Advertisement
ಜಲಮಂಡಳಿಯ ನಗರದ ಲಕ್ಷಾಂತರ ಮನೆಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆಯಾದರೂ, ನೀರಿನ ಸೋರಿಕೆ ಹಾಗೂ ನೀರಿನ ಕಳ್ಳತನ ತಡೆಯುವುದು ಸವಾಲಾಗಿ ಪರಿಣಮಿಸಿದೆ. ನೀರಿನ ಸೋರಿಕೆ ನಿಯಂತ್ರಿಸುವ ನಿಟ್ಟಿನಲ್ಲಿ ಮಂಡಳಿ ಈಗಾಗಲೇ ಹಲವಾರು ಕ್ರಮಗಳನ್ನು ಕೈಗೊಂಡರೂ ಪ್ರಾಯೋಜನವಾಗಿಲ್ಲ. ಆ ಹಿನ್ನೆಲೆಯಲ್ಲಿ ವಿದೇಶಿ ತಂತ್ರಜ್ಞಾನ ಅಳವಡಿಕೆಗೆ ಮಂಡಳಿ ನಿರ್ಧರಿಸಿದೆ.
Related Articles
Advertisement
ಜಪಾನ್‌ನ ಸೂಡೊ ಟೆಕ್ನಿಕಲ್ಸ್ ಸಂಸ್ಥೆಯು ಜಲಮಂಡಳಿಯ ಎಂಜಿನಿಯರ್ ಹಾಗೂ ಮೀಟರ್ ಮಾಪಕರು ಒಳಗೊಂಡಂತೆ 300 ಸಿಬ್ಬಂದಿಗಳಿಗೆ ತರಬೇತಿ ನೀಡಲು ಮುಂದಾಗಿದೆ. ಅದರಂತೆ ಮೇ.22 ರಿಂದ ಆಗಸ್ಟ್ 13ರ ವರೆಗೆ ಆರು ಹಂತಗಳಲ್ಲಿ ಸೂಡೋ ಕಂಪನಿಯ ಮೂವರು ತಜ್ಞರು ತರಬೇತಿ ನೀಡುತ್ತಿದ್ದಾರೆ.
ಮಂಡಳಿಯ ಉಪವಿಭಾಗಗಳಿಗೆ ಅನುಗುಣವಾಗಿ 50 ಜನರ 6 ಗುಂಪುಗಳನ್ನು ಮಾಡಿ ತಲಾ 10 ದಿನಗಳ ಕಾಲ ತರಬೇತಿ ನೀಡಲಾಗುತ್ತಿದ್ದು, ಈಗಾಗಲೇ ಈಶಾನ್ಯ ವಲಯದ ಸಿಬ್ಬಂದಿಗೆ ತರಬೇತಿ ಪೂರ್ಣಗೊಳಿಸಲಾಗಿದ್ದು, ಜೂ.5 ರಿಂದ 2 ಹಂತದ ತರಬೇತಿ ಆರಂಭವಾಗಿದೆ.
ಖುದ್ದು ಸೋರಿಕೆಯಾಗುತ್ತಿರುವ ಸ್ಥಳಗಳಿಗೆ ಸಿಬ್ಬಂದಿಯನ್ನು ಕರೆದುಕೊಂಡು ಹೋಗಿ ಸೋರಿಕೆ ಪತ್ತೆ ಮಾಡಲು ಲಿಸನಿಂಗ್ ಸ್ಟಿಕ್, ವಾಟರ್ ಲೀಕೇಜ್ ಡಿಟೆಕ್ಟರ್, ಬೋರಿಂಗ್ ಬಾರ್, ಲೀಕ್ ನಾಯ್ಸ ಕೊರಲೇಟರ್ ಉಪಕರಣಗಳ ಬಳಕೆ ಮಾಡಿ ನೀರು ಸೋರಿಕೆ ಹಾಗೂ ನೀರಿನ ಕಳ್ಳತನದ ಬಗ್ಗೆ ಶಿಬಿರಾರ್ಥಿಗಳಿಗೆ ಅರಿವು ಮೂಡಿಸಲಾಗುತ್ತಿದೆ.
ಸೋರಿಕೆ ಪತ್ತೆ ಮಾಡುವುದು ಹೇಗೆ?: ಸೂಡೊ ಟೆಕ್ನಿಕಲ್ಸ್ ಸಂಸ್ಥೆಯ ಉಪಕರಣಗಳಿಂದ ಸುಲಭವಾಗಿ ನೀರು ಸೋರಿಕೆಯಾಗುತ್ತಿರುವ ಸ್ಥಳದ ಮಾಹಿತಿ ಪಡೆಯಬಹುದಾಗಿದ್ದು, ನಲ್ಲಿ, ವಾಲ್ ಹಾಗೂ ಪೈಪ್‌ಗೆ ಉಪಕರಣ ಹಿಡಿದು ಆಲಿಸಿದಾಗ ಸೋರಿಕೆಯ ಶಬ್ಧ ಕೇಳಿಬರಲಿದೆ.
ಶಬ್ಧದ ತೀವ್ರತೆಯ ಆಧಾರದ ಮೇಲೆ ಅತ್ಯಂತ ಸುಲಭವಾಗಿ ಸೋರಿಕೆಯಾಗುತ್ತಿರುವ ಸ್ಥಳ ಪತ್ತೆ ಹಚ್ಚಬಹುದಾಗಿದೆ. ಅಲ್ಲದೆ ಸೋರಿಕೆ ಸ್ಥಳವನ್ನು ನಿಖರವಾಗಿ ಉಪಕರಣಗಳ ಮೂಲಕ ಪತ್ತೆ ಮಾಡಬಹುದಾಗಿದೆ ಎಂದು ಮಂಡಳಿಯ ಲೆಕ್ಕ ಸಿಗದ ನೀರು ಉಪವಿಭಾಗದ ಎಂಜಿನಿಯರ್ ಕೆ.ಎಸ್.ಹೆಗ್ಡೆ “ಉದಯವಾಣಿ’ಗೆ ಮಾಹಿತಿ ನೀಡಿದರು.
ಸೋರಿಕೆ ತಡೆಗಟ್ಟುವಲ್ಲಿ ಈ ತರಬೇತಿ ಉತ್ತಮವಾಗಿದ್ದು, ಉಪನ್ಯಾಸದ ಜತೆಗೆ ಹೊಸ ಉಪಕರಣಗಳ ಬಳಸುವ ತಂತ್ರವನ್ನು ಪ್ರಾಯೋಗಿಕವಾಗಿ ಹೇಳಿಕೊಟ್ಟಿದ್ದಾರೆ. -ವೀಣಾ, ತರಬೇತಿ ಪಡೆದ ಅಧಿಕಾರಿ ಜೈಕಾ ಸಂಸ್ಥೆಯೊಂದಿಗೆ ಜಲಮಂಡಳಿ ಒಪ್ಪಂದ ಮಾಡಿಕೊಂಡಿರುವುದರಿಂದ ಅಲ್ಲಿನ ಸಂಸ್ಥೆಯ ತಜ್ಞರು ಉಚಿತವಾಗಿ ಮಂಡಳಿಯ ಅಧಿಕಾರಿಗಳಿಗೆ ತರಬೇತಿ ನೀಡಲು ಮುಂದಾಗಿದ್ದಾರೆ. ಇದರಿಂದಾಗಿ ನೀರಿನ ಸೋರಿಕೆಯನ್ನು ಗಣನೀಯ ಪ್ರಮಾಣದಲ್ಲಿ ತಡೆಯಬಹುದಾಗಿದೆ.
-ಕೆಂಪರಾಮಯ್ಯ, ಪ್ರಧಾನ ಎಂಜಿನಿಯರ್ ಜಲಮಂಡಳಿ
-ಶೇ.61 ಮಾತ್ರ ಕಾವೇರಿ ನೀರಿನ ಬಳಕೆ
-ಶೇ.39 ನೀರು ಪೋಲು
-3 ಜನ ಸೂಡೊ ಟೆಕ್ನಿಕಲ್ಸ್ ಸಂಸ್ಥೆಯಿಂದ ನೀರು ಪೋಲು ತಡೆಗೆ ತರಬೇತಿ
-300 ಜಲಮಂಡಳಿ ಅಧಿಕಾರಿಗಳಿಗೆ ತರಬೇತಿ
-20 ಲಕ್ಷ ರೂ. ವೆಚ್ಚದ ಉಪಕರಣಗಳ ಬಳಕೆ
-8 ಉಪ ವಿಭಾಗಗಳಿಗೆ ಒಂದು ಉಪಕರಣ ವಿತರಣೆ * ಜಯಪ್ರಕಾಶ್ ಬಿರಾದಾರ್