Advertisement
ಸರಕಾರಿ ಕರ್ತವ್ಯಕ್ಕೆ ಅಡ್ಡಿ ಆರೋಪದ ಮೇರೆಗೆ ಪಾಲಿಕೆ ಆಯುಕ್ತರು ನೀಡಿದ್ದ ದೂರು ಕುರಿತಾಗಿ ಪೊಲೀಸರು ಪಾಲಿಕೆ ಬಿಜೆಪಿಸದಸ್ಯನನ್ನು ವಶಕ್ಕೆ ಪಡೆದಿದ್ದರಾದರೂ, ಕೆಲ ಗಂಟೆ ಪೊಲೀಸ್ ಠಾಣೆಯಲ್ಲಿ ಇರಿಸಿಕೊಂಡ ನಂತರ ವಿಚಾರಣೆಗೆ ಸಹಕಾರ ನೀಡುವುದಾಗಿ ಮುಚ್ಚಳಿಕೆ ಪತ್ರ ಬರೆದು ಕೊಟ್ಟಿದ್ದರಿಂದ ಸದಸ್ಯರನ್ನು ಬಿಡುಗಡೆ ಮಾಡಿದರು.
Related Articles
Advertisement
ಪ್ರದೀಪ ಶೆಟ್ಟರ ಮಾತನಾಡಿ, ಪಾಲಿಕೆ ಆಯುಕ್ತರು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಸರಕಾರಿ ಜಾಗ ಒತ್ತುವರಿ ತೆರವುಗೊಳಿಸುವಲ್ಲಿ ವಿಫಲರಾಗಿದ್ದಾರೆ. ಸರಕಾರಿ ಜಾಗ ಅತಿಕ್ರಮಣ ತೆರವು ಬಗ್ಗೆ ಹಲವು ಬಾರಿ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪವಾಗಿದೆ. ಕೋರ್ಟ್ ಆದೇಶವಿದ್ದರೂ ತೆರವು ಕಾರ್ಯ ಆಗುತ್ತಿಲ್ಲ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಕೆಲ ಬಿಜೆಪಿಯವರು ಪಾಲಿಕೆ ಆಯುಕ್ತರನ್ನು ತರಾಟೆಗೆ ತೆಗೆದುಕೊಂಡರು. ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕಾಂಗ್ರೆಸ್ ನಾಯಕರ ಒತ್ತಡಕ್ಕೆ ಮಣಿದು ತೆರವು ಕೈಗೊಳ್ಳದೆ, ಪ್ರಕರಣ ಹೈಕೋರ್ಟ್‌ನಲ್ಲಿದೆ ಎಂಬ ನೆಪ ಹೇಳುತ್ತಿದ್ದಾರೆಂದು ಕಿಡಿಕಾರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪಾಲಿಕೆ ಆಯುಕ್ತ ಸಿದ್ಧಲಿಂಗಯ್ಯ ಹಿರೇಮಠ, ಯಾರ ಒತ್ತಡವೂ ಇಲ್ಲ. ಪ್ರಕರಣ ಹೈಕೋರ್ಟ್‌ನಲ್ಲಿರುವುದು ನಿಜ. ಕಾನೂನಿನ ಸಾಧಕ-ಬಾಧಕ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ಈಗಾಗಲೇ ಕಟ್ಟಡ ತೆರವಿಗೆ ಆದೇಶಿಸಲಾಗಿದ್ದು, ಗಣೇಶ ಹಬ್ಬ ಹಾಗೂ ಬಕ್ರೀದ್ ಇದ್ದ ಕಾರಣ ಪೊಲೀಸ್ ಭದ್ರತೆ ಸಾಧ್ಯವಾಗದ್ದರಿಂದ ಕೆಲ ದಿನ ಮುಂದೂಡಲಾಗಿತ್ತಷ್ಟೆ ಎಂದು ಸ್ಪಷ್ಟಪಡಿಸಿದರು.
ಮತ್ತೂಮ್ಮೆ ಪ್ರತಿಭಟನೆ ಸಜ್ಜು: ಅತಿಕ್ರಮಣ ತೆರವುಗೊಳಿಸದ ಹೊರತು ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಸಂಜೆ ವೇಳೆಗೆ ಶಾಸಕ ಅರವಿಂದ ಬೆಲ್ಲದ ನೇತೃತ್ವದಲ್ಲಿ ಬಿಜೆಪಿಯವರು ಹೋರಾಟ ಮುಂದುವರಿಕೆಗೆ ಮುಂದಾದರು. ಪಾಲಿಕೆ ಕಚೇರಿಗೆ ಆಗಮಿಸಿದ ಶಾಸಕ ಬೆಲ್ಲದ, ಆಯುಕ್ತರೊಂದಿಗೆ ಚರ್ಚಿಸಿ ಪ್ರಕರಣದ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಆಯುಕ್ತರು ಕಾನೂನು ಚೌಕಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಾದ ಹಿನ್ನೆಲೆಯಲ್ಲಿ ವಿಳಂಬವಾಗಿದೆ. ಸೆ. 8ರಂದು ಬೆಳಗ್ಗೆ ತೆರವು ಕಾರ್ಯಾಚರಣೆ ನಡೆಯಲಿದೆ ಎಂದು ಖಚಿತ ಭರವಸೆ ನೀಡಿದ ಹಿನ್ನೆಲೆಯಲ್ಲಿ ಬಿಜೆಪಿಯವರು ಹೋರಾಟ ಹಿಂಪಡೆದರು. ಇದಕ್ಕೂ ಮೊದಲು ಪಾಲಿಕೆ ಆಯುಕ್ತರ ಕಚೇರಿಗೆ ಹಾಕಿದ್ದ ಕೀಲಿಯನ್ನು ಉಪನಗರ ಠಾಣೆ ಪೊಲೀಸರ ಸಮ್ಮುಖದಲ್ಲಿ ಒಡೆದು ತೆಗೆಯಲಾಯಿತು.