Advertisement

ಹೈಕ ಅಭಿವೃದ್ಧಿ ನಿಷ್ಕಾಳಜಿಗೆ ಹೋರಾಟವೇ ಮದ್ದು

10:03 AM Jul 09, 2018 | Team Udayavani |

ಕಲಬುರಗಿ: ಹೈದ್ರಾಬಾದ ಕರ್ನಾಟಕ ಎಂದ ತಕ್ಷಣ ಹಿಂದುಳಿದ ಎನ್ನುವ ಮಾತು ಕೇಳಿಬರುತ್ತದೆ. ಈ ಪಟ್ಟ ಹೋಗಬೇಕಾದರೆ ಹೋರಾಟವೇ ಮದ್ದಾಗಿದೆ. 371ನೇ ಕಲಂ ಜಾರಿಗೆ ತರಲು ಮಾಡಿದ ಹೋರಾಟದ ಮಾದರಿಯಲ್ಲಿ ಮತ್ತೂಂದು ಬೃಹತ್‌ ಹೋರಾಟದ ಅಗತ್ಯವಿದೆ ಎಂದು ಗೌಹಾಟಿ ರಾಷ್ಟ್ರೀಯ ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೊ| ಜೆ.ಎಸ್‌. ಪಾಟೀಲ ಹೇಳಿದರು.

Advertisement

ನಗರದ ಸೂಪರ್‌ ಮಾರ್ಕೆಟ್‌ನ ಹೈಕ ಕೈಗಾರಿಕೆ ಮತ್ತು ವಾಣಿಜ್ಯ ಮಂಡಳಿ ಸಭಾಂಗಣದಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿವರೆಗೆ ಹೈಕ ಪ್ರದೇಶ ಅಭಿವೃದ್ಧಿ ಹೊಂದದೇ ಇರುವುದಕ್ಕೆ ಎಲ್ಲರ ನಿಷ್ಕಾಳಜಿಯೇ ಕಾರಣವಾಗಿದೆ. ಹೀಗಾಗಿ ಹಿಂದುಳಿದ ಹೈಕ ಸಮಗ್ರ ಅಭಿವೃದ್ಧಿಗಾಗಿ ಬುದ್ಧಿ ಜೀವಿಗಳು, ವಿಚಾರವಂತರು ಬೃಹತ್‌ ಪ್ರಮಾಣದ ಹೋರಾಟ ಕೈಗೊಳ್ಳುವುದು ಅಗತ್ಯವಾಗಿದೆ ಎಂದರು.ದಕ್ಷಿಣ ಕರ್ನಾಟಕದ ಅಭಿವೈದ್ಧಿಗೆ ಹೋಲಿಸಿದರೆ ಹೈಕದಲ್ಲಿ ಯಾವುದೇ ರೀತಿಯಲ್ಲಿ ಅಭಿವೃದ್ಧಿ ಆಗಿಲ್ಲ. ಅಸಮಾನತೆ ನಿವಾರಣೆಗೆ ಸಂವಿಧಾನದ 371(ಜೆ)ನೇ ಕಲಂಗೆ ತಿದ್ದುಪಡಿ ತಂದು ವಿಧೇಯಕ ಜಾರಿ ಮಾಡಿದರೂ ಸಮರ್ಪಕ ಅನುಷ್ಠಾನಕ್ಕೆ ಬಾರದೇ ಇದ್ದುದರಿಂದ ಹಿಂದುಳಿದ ಹಣೆಪಟ್ಟಿ ಇನ್ನೂ ಹೋಗಿಲ್ಲ. ಹೈಕದ 371(ಜೆ)ನೇ ಕಲಂನ ವಿಶೇಷ ಕೋಶದ ಕಚೇರಿಯು ಬೆಂಗಳೂರಿನಲ್ಲಿ ಇರುವುದರಿಂದ ಈ ಭಾಗದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆ ಆಗುತ್ತಿದೆ. ಆದ್ದರಿಂದ ಆ ಕೇಂದ್ರ ಕಚೇರಿಯನ್ನು ಕಲಬುರ್ಗಿಗೆ ಸ್ಥಳಾಂತರಿಸಬೇಕು ಎಂದು ಸಲಹೆ ಮಾಡಿದರು.

ಈ ಭಾಗದ ಕೈಗಾರಿಕೆಗಳ ಅಭಿವೃದ್ಧಿಗಾಗಿ ವಿಮಾನ ನಿಲ್ದಾಣ ಅತ್ಯಂತ ಅಗತ್ಯವಾಗಿದೆ. ವಿಮಾನಗಳ ಹಾರಾಟ ಕೂಡಲೇ ಆರಂಭವಾಗಬೇಕು. ಅದೇ ರೀತಿ ಹೈಕದ ಜಿಲ್ಲೆಗಳು ಹಲವಾರು ರೈಲ್ವೆ ಯೋಜನೆಗಳಲ್ಲಿ ಮೂರು ರೈಲ್ವೆ ವಿಭಾಗಗಳಲ್ಲಿ ಹರಿದು ಹಂಚಿ ಹೋಗಿವೆ. ಆಡಳಿತಾತ್ಮಕ ತೊಂದರೆಗಾಗಿ ಈ ಹಿಂದಿನ ಯುಪಿಎ ಸರ್ಕಾರವು ಕಲಬುರ್ಗಿಗೆ ರೈಲ್ವೆ ವಿಭಾಗೀಯ ಕಚೇರಿ ಸ್ಥಾಪಿಸಲು ಕ್ರಮ ಕೈಗೊಂಡಿದೆ.

 ಆ ಕಾಮಗಾರಿಯೂ ಸಹ ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ. ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಹೇಳಿದರು. 

ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಜೋಳ, ತೊಗರಿ ಮುಂತಾದ ಉತ್ಪನ್ನಗಳಿಗೆ ಬೇಡಿಕೆ ಇದೆ. ನಮ್ಮ ನೆಲದ ವಿಶೇಷ ಉತ್ಪನ್ನಗಳಾದ ರೊಟ್ಟಿ, ಶೇಂಗಾ ಹಿಂಡಿಯಂತಹ ಸ್ಥಳೀಯ ಆಹಾರಗಳು ಜಾಗತಿಕ ಮಟ್ಟದಲ್ಲಿ ಭೌಗೋಳಿಕವಾಗಿ ಗುರುತಿಸಬೇಕು. ಆ ದಿಸೆಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಸ್ಥಳೀಯ ವಿಶೇಷ ಉತ್ಪನ್ನಗಳು ಪೈಪೋಟಿ ಒಡ್ಡುವಂತಹ ಕೆಲಸ ಆಗಬೇಕು ಎಂದು ಹೇಳಿದರು.

Advertisement

ಕೇಂದ್ರದ ಯೋಜನೆಯಾದ ರಾಷ್ಟ್ರೀಯ ಹೂಡಿಕೆ ಮತ್ತು ತಯಾರಿಕೆ ವಲಯ (ನಿಮ್ಸ) ಕ್ಕೆ ಕಲಬುರ್ಗಿಯಲ್ಲಿ ಸುಮಾರು 12000 ಎಕರೆ ಜಮೀನು ಗುರುತಿಸಲಾಗಿದೆ. ಆದರೆ ಕಾರ್ಯ
ಚಟುವಟಿಕೆ ಆರಂಭವಾಗಿಲ್ಲ. ಆ ಕೆಲಸವೂ ಸಹ ತ್ವರಿತವಾಗಿ ಆಗಬೇಕು ಎಂದರು. 

ಗೌಹಾತಿಯಲ್ಲಿನ ರಾಷ್ಟ್ರೀಯ ವಿಶ್ವವಿದ್ಯಾಲಯವನ್ನು ದೇಶದಲ್ಲಿಯೇ ಒಂದು ಮಾದರಿ ವಿಶ್ವವಿದ್ಯಾಲಯವನ್ನಾಗಿ ಮಾಡಲು ರಚನಾತ್ಮಕ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
 
ಎಚ್‌ಕೆಸಿಸಿಐ ಅಧ್ಯಕ್ಷ ಅಮರನಾಥ ಸಿ.ಪಾಟೀಲ, ಶಶಿಕಾಂರ ಬಿ. ಪಾಟೀಲ, ಶರಣಬಸಪ್ಪ ಪಪ್ಪಾ, ಆನಂದ ದಂಡೋತಿ ಹಾಗೂ ಮತ್ತಿತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next