ಹ್ಯಾಂಗ್ ಝೂ: ಭಾರತ ಮತ್ತು ಇರಾನ್ ನಡುವಿನ ಏಷ್ಯನ್ ಗೇಮ್ಸ್ ಕಬಡ್ಡಿ ಫೈನಲ್ ಪಂದ್ಯ ಜಿದ್ದಾಜಿದ್ದಿನಿಂದ ಇರಲಿದೆ ಎಂದು ಮೊದಲೇ ಊಹಿಸಲಾಗಿತ್ತು. ಆದರೆ ಪಂದ್ಯವು ಯಾರೂ ನಿರೀಕ್ಷಿಸದ ರೀತಿಯಲ್ಲಿ ನಾಟಕೀಯ ಘಟನೆಗೆ ಸಾಕ್ಷಿಯಾಯಿತು. ಕೊನೆಗೆ ಭಾರತ ತಂಡವು ಚಿನ್ನದ ಪದಕ ಗೆದ್ದುಕೊಂಡಿತು.
ರೆಫ್ರಿ ಮಾಡಿ ಎಡವಟ್ಟಿನ ಕಾರಣದಿಂದ ಪಂದ್ಯ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಸ್ಥಗಿತವಾಗಿತ್ತು. ಬಳಿಕ ಪಂದ್ಯ ಮುಂದುವರಿಯಿತು.
ಪಂದ್ಯದ ದ್ವಿತೀಯಾರ್ಧದ ಕೊನೆಯ ಕ್ಷಣದಲ್ಲಿ ಈ ಘಟನೆ ನಡೆಯಿತು. ಭಾರತ ತಂಡದ ಪವನ್ ಸೆಹ್ರಾವತ್ ಅವರು ರೈಡ್ ಹೋದಾಗ ಅವರನ್ನು ಇರಾನ್ ಆಟಗಾರರು ಔಟ್ ಮಾಡಲು ಬಂದಾಗ ಈ ಗೊಂದಲದ ಉಂಟಾಯಿತು. ರೆಫ್ರಿಗಳು ಇರಾನ್ ಗೆ ಒಂದು ಅಂಕ ನೀಡಿದರು. ಆದರೆ, ಪವನ್ ತಾನು ಯಾರನ್ನೂ ಮುಟ್ಟದೆ ಲಾಬಿಗೆ ಹೋಗಿದ್ದೇನೆ, ಹಾಗಾಗಿ ತನ್ನ ಜೊತೆಗೆ ಲಾಬಿಗೆ ಬಂದ ಇರಾನ್ ಆಟಗಾರರು ಔಟ್ ಆಗಿದ್ದಾರೆಂದು ಪ್ರತಿಭಟಿಸಿದರು. ಆಗ ಅಂಪೈರ್ ಗಳು ರಿವೀವ್ ಗೆ ಹೋದರು. ಅಲ್ಲಿ ಭಾರತವು ನಾಲ್ಕು ಅಂಕಗಳನ್ನು ಕೋರಿತ್ತು. ಅಂಪೈರ್ ಗಳು ತಲಾ ಒಂದು ಅಂಕವನ್ನು ನೀಡಿದ್ದರು, ಪವನ್ ಮತ್ತು ಇರಾನ್ ನ ಬಸ್ತಾಮಿ ಔಟ್ ಎಂದು ಘೋಷಿಸಲಾಯಿತು.
ಆದಾಗ್ಯೂ, ಈ ನಿರ್ಧಾರವನ್ನು ಶೀಘ್ರದಲ್ಲೇ ರದ್ದುಗೊಳಿಸಲಾಯಿತು, ಗೊಂದಲಕ್ಕೆ ಕಾರಣವಾಯಿತು. ಹಳೆಯ ನಿಯಮದ ಪ್ರಕಾರ ಭಾರತಕ್ಕೆ ನಾಲ್ಕು ಅಂಕ ನೀಡಲಾಯಿತು. ಆದರೆ ಇರಾನ್ ಇದನ್ನು ಪ್ರತಿಭಟಿಸಿತು. ಹೊಸ ನಿಯಮವು ತಲಾ ಒಂದು ಅಂಕವನ್ನು ನೀಡುತ್ತದೆ ಎಂದು ವಾದಿಸಿತು. ಎಕೆಎಫ್‌ಐ ಸೆಕ್ರೆಟರಿ ಜನರಲ್ ವಿಡಿಯೋವನ್ನು ಪರಿಶೀಲಿಸಲು ಮುಂದಾದಾಗ ಪರಿಸ್ಥಿತಿಯು ಗೊಂದಲಕ್ಕೆ ಕಾರಣವಾಯಿತು. ಅಂತಿಮವಾಗಿ, ಹೊಸ ನಿಯಮದ ಪ್ರಕಾರ ಪ್ರತಿ ತಂಡವು ಒಂದು ಅಂಕವನ್ನು ಪಡೆಯುತ್ತದೆ ಎಂದು ಅವರು ಘೋಷಿಸಿದರು. ಈ ನಿರ್ಧಾರವು ಭಾರತ ಮತ್ತು ಇರಾನ್ ನಡುವೆ 29-29 ಅಂಕಗಳೊಂದಿಗೆ ಟೈಗೆ ಕಾರಣವಾಯಿತು. ಇದರಿಂದ ಕೆರಳಿದ ಭಾರತೀಯ ಆಟಗಾರರು ಕೋರ್ಟ್ ನಲ್ಲಿ ಕುಳಿತು ಪ್ರತಿಭಟನೆ ಮಾಡಿದರು.
ಬಳಿಕ ಮತ್ತೆ ಪರಿಶೀಲನೆ ನಡೆಸಿದ ಅಧಿಕಾರಿಗಳು ಭಾರತಕ್ಕೆ ನಾಲ್ಕು ಅಂಕ ನೀಡಿದರು. ಬಳಿಕ ಪಂದ್ಯ ಮತ್ತೆ ಆರಂಭವಾಯಿತು. ಭಾರತವು 33-29 ಅಂಕಗಳೊಂದಿಗೆ ಪಂದ್ಯ ಗೆದ್ದುಕೊಂಡಿತು. ಕಳೆದ ಏಷ್ಯನ್ ಗೇಮ್ಸ್ ನ ಚಾಂಪಿಯನ್ ಇರಾನ್ ಬೆಳ್ಳಿ ಪದಕ ಪಡೆಯಿತು.
ಈ ಪದಕದೊಂದಿಗೆ ಈ ಬಾರಿಯ ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಪದಕಗಳ ಸಂಖ್ಯೆ 103ಕ್ಕೆ ಏರಿಕೆಯಾಗಿದೆ. 28 ಚಿನ್ನ, 35 ಬೆಳ್ಳಿ ಮತ್ತು 40 ಕಂಚಿನ ಪದಕಗಳು ಭಾರತದ ಪಾಲಾಗಿದೆ.