ಮುಂಬಯಿ : ವಾಹನ ಪ್ರಿಯರ ಕಣ್ಮನಗಳನ್ನು ಅಪಾರವಾಗಿ ಸೆಳೆಯುತ್ತಿರುವ, ಭಾರತದಲ್ಲಿನ ಅತ್ಯಂತ ಯಶಸ್ವೀ ಮತ್ತು ಜನಪ್ರಿಯ ಎಸ್‌ಯುವಿ ಕಾರುಗಳ ಪೈಕಿ ಹ್ಯುಂಡೈ ಕಂಪೆನಿಯ ಕ್ರೇಟಾ ಮುಂಚೂಣಿಯಲ್ಲಿದೆ. ಆದರೆ ನೀವಿದನ್ನು ಬುಕ್ ಮಾಡಿ ಡೆಲಿವರಿ ಪಡೆಯಲು 12 ವಾರ ಕಾಯಬೇಕಾಗುತ್ತದೆ !
ಅಂದ ಹಾಗೆ ಈ ದರ್ಜೆಯ ಎಸ್‌ಯುವಿ ಕಾರುಗಳ ಪೈಕಿ ಕ್ರೇಟಾ, ಡೆಲಿವರಿ-ಅವಧಿಯು ಅತ್ಯಂತ ದೀರ್ಘವಾಗಿರುವುದು ಅದಕ್ಕಿರುವ ಬೇಡಿಕೆಗೆ ಸಾಕ್ಷಿಯಾಗಿದೆ ಎಂದು ಕಂಪೆನಿ ಹೇಳಿಕೊಂಡಿದೆ.
ಕ್ರೇಟಾ ಕಾರು ಡೆಲಿವರಿ ಪಡೆಯಲು ಇರುವ ಕಾಯುವಿಕೆ ಅವಧಿಯು ಎಲ್ಲ ನಗರಗಳಲ್ಲಿ ಏಕ ಪ್ರಕಾರವಾಗಿಲ್ಲ. ಉದಾಹರಣೆಗೆ ಚೆನ್ನೈ, ಕೊಯಮುತ್ತೂರು ಮತ್ತು ಪಟ್ನಾದಲ್ಲಿ ಎರಡು ವಾರಗಳ ಕಾಯುವಿಕೆಯಲ್ಲಿ ಕ್ರೇಟಾ ಪಡೆಯಬಹುದಾಗಿದೆ.
ಆದರೆ ಹೊಸದಿಲ್ಲಿ, ಜೈಪುರ, ಗುರ್ಗಾಂವ್ ಲಕ್ನೋ, ನೋಯ್ಡಾ ಮತ್ತು ಗಾಜಿಯಾಬಾದ್‌ನಲ್ಲಿ ಕ್ರೇಟಾ ಬುಕ್ ಮಾಡಿದರೆ ಎಂಟು ವಾರ ಕಾಯಬೇಕಾಗುತ್ತದೆ. ಅದೇ ಫರೀದಾಬಾದ್ ನಲ್ಲಿ 12 ವಾರಗಳ ಕಾಲ ಕಾಯಬೇಕಾಗುತ್ತದೆ.
ಮಾರುತಿ ಸುಜುಕಿಯ ಎಸ್ ಕ್ರಾಸ್, ರೆನಾಲ್ಟ್ ಡಸ್ಟರ್ ಮತ್ತು ನಿಸಾನ್ ಕಿಕ್ಸ್ ಕಾರುಗಳ ಅತ್ಯಂತ ಬಿರುಸಿನ ಸ್ಪರ್ಧೆಯ ನಡುವೆಯೂ ಹ್ಯೂಂಡೈ ಕಂಪೆನಿಯ ಕ್ರೇಟಾ ತನ್ನ ಜನಪ್ರಿಯತೆ ಮತ್ತು ಬೇಡಿಕೆಯನ್ನು ಗಮನಾರ್ಹವಾಗಿ ಉಳಿಸಿಕೊಂಡಿದೆ ಎಂದು ಮೋಟಾರು ವಾಹನ ರಂಗದ ವಿಶ್ಲೇಷಕರು ಹೇಳುತ್ತಾರೆ.
ಕ್ರೇಟಾ ಎಸ್‌ಯುವಿ ಕಾರಿನ ಜನಪ್ರಿಯತೆ ಮತ್ತು ಅಪಾರ ಬೇಡಿಕೆಯಿಂದ ಭಾರತದಲ್ಲಿ ಕೊರಿಯ ಕಂಪೆನಿ ಹ್ಯೂಂಡೈ ಗೆದ್ದಿದೆ. ಆದರೂ ಅದು ಈ ಕಾರಿನ ಗುಣಮಟ್ಟ ಮತ್ತು ಲಕ್ಷಣಗಳನ್ನು ಮೇಲ್ಮಟ್ಟಕ್ಕೇರಿಸುವ ಯೋಜನೆಯನ್ನು ಈಗಾಗಲೇ ಆರಂಭಿಸಿದೆ.
ಈಚೆಗಷ್ಟೇ ಹ್ಯೂಂಡೈ ಕಂಪೆನಿ ಐಎಕ್ಸ್25 ಪರಿಕಲ್ಪನೆಯ ವಿನೂತನ ಆವೃತ್ತಿಯನ್ನು 2019ರ ಆಟೋ ಶಾಂಘೈನಲ್ಲಿ ಅನಾವರಣ ಮಾಡಿದೆ. ಈ ಸುಧಾರಿತ ಮೇಲ್ಮಟ್ಟದ ಕ್ರೇಟಾ ಆವೃತಿಯನ್ನು ಕಂಪೆನಿಯು ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆ ಮಾಡಲಿದೆ ಎಂದು ಕಂಪೆನಿ ಮೂಲಗಳು ತಿಳಿಸಿವೆ.
ಅಂತೆಯೇ ಮುಂದಿನ ತಲೆಮಾರಿನ ಕ್ರೇಟಾ ಎಸ್‌ಯುವಿ 2020ರಲ್ಲಿ ಮಾರುಕಟ್ಟೆಗೆ ನುಗ್ಗಿ ಬರಲಿದೆ ಎಂದು ಕಂಪೆನಿ ಹೇಳಿದೆ.