನು ಶಿವಣ್ಣ ಕೇಳುತ್ತಲೇ ಇರುತ್ತಾರೆ. ಈ ಬಗ್ಗೆ ಮಾತನಾಡುವ ಶಿವಣ್ಣ, “ಶಿವಣ್ಣ ನೀವು ಹೇಳಿದರೆ ಆಗಿ ಬಿಡುತ್ತೆ’ ಅಂತಾರೆ. ನಾನು ಅದನ್ನು ನಂಬಲ್ಲ. ಏಕೆಂದರೆ ನಾನೊಬ್ಬ ಕಾಮನ್‌ಮ್ಯಾನ್‌. ಜನ ಸ್ಟಾರ್‌ಡಮ್‌ ಕೊಟ್ಟಿದ್ದಾರಷ್ಟೇ. ಅದೊಂದು ಕಾಲವಿತ್ತು. ರಾಜ್‌ಕುಮಾರ್‌ ಹೇಳಿದರೆ ಆಗುತ್ತೆ ಅನ್ನೋದು. ಆದರೆ, ನಾನು ರಾಜ್‌ ಕುಮಾರ್‌ ಅಲ್ಲ, ಅವರ ಸ್ಥಾನದಲ್ಲಿ ನನ್ನನ್ನು ನಿಲ್ಲಿಸಬೇಡಿ. ಯಾವುದೇ ಸಮಸ್ಯೆ ಇದ್ದರೂ ಎಲ್ಲರೂ ಒಟ್ಟಾಗಿ ಹೋರಾಡೋಣ. ಒಗ್ಗಟ್ಟಿನಲ್ಲಿ ಇದ್ದರೆ ಎಲ್ಲವೂ ಸಾಧ್ಯ. ಅದು ಬಿಟ್ಟು ಒಬ್ಬನಿಂದ ಸಾಧ್ಯವಿಲ್ಲ’ ಎಂದು ನೇರವಾಗಿ ಹೇಳುತ್ತಾರೆ ಶಿವಣ್ಣ.

ಲವ್‌ ಸ್ಟೋರಿಯಲ್ಲಿ ಶಿವಣ್ಣ

ಶಿವಣ್ಣ ಔಟ್‌ ಅಂಡ್‌ ಔಟ್‌ ಲವ್‌ ಸ್ಟೋರಿ ಮಾಡಿ ತುಂಬಾನೇ ವರ್ಷವಾಗಿದೆ. ಈಗ ಮತ್ತೂಮ್ಮೆ ಲವ್‌ಸ್ಟೋರಿಯಲ್ಲಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಶಿವರಾಜ್‌ ಕುಮಾರ್‌ ಅವರ 124ನೇ ಚಿತ್ರವನ್ನು ತೆಲುಗಿನ ರಾಮ್‌ ಧೂಲಿಪುಡಿ ನಿರ್ದೇಶಿಸುತ್ತಿದ್ದು, ಈ ಚಿತ್ರ ಲವ್‌ ಸ್ಟೋರಿಯಾಗಿದೆ. ಹಾಗಂತ ರೆಗ್ಯುಲರ್‌ ಲವ್‌ಸ್ಟೋರಿಯಲ್ಲ. ಅದೇ ಕಾರಣದಿಂದ ಶಿವಣ್ಣ ಒಪ್ಪಿಕೊಂಡಿದ್ದಾರೆ. “ಒಂದು ಲವ್‌ ಸ್ಟೋರಿ ಸಿನಿಮಾ ಒಪ್ಪಿಕೊಂಡಿದ್ದೇನೆ. ರೆಗ್ಯುಲರ್‌ ಪ್ಯಾಟರ್ನ್ ಬಿಟ್ಟಿರುವ ಕಥೆ. ಚಿತ್ರದ ಹಾಡುಗಳು ಕೂಡಾ ಭಿನ್ನವಾಗಿರಲಿದೆ’ ಎನ್ನುತ್ತಾರೆ. ಜೊತೆಗೆ ಇಷ್ಟು ವರ್ಷಗಳಲ್ಲಿ ಬಹುತೇಕ ಪಾತ್ರಗಳನ್ನು, ಕಥೆಗಳನ್ನು ಮಾಡಿರುವ ಶಿವಣ್ಣ ಈಗ ಸಾಕಷ್ಟು ಚೂಸಿಯಾಗಿದ್ದಾರೆ. ಅದೇ ಕಾರಣದಿಂದ ರೆಗ್ಯುಲರ್‌ ಕಥೆಯಾದರೆ ಮಾಡಲ್ಲ ಎಂದು ನೇರವಾಗಿ ಹೇಳುತ್ತಾರೆ.

ಇನ್ನು, ಲಾಕ್‌ ಡೌನ್‌ನಲ್ಲಿ ಶಿವಣ್ಣ ಎಸ್‌.ನಾರಾಯಣ್‌, ಹರ್ಷ, ಆರ್‌.ಚಂದ್ರು ಅವರ ಸಹಾಯಕರೊಬ್ಬ ಹಾಗೂ “ಮಮ್ಮಿ’ ಲೋಹಿತ್‌ ಸೇರಿದಂತೆ ಮೂರ್ನಾಲ್ಕು ಜನರ ಕಥೆ ಕೇಳಿದ್ದಾರೆ. ಜೊತೆಗೆ ಲಾಕ್‌ ಡೌನ್‌ನಲ್ಲಿ ಸಾಕಷ್ಟು ದೇಶ-ವಿದೇಶಗಳ ವೆಬ್‌ ಸೀರಿಸ್‌ಗಳನ್ನು ನೋಡಿದ್ದಾರೆ. “ಸಿನಿಮಾ, ವೆಬ್‌ ಸೀರಿಸ್‌ ಟ್ರೆಂಡ್‌ ತುಂಬಾ ಬದಲಾಗಿದೆ ಮತ್ತು ಮುಂದೆ ಹೋಗಿದೆ. ಅದರಲ್ಲೂ ಹಾಲಿವುಡ್‌ ವೆಬ್‌ ಸೀರಿಸ್‌ ನೋಡಿದಾಗ “ಅಬ್ಟಾ’ ಅನ್ನುವಂತಿದೆ’ ಎನ್ನುವುದು ಶಿವಣ್ಣ ಮಾತು.

ಲಾಕ್‌ ಡೌನ್‌ನಲ್ಲಿ ಶಿವಣ್ಣ ದಿನಕ್ಕೆ ಎರಡೂವರೆ ಗಂಟೆ ವರ್ಕೌಟ್‌ ಮಾಡುತ್ತಿದ್ದಾರಂತೆ. “ಮನೆಯಲ್ಲಿ ಕೂತು ಎಲ್ಲಿ ದಪ್ಪಗಾಗಿ ಬಿಡ್ತೀನೋ ಅನ್ನೋ ಭಯ ಕಾಡ್ತಾ ಇತ್ತು. ಅದಕ್ಕಾಗಿ ವರ್ಕೌಟ್‌ ಮಾಡುತ್ತಿದ್ದೆ. ಕಲಾವಿದರಿಗೆ ಆರೋಗ್ಯ ಕಾಳಜಿ ತುಂಬಾ ಮುಖ್ಯ. ತೆರೆ ಮೇಲೆ ಎಷ್ಟು ಚೆನ್ನಾಗಿ ಕಾಣ್ತೀವಿ ಅಂತ ನೋಡ್ತಾರೆ. ಹೀಗಿರುವಾಗ ವರ್ಕೌಟ್‌ ಮಾಡಲೇಬೇಕು’ ಎನ್ನುತ್ತಾರೆ ಶಿವಣ್ಣ.

ರವಿಪ್ರಕಾಶ್ ರೈ

Advertisement

Udayavani is now on Telegram. Click here to join our channel and stay updated with the latest news.

Next