Advertisement

ಸಮುದ್ರದಿಂದ ಹೈಡ್ರೋಜನ್‌ ವಿದ್ಯುತ್‌ ಉತ್ಪಾದನೆಗೆ ಎನ್‌ಐಟಿಕೆ ಮುಂದು

02:12 AM Apr 25, 2022 | Team Udayavani |

ಸುರತ್ಕಲ್‌ : ಇಲ್ಲಿನ ಪ್ರತಿಷ್ಠಿತ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ, ಕರ್ನಾಟಕ (ಎನ್‌ಐಟಿಕೆ)ಯು ಸಮುದ್ರದ ನೀರಿನ ವಿದ್ಯುದ್ವಿಭಜನೆಯ ಮೂಲಕ ಹಸುರು ಹೈಡ್ರೋಜನ್‌ ಉತ್ಪಾದಿಸುವತ್ತ ಹೆಜ್ಜೆ ಇರಿಸಿದೆ. ಇದಕ್ಕೆ ಹೆಚ್ಚಿನ ಅನುದಾನದ ಅಗತ್ಯವಿರುವುದರಿಂದ ವಿವಿಧ ಇಲಾಖೆಗಳ ಸಹಯೋಗದ ಮೂಲಕ ಅರಬಿ ಸಮುದ್ರದ ಕರಾವಳಿಯಲ್ಲಿ ಪೈಲಟ್‌ ಸ್ಥಾವರವನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಅದು ಈ ಕ್ಷೇತ್ರದ ಉದ್ಯಮ ಸಂಸ್ಥೆಗಳ ಜತೆಗೆ ತಿಳಿವಳಿಕೆ ಒಡಂಬಡಿಕೆ ಮಾಡಿಕೊಳ್ಳಲು ಮುಂದಾಗಿದೆ.

Advertisement

ದೇಶ ಸುಮಾರು 7,500 ಕಿ.ಮೀ. ಸಾಗರ ತೀರವನ್ನು ಹೊಂದಿದೆ. ಸಮುದ್ರದ ನೀರಿನ ಮೂಲಕ ಜಲಜನಕ ಉತ್ಪಾದಿಸುವ ಯೋಜನೆಗೆ ಇದು ಪೂರಕವಾಗಿದೆ. ಸಾಂಪ್ರದಾಯಿಕವಲ್ಲದ ಇಂಧನ ಮೂಲಗಳ ಅಭಿವೃದ್ಧಿಗೆ ಕೇಂದ್ರ ಸರಕಾರವೂ ಹೆಚ್ಚಿನ ಒತ್ತು ನೀಡುತ್ತಿದೆ.

ಮೈರೆ ಟೆಸಿಮೊಂಟ್‌ ಸಂಸ್ಥೆಯು ಕೇಂದ್ರದ ಸಹಯೋಗದೊಂದಿಗೆ ಸಲ್ಲಿಕೆ ಮಾಡಲಾಗಿರುವ ಈ ಯೋಜನೆಯ ಬಗೆಗಿನ ಪ್ರಸ್ತಾವನೆಯಲ್ಲಿ ಜಲ ವಿದ್ಯುದ್ವಿಭಜನೆಯ ಮೂಲಕ ಕಾರ್ಬನ್‌ಮುಕ್ತ ಹೈಡ್ರೋಜನ್‌ ಉತ್ಪಾದನೆ ಮತ್ತು ಅದರ ವಾಣಿಜ್ಯ ಬಳಕೆಯ ಸಾಧ್ಯತೆಯ ಬಗ್ಗೆ ಎನ್‌ಐಟಿಕೆಯು ಮುನ್ನೋಟ ಒದಗಿಸಿದೆ.

ಈ ಹಿನ್ನೆಲೆಯಲ್ಲಿ ಎನ್‌ಐಟಿಕೆಯು ತನ್ನ ವ್ಯಾಪ್ತಿಯ ಕರಾವಳಿಯಲ್ಲಿ ಬೇಸಗೆ ಮತ್ತು ಮಳೆಗಾಲದಲ್ಲಿ ನೀರಿನ ವಿಶ್ಲೇಷಣೆ ನಡೆಸಿ, ವಿವಿಧ ಎಲೆಕ್ಟ್ರೋವೇಗ ಪರಿವರ್ತಕಗಳನ್ನು ತಯಾರಿಸಿ ಅವುಗಳ ದಕ್ಷತೆಯನ್ನು ಪ್ರಯೋಗಾಲಯ ಮಟ್ಟದಲ್ಲಿ ಪರೀಕ್ಷಿಸಲಿದೆ. ವೆಚ್ಚ, ಪರಿಣಾಮಕಾರಿತ್ವ ಮತ್ತು ಸ್ಥಿರತೆಯನ್ನು ಆಧರಿಸಿ ಎಲೆಕ್ಟ್ರೋ ವೇಗವರ್ಧಕಗಳ ಪಟ್ಟಿಯನ್ನು ತಯಾರಿಸಿ ಆ ಮೂಲಕ ಪೈಲಟ್‌ ಯೋಜನೆಯನ್ನು ರೂಪಿಸಿ ಹಸುರು ಹೈಡ್ರೋಜನ್‌ ಉತ್ಪಾದನೆಯ ವಾಣಿಜ್ಯ ಸಾಧ್ಯತೆಯ ಬಗ್ಗೆ ಎನ್‌ಐಟಿಕೆ ಸಮಗ್ರ ಅಧ್ಯಯನ ನಡೆಸಲಿದೆ ಮತ್ತು ಸೂಕ್ತ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಿದೆ.

ಹೊಸ ಶಕೆಯ ನಿರೀಕ್ಷೆ
ಕರಾವಳಿಯಲ್ಲೇ ಇರುವ ಎನ್‌ಐಟಿಕೆಗೆ ಈ ಪೈಲಟ್‌ ಯೋಜನೆಯನ್ನು ಅನುಷ್ಠಾನ ಗೊಳಿಸಲು ವಿಪುಲ ಅವಕಾಶವಿದೆ. ಇದನ್ನು ಸದುಪಯೋಗ ಪಡಿಸಿಕೊಂಡರೆ ಇಂಧನ ಕ್ಷೇತ್ರದಲ್ಲಿ ಹೊಸ ಶಕೆ ಆರಂಭಿಸಬಹುದಾಗಿದೆ ಎಂಬುದು ಎನ್‌ಐಟಿಕೆಯ ತಜ್ಞರ ಅಭಿಪ್ರಾಯ.

Advertisement

ಹೈಡ್ರೋಜನ್‌ ಮುಂದಿನ ಪೀಳಿಗೆಯ ಮಾಲಿನ್ಯ ಮುಕ್ತ ಸಾರಿಗೆ ಇಂಧನ ಮತ್ತು ಸುಸ್ಥಿರ ರಾಸಾಯನಿಕಗಳಿಗೆ ಪೂರಕವಾಗಿದೆ. ಹೇರಳವಾದ ಸಮುದ್ರದ ನೀರಿನ ವಿದ್ಯುದ್ವಿಭಜನೆಯಿಂದ ಉತ್ಪತ್ತಿಯಾಗುವ ಹಸಿರು ಹೈಡ್ರೋಜನ್‌ ಉದಯೋನ್ಮುಖ ತಂತ್ರಜ್ಞಾನವಾಗಿದ್ದು ಇದಕ್ಕೆ ಸಮುದ್ರ ನೀರಿನ ಶುದ್ಧೀಕರಣದ ಅಗತ್ಯವಿಲ್ಲ. ಎನ್‌ಐಟಿಕೆ ಬಳಿ ಇದಕ್ಕೆ ಪೂರಕ ವಾತಾವರಣವಿದ್ದು ವಾಣಿಜ್ಯದ ಬಳಕೆಗೂ ಸೂಕ್ತವಾಗಿದೆ.
– ಡಾ| ಸೈಕತ್‌ ದತ್ತ, ಯೋಜನೆಯ ಪ್ರಧಾನ ಸಂಶೋಧಕ, ರಸಾಯನ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರು

ಹೈಡ್ರೋಜನ್‌ ಉತ್ಪಾದನೆಯು ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ.ಇದು ಎಲ್ಲರಿಗೂ ಕೈಗೆಟಕುವ, ವಿಶ್ವಾಸಾರ್ಹ ಮತ್ತು ಸಮರ್ಥನೀಯ ಶಕ್ತಿಯಾಗಿದೆ. ಯಶಸ್ವಿಯಾಗುವ ಭರವಸೆ ಹೊಂದಿದ್ದೇವೆ. –
ಡಾ| ವಾಸುದೇವ ಯಾದವ್‌, ಯೋಜನೆಯ ಪ್ರಾಜೆಕ್ಟ್ ಸಂಯೋಜಕ ಮತ್ತು ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ವಿಭಾಗದ ಸಹಾಯಕ ಪ್ರಾಧ್ಯಾಪಕ

Advertisement

Udayavani is now on Telegram. Click here to join our channel and stay updated with the latest news.

Next