Advertisement

ನನ್ನಲ್ಲೂ ದಾಖಲೆಗಳಿವೆ… ನಿಮ್ಮ‌ಕಂಪನಿಗಳ ಕತೆ ಬಿಚ್ಚಿಡಬೇಕೇ? ಅಶ್ವತ್ಥನಾರಾಯಣ ವಿರುದ್ಧ HDK

12:23 PM Aug 10, 2022 | Team Udayavani |

ಬೆಂಗಳೂರು: ಉನ್ನತ ಶಿಕ್ಷಣ ಸಚಿವ ಡಾ.ಸಿ.ಅಶ್ವತ್ಥನಾರಾಯಣ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಸಿಎಂ‌ ಎಚ್. ಡಿ.ಕುಮಾರಸ್ವಾಮಿ ನಿಮ್ಮ‌ಕಂಪನಿಗಳ ಕತೆ ಬಿಚ್ಚಿಡಬೇಕೇ ? ಎಂದು ಪ್ರಶ್ನಿಸಿದ್ದಾರೆ.

Advertisement

ಇದನ್ನೂ ಓದಿ:ಸಿದ್ದರಾಮೋತ್ಸವದಂತಹ 10 ಕಾರ್ಯಕ್ರಮ ಮಾಡುವ ಶಕ್ತಿ ಬಿಜೆಪಿಗಿದೆ: ಸಚಿವ ಎಸ್.ಟಿ ಸೋಮಶೇಖರ್

ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ನಕಲಿ ಸರ್ಟಿಫಿಕೇಟ್‌ ರಾಜʼ ನಕಲಿ ಸರ್ಟಿಫಿಕೇಟ್‌ ಶೂರʼ ನನ್ನನ್ನು ಹುಡುಕುತ್ತಿದ್ದಾರೆ! ಎಲ್ಲಿದ್ಯಪ್ಪ ಕುಮಾರಸ್ವಾಮಿ? ಎಂದು ಕೇಳಿದ್ದಾರೆ. ಸದನದಲ್ಲೂ ಕಾಣಿಸಿಲ್ಲವಂತೆ, ರಾಮನಗರದಲ್ಲೂ ಕಂಡಿಲ್ಲವಂತೆ!! ಕಣ್ಣಿಗೆ ಕಾಮಾಲೆಯಾದರೂ ಬಂದಿರಬೇಕು, ಜಾಣ ಕುರುಡಾದರೂ ಇರಬೇಕು ಎಂದು ವ್ಯಂಗ್ಯವಾಡಿದ್ದಾರೆ.

ಕರಾವಳಿ ಕೊಲೆಗಳು, ಮಳೆ ನೆರೆ ಚರ್ಚೆಗೆ ಅಧಿವೇಶನ ಕರೆಯಬೇಕೆಂದು ಒತ್ತಾಯಿಸಿದ್ದೇನೆ, ನಿಜ. ಉನ್ನತ ಶಿಕ್ಷಣ ಸಚಿವರಿಗೇಕೆ ಉರಿ? ಉನ್ನತ ಶಿಕ್ಷಣದ ಹುಳುಕು ಹೊರ ಬಂದಾವೆಂಬ ಭಯವೇ? ನನ್ನಲ್ಲೂ ದಾಖಲೆಗಳಿವೆ, ಬಿಚ್ಚಿದರೆ ಅವೇ ʼಸರ್ಟಿಫಿಕೇಟ್‌ ಕೋರ್ಸ್‌ʼಗಿಂತ ಬೃಹತ್‌ ಚಾಪ್ಟರ್‌ 1, ಚಾಪ್ಟರ್ 2, ಚಾಪ್ಟರ್‌ 3 ಆಗುತ್ತವೆ; ಬಿಚ್ಚಲೇ? ಎಂದು ಪ್ರಶ್ನಿಸಿದ್ದಾರೆ.

ಕಲಾಪವೆಂದರೆ ಮೈ ಬೆಚ್ಚಗಾಗುತ್ತಾ ಉನ್ನತ ಶಿಕ್ಷಣ ಸಚಿವರೇ? ನಿಮ್ಮ ಕೌಶಲ್ಯತೆ ಗೊತ್ತಿದೆ. ಅಕ್ರಮ ಮುಚ್ಚಿಕೊಳ್ಳಲು ಅಕ್ರಮದ ದಾಖಲೆಗಳಿದ್ದ ಬಿಬಿಎಂಪಿ ಕಟ್ಟಡಕ್ಕೇ ಬೆಂಕಿ ಹಾಕಿಸಿದ್ದಾ? ಆಪರೇಷನ್‌ ಕಮಲದಲ್ಲೂ ಕುಶಲತೆ? ಕೋಟಿ ಕೋಟಿ ಹಣ ತುಂಬಿಸಿಕೊಂಡು ಹೋಗಿ ಶಾಸಕರ ಮನೆಗಳಲ್ಲಿ ಇಟ್ಟು ಬರುವುದಾ? ಕೌಶಲ್ಯ ಮಂತ್ರಿಯಾಗಿದ್ದಕ್ಕೂ ಸಾರ್ಥಕ ಎಂದು ವ್ಯಂಗ್ಯವಾಡಿದ್ದಾರೆ.

Advertisement

ನಾನು ವಿರೋಧ ಪಕ್ಷದ ನಾಯಕ. ಅಧಿವೇಶನಕ್ಕೆ ಆಗ್ರಹಿಸುವುದು ನನ್ನ ಹಕ್ಕು. ಸದನದಲ್ಲಿ ಉತ್ತರಿಸುವ ಯೋಗ್ಯತೆ ಇದ್ದರೆ ಹಾರಿಕೆ ಉತ್ತರಗಳ ಮೂಲಕ ಜಾರಿಕೊಳ್ಳುವ ಯತ್ನವೇಕೆ? ಕಲಾಪದಲ್ಲಿ ನನ್ನ ಮೌಲಿಕ ಪಾಲ್ಗೊಳ್ಳುವಿಕೆ ಎಷ್ಟು? ನಿಮ್ಮದೆಷ್ಟು? ತುಲನೆ ಮಾಡಿಕೊಳ್ಳಿ. ಕಾಮಾಲೆ ಕಣ್ಣುಗಳ ಪೊರೆ ತೆಗೆದು ನೋಡಿ ಅಶ್ವತ್ಥನಾರಾಯಣ ಎಂದು ಕಿಡಿಕಾರಿದ್ದಾರೆ.

ನನ್ನ ಸರಕಾರವನ್ನು ತೆಗೆಯಲು ಸಮಾಜಘಾತುಕ ಶಕ್ತಿಗಳ ಜತೆ ಕೈ ಮಿಲಾಯಿಸಿದ್ದು, ಕ್ರಿಕೆಟ್‌ ಬೆಟ್ಟಿಂಗ್‌ ದಂಧೆಕೋರರ ಜತೆ ಶಾಮೀಲಾಗಿದ್ದು, ಹಣದ ಹೊಳೆ ಹರಿಸಿದ್ದು ಎಲ್ಲವೂ ಗೊತ್ತಿದೆ. ಧೈರ್ಯ ಇದ್ದರೆ ಬಹಿರಂಗ ಚರ್ಚೆಗೆ ಬನ್ನಿ, ಬಿಚ್ಚಿಡಬೇಕು ಎಂದರೆ ಎಲ್ಲವನ್ನೂ ಬಿಚ್ಚಿಡುತ್ತೇನೆ. ಪಠ್ಯ ಪರಿಷ್ಕರಣೆ ಮಾಡಿದಿರಲ್ಲ. ದಾದಿಯರ ನಕಲಿ ಸರ್ಟಿಫಿಕೇಟ್‌ ಸೃಷ್ಟಿ ಹೇಗೆ? ಆಪರೇಷನ್‌ ಕಮಲ ಮಾಡುವುದು ಹೇಗೆ? ಕದ್ದುಮುಚ್ಚಿ ಹಣ ಸಾಗಿಸಿ ಶಾಸಕರ ಮನೆಗಳಲ್ಲಿ ಇಟ್ಟು ಬರುವುದು ಹೇಗೆ? ಇದೆಲ್ಲವನ್ನು ಪಠ್ಯದಲ್ಲಿ ಸೇರಿಸಿದ್ದಿದ್ದರೆ ಮುಂದಿನ ಯುವಜನರಿಗೂ ನಿಮ್ಮಂತೆಯೇ ಆಗುವ ಭಾಗ್ಯ ಸಿಗುತ್ತಿತ್ತು? ಅಲ್ಲವೇ ಆಪರೇಷನ್‌ ಅಶ್ವತ್ಥನಾರಾಯಣ ಎಂದು ಟೀಕಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next