Advertisement

ಜಲಕೃಷಿ: ಹೈನುಗಾರರ ಆಶಾಕಿರಣ 

06:10 AM Jun 11, 2018 | |

ಉಡುಪಿ: ಇರುವುದು  ಸ್ವಲ್ಪ ಜಾಗ, ಹೈನುಗಾರಿಕೆ ಮಾಡಬೇಕೆಂಬ ಉತ್ಕಟ ಆಸೆ ಇದ್ದರೂ ಜಾಗದ ಕೊರತೆ, ಮೇವಿನ ಕೊರತೆ, ಈ ಎಲ್ಲ ಸಮಸ್ಯೆಗಳಿಂದ ಹೈರಾಣಾದವರು ಹೈನುಗಾರಿಕೆ ಸಹವಾಸವೇ ಬೇಡ ಎಂದುಕೊಂಡಿದ್ದವರಿಗೆ ಜಲ ಕೃಷಿಯಲ್ಲಿ  ಪರಿಹಾರ ಸಿಕ್ಕಿದೆ. 45 ಸಾವಿರ ರೂ. ಆರಂಭಿಕ ಹೂಡಿಕೆಯಿಂದ, ಪ್ರತಿ ವಾರ ಸುಮಾರು 100 ಚದರ ಅಡಿ ಪ್ರದೇಶದಲ್ಲಿ 100 ಕೆ.ಜಿ. ಮೇವು ಉತ್ಪಾದಿಸಬಹುದು ಈ ಜಲ ಕೃಷಿ ವಿಧಾನದಲ್ಲಿ. 

Advertisement

ಏನಿದು ಜಲ ಕೃಷಿ!
ಮಣ್ಣಿನ ಬಳಕೆಯಿಲ್ಲದೆ ಸಸ್ಯಗಳನ್ನು ಬೆಳೆಸುವ ವಿಧಾನವಾಗಿದ್ದು, ಸಸ್ಯಗಳಿಗೆ ತೇವಾಂಶ ಮತ್ತು ಪೋಷಕಾಂಶಗಳನ್ನು ಮಾತ್ರ ಒದಗಿಸಲಾಗುತ್ತದೆ. ಇದನ್ನು ಹೈಡ್ರೋಫೋನಿಕ್‌ ವಿಧಾನವೆಂದು ಕರೆಯಲಾಗುತ್ತದೆ.ಈ ವಿಧಾನದಲ್ಲಿ ವರ್ಷದ 365 ದಿನವೂ ನಿರ್ದಿಷ್ಟ  ಪ್ರಮಾಣದ ಹಸುರು ಮೇವು ಲಭ್ಯವಾಗಲಿದ್ದು, ಹೈನುಗಾರಿಕೆಗೆ ಬಳಸುವ ಇತರ ಪೌಷ್ಟಿಕಾಹಾರಗಳನ್ನು ಕೂಡ ನಿಯಂತ್ರಿಸಬಹುದು.
 
ರಾಸುಗಳಿಗೆ ಬೇಕಾದ ಮೇವನ್ನು ಹಸುರು ಮನೆಯಲ್ಲಿ ಕೇವಲ ನೀರನ್ನು ಬಳಸಿ ಬೆಳೆಸುವ ವಿಧಾನವಾಗಿದ್ದು, ಇದಕ್ಕೆ ಕೇವಲ 100 ಚದರ ಅಡಿ ಸ್ಥಳಾವಕಾಶವಿದ್ದರೆ ಸಾಕು. ಮೆಕ್ಕೆ ಜೋಳ ಅಥವಾ ಬೇರೆ ಯಾವುದೇ ಬೀಜಗಳನ್ನು  24 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ ಮಾರನೇ ದಿನ ಅದನ್ನು ಹಸಿ ಗೋಣಿ ಚೀಲದಲ್ಲಿ ಬಿಗಿಯಾಗಿ ಕಟ್ಟಬೇಕು. ಅದಕ್ಕೆ ಪ್ರತಿ 2 ಗಂಟೆಗಳಿಗೊಮ್ಮೆ ನೀರು 2- 3 ಲೀಟರ್‌ ಹಾಕಬೇಕು.  ಮೂರನೇ ದಿನಕ್ಕೆ  ಮೊಳಕೆ ಬಂದ ಬೀಜಗಳು ಜಲಕೃಷಿ ಟ್ರೇ ನಲ್ಲಿ ಹಾಕಿ ಘಟಕದ ಒಳಗೆ ಇಡಬೇಕು. ನಾಲ್ಕನೇ ದಿನದಿಂದ 9ನೇ ದಿನದ ವರೆಗೆ ನಿರಂತರವಾಗಿ ತುಂತುರು ನೀರಾವರಿ ಟೈಮ್‌ ಸೆನ್ಸಾರ್‌ ನೀಡಬೇಕಾಗುತ್ತದೆ. 9ನೇ ದಿನ ಈ ಮೇವನ್ನು  ರಾಸುಗಳಿಗೆ ನೀಡಬಹುದು. ಪ್ರತಿ ನಿತ್ಯ ಎಷ್ಟು ಮೇವು ಬೇಕಾಗುತ್ತದೆ ಎನ್ನುವ ಆಧಾರದ ಮೇಲೆ ಯೋಜನೆ ಮಾಡಿಕೊಂಡು ಬೆಳೆಸಬೇಕಾಗುತ್ತದೆ. ಪ್ರತಿ ಕೆ.ಜಿ. ಮೇವು ಉತ್ಪಾದನೆಗೆ 2.50 ರೂ. ಖರ್ಚು ಬೀಳುತ್ತದೆ. ಇದರಿಂದ ವರ್ಷದ 365 ದಿನವೂ ರಾಸುಗಳಿಗೆ ಪೋಷಕಾಂಶಯುಕ್ತ ಹಸುರು ಹುಲ್ಲು ಸಿಗಲಿದೆ. 

ಹೈನುಗಾರರಿಗೆ ವರದಾನ
ಬೀಜಗಳ ಆಯ್ಕೆ ಮಾಡುವಾಗ ಆರೋಗ್ಯವಂತ ಬೀಜಗಳನ್ನು ಆಯ್ಕೆ ಮಾಡಬೇಕು ಮತ್ತು ಹಸುರು ಮನೆಯಲ್ಲಿ ಉಷ್ಣಾಂಶ 25ರಿಂದ 27 ಡಿಗ್ರಿಯಷ್ಟು ಇರುವ ಹಾಗೆ ನೋಡಿಕೊಳ್ಳಬೇಕು. ಕಡಿಮೆ ಖರ್ಚಿನಲ್ಲಿ, ಕಡಿಮೆ ಸಮಯದಲ್ಲಿ, ಪೋಷಕಾಂಶಯುಕ್ತ ಮೇವು ಉತ್ಪಾದಿಸುವ ಈ ವಿಧಾನವೆನ್ನುವುದು ಹೈನುಗಾರರಿಗೆ ವರದಾನವಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ಬೇಕಾದದಲ್ಲಿ  ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ ದೂ.ಸಂ. 0820- 2563923 ಅನ್ನು ಸಂಪರ್ಕಿಸಬಹುದು. 

ಬೇಕಾಗಿರುವುದು
– 100 ಚದರ ಅಡಿ ಸ್ಥಳ 
–  ಶೇ. 50: 50ರ ಅನುಪಾತದ ಹಸುರು ಪರದೆ ಮನೆ
- ತುಂತುರು ನೀರಾವರಿ ವ್ಯವಸ್ಥೆ
- ಅರ್ಧ ಅಥವಾ ಒಂದು ಎಚ್‌.ಪಿ. ನೀರಿನ ಮೋಟಾರ್‌
- ನೀರಿನ ಟ್ಯಾಂಕ್‌
- ಟೈಮ್‌ ಸೆನ್ಸಾರ್‌
- ಜಲಕೃಷಿ  ಘಟಕ

– ಹರೀಶ್‌ ಕಿರಣ್‌ ತುಂಗ,ಸಾಸ್ತಾನ 

Advertisement
Advertisement

Udayavani is now on Telegram. Click here to join our channel and stay updated with the latest news.

Next