Advertisement
ಪಾಲಿಕೆಯ 12 ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರನ್ನು ಆಯ್ಕೆ ಮಾಡಲು ಶುಕ್ರವಾರ ಮೇಯರ್ ನೇತೃತ್ವದಲ್ಲಿ ಸಭೆ ಕರೆಯಲಾಗಿತ್ತು. ಚುನಾವಣೆಗೆ ಮೊದಲೇ ಜೆಡಿಎಸ್‌ನ ಕೆಲ ಸದಸ್ಯರು ಅಧ್ಯಕ್ಷ ಸ್ಥಾನ ಬೇಕೆಂದು ಬಂಡೆದ್ದ ಪರಿಣಾಮ, ಕಾಂಗ್ರೆಸ್‌ಗೆ ಎರಡು ಸ್ಥಾಯಿ ಸಮಿತಿಗಳನ್ನು ಕಳೆದುಕೊಳ್ಳುವ ಭೀತಿ ಎದುರಾಗಿತ್ತು. ಬಿಜೆಪಿ ಚುನಾವಣೆ ನಡೆಸಬೇಕೆಂದು ಪ್ರತಿಭಟನೆ ನಡೆಸುತ್ತಿದ್ದ ವಿಷಯವನ್ನೇ ಕಾರಣವಾಗಿಸಿಕೊಂಡು ಚುನಾವಣೆ ಮುಂದೂಡಲಾಯಿತು.
Related Articles
Advertisement
ಮೈತ್ರಿಗೆ ಕೈಕೊಟ್ಟ ಜೆಡಿಎಸ್ ಸದಸ್ಯರು: ಸೆಪ್ಟಂಬರ್‌ನಲ್ಲಿ ನಡೆದ ಮೇಯರ್, ಉಪಮೇಯರ್ ಚುನಾವಣೆಯಲ್ಲಿ ಅಸಮಾಧಾನಗೊಂಡಿದ್ದ ಲಗ್ಗೆರೆ ವಾರ್ಡ್‌ನ ಮಂಜುಳಾ ನಾರಾಯಣಸ್ವಾಮಿ ಹಾಗೂ ಬಿಟಿಎಂ ಬಡಾವಣೆಯ ದೇವದಾಸ್ ಬಿಜೆಪಿಯನ್ನು ಬೆಂಬಲಿಸಿದ್ದರು. ಅದನ್ನು ಮರೆತು ಸ್ಥಾಯಿ ಸಮಿತಿಗಳಿಗೆ ಸದಸ್ಯರನ್ನಾಗಿ ಮಾಡಲಾಗಿತ್ತು. ಆದರೆ, ಶುಕ್ರವಾರ ಅಧ್ಯಕ್ಷ ಚುನಾವಣೆ ವೇಳೆ ಅವರು ನೀಡಿದ ಶಾಕ್‌ಗೆ ಮೈತ್ರಿ ಪಕ್ಷದ ಮುಖಂಡರು ತತ್ತರಿಸುವಂತಾಗಿತ್ತು.
ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯಲ್ಲಿ ಮಂಜುಳಾ ಮತ್ತು ವಾರ್ಡ್‌ಮಟ್ಟದ ಸಾರ್ವಜನಿಕ ಕಾಮಗಾರಿ ಸ್ಥಾಯಿ ಸಮಿತಿಯಲ್ಲಿ ದೇವದಾಸ್ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಮುಂದಾಗಿದ್ದರು. ಒಂದೊಮ್ಮೆ ಚುನಾವಣೆ ನಡೆದು ಅವರ ನಾಮಪತ್ರ ಸಲ್ಲಿಸಿದ್ದರೆ ಬಿಜೆಪಿ ಬೆಂಬಲದಿಂದಾಗಿ ಇಬ್ಬರೂ ಸಮಿತಿ ಅಧ್ಯಕ್ಷರಾಗಿ, ಮೈತ್ರಿ ಪಕ್ಷಗಳಿಗೆ ಎರಡು ಸಮಿತಿ ಕೈತಪ್ಪುವ ಆತಂಕ ಎದುರಾಗಿತ್ತು.
ಶಾಸಕ-ಸದಸ್ಯೆ ನಡುವೆ ವಾಗ್ವಾದ: ಬಿಜೆಪಿ ಬೆಂಬಲದೊಂದಿಗೆ ಸಮಿತಿ ಅಧ್ಯಕ್ಷ ಸ್ಥಾನಕ್ಕೇರಲು ಮುಂದಾಗಿದ್ದ ಮಂಜುಳಾ ಹಾಗೂ ದೇವದಾಸ್ ಅವರ ವಿರುದ್ಧ ಶಾಸಕ ಗೋಪಾಲಯ್ಯ ಅಸಮಾಧಾನ ವ್ಯಕ್ತಪಡಿಸಿದ ಘಟನೆ ಪಾಲಿಕೆಯ ಕೌನ್ಸಿಲ್ ಆವರಣದಲ್ಲಿ ನಡೆಯಿತು. ಈ ವೇಳೆ ಪಕ್ಷ ತಮ್ಮನ್ನು ಸರಿಯಾಗಿ ನಡೆಸಿಕೊಂಡಿಲ್ಲ ಎಂದು ಮಂಜುಳಾ ಆಕ್ರೋಶ ವ್ಯಕ್ತಪಡಿಸಿದರು. ಜತೆಗೆ ಅಲ್ಲಿಂದ ಹೊರಗೆ ಹೋಗಲು ಮುಂದಾದಾಗ ಜೆಡಿಎಸ್ ನಾಯಕಿ ನೇತ್ರಾ ನಾರಾಯಣ್ ಅವರು ಮಂಜುಳಾರನ್ನು ಕರೆದುಕೊಂಡರು ಬಂದರು.
ನೀತಿಗೆಟ್ಟ, ಹೇಡಿ ಪದ ಬಳಕೆ: ಚುನಾವಣೆ ನಡೆಸಬೇಕೆಂದು ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ ಸದಸ್ಯರು ಕಾಂಗ್ರೆಸ್-ಜೆಡಿಎಸ್ ನೀತಿಗೆಟ್ಟವರು ಎಂದು ಘೋಷಣೆ ಕೂಗಿದರು. ಇದರಿಂದ ಸಿಟ್ಟಿಗೆದ್ದ ಆಡಳಿತ ಪಕ್ಷ ನಾಯಕ ಎಂ.ಶಿವರಾಜು, ಪಾಲಿಕೆ ಸದಸ್ಯರಾಗಿ ಗೌರವಯುತವಾಗಿ ಮಾತನಾಡುವುದನ್ನು ಕಲಿಯಿರಿ. ಚುನಾವಣೆ ನಡೆಸಲು ಬಿಡದೆ ಪ್ರತಿಭಟನೆ ನಡೆಸುತ್ತಿರುವ ನೀವು ನೀತಿಗೆಟ್ಟವರು ಎಂದು ಗರಂ ಆದರು. ಕೊನೆಗೆ ಮೇಯರ್ ಚುನಾವಣೆ ಮುಂದೂಡಿ ಹೊರಟ ನಂತರವೂ ಪ್ರತಿಭಟನೆ ಮುಂದುವರಿಸಿದ ಬಿಜೆಪಿ ಸದಸ್ಯರು, ರಣಹೇಡಿಗಳ ರೀತಿ ರಣಾಂಗಣದಿಂದ ಹೊರ ಹೋಗುತ್ತಿದ್ದೀರಾ ಎಂದು ರೇಗಿಸಿದರು.
ದೇವಸ್ಥಾನದಲ್ಲಿ ಆಣೆ ಮಾಡಲಿ!: ಚುನಾವಣೆ ಮುಂದೂಡಿದ ಬಳಿಕ ತಡವಾಗಿ ಪ್ರಕ್ರಿಯೆ ಆರಂಭಿಸಿದಕ್ಕೆ ಸ್ಪಷ್ಟನೆ ನೀಡಿದ ಮೇಯರ್, ಬಿಜೆಪಿ ನಾಯಕರು ತಮ್ಮ ಸದಸ್ಯರು ಬರುವುದು ತಡವಾಗಲಿದೆ. ಹೀಗಾಗಿ ಚುನಾವಣೆ ವಿಳಂಬ ಮಾಡಿ ಎಂದು ಮನವಿ ಮಾಡಿದ್ದರು ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ, ಚುನಾವಣೆ ವಿಳಂಬ ಮಾಡುವಂತೆ ನಾವು ಕೋರಿಲ್ಲ. ನಾವು ತಡವಾಗಿ ಆರಂಭಿಸಿ ಎಂದು ಹೇಳಿದ್ದೇವೆ ಎಂದು ಮೇಯರ್ ಯಾವುದಾದರೂ ದೇವಸ್ಥಾನದಲ್ಲಿ ಆಣೆ ಮಾಡಲಿ. ನಾವೂ ಆಣೆ ಮಾಡುತ್ತೇವೆ ಎಂದು ತಿರುಗೇಟು ನೀಡಿದರು.
ಚುನಾವಣೆ ನಡೆಸಲು ನಾವು ಸಿದ್ಧರಿದ್ದೇವು. ಆದರೆ, ಬಿಜೆಪಿ ಸದಸ್ಯರು ಚುನಾವಣಾ ಪ್ರಕ್ರಿಯೆ ನಡೆಸಲು ಅವಕಾಶ ನೀಡಲಿಲ್ಲ. ಹಲವಾರು ಬಾರಿ ಮನವಿ ಮಾಡಿದರೂ ತಮ್ಮ ಸ್ಥಾನಗಳಿಗೆ ಹೋಗದೆ ಗೊಂದಲ ಸೃಷ್ಟಿಸಿದರು. ಹೀಗಾಗಿ ಚುನಾವಣೆಯನ್ನು ಮುಂಡೂಡಿಸಿದ್ದು, ಶೀಘ್ರದಲ್ಲಿಯೇ ದಿನಾಂಕ ನಿಗದಿಪಡಿಸಲಾಗುವುದು. -ಗಂಗಾಂಬಿಕೆ, ಮೇಯರ್ ಸ್ಥಾಯಿ ಸಮಿತಿಗಳು ತಮ್ಮ ಕೈತಪ್ಪಿ ಹೋಗುತ್ತವೆ ಎಂಬ ಭಯದಿಂದಾಗಿ ಕಾಂಗ್ರೆಸ್-ಜೆಡಿಎಸ್ ಚುನಾವಣೆ ಮುಂಡಿದಿದ್ದಾರೆ. ಇದೇ ಕಾರಣದಿಂದ ಚುನಾವಣೆಯನ್ನು ನಿಗದಿತ ಸಮಯಕ್ಕೆ ಆರಂಭಿಸಲಿಲ್ಲ. ಹೀಗಾಗಿ ನಾವು ಪ್ರತಿಭಟನೆ ನಡೆಸಿದೆವು.
-ಪದ್ಮನಾಭರೆಡ್ಡಿ, ಪ್ರತಿಪಕ್ಷ ನಾಯಕ ಚುನಾವಣೆ ನಡೆಸುತ್ತೇವೆ ನಿಮ್ಮ ಸ್ಥಾನಗಳಲ್ಲಿ ಕುಳಿತುಕೊಳ್ಳುವಂತೆ ಮೇಯರ್ ಹೇಳಿದರು. ಆದರೂ ಪ್ರತಿಭಟನೆ ಮುಂದುವರಿಸಿದ ಅವರು ನಮ್ಮ ಸದಸ್ಯರಿಗೂ ತಮ್ಮ ಸ್ಥಾನಗಳಲ್ಲಿ ಕುಳಿತುಕೊಳ್ಳಲು ಅವಕಾಶ ನೀಡಲಿಲ್ಲ. ಹಿಂದೆ ಮೇಯರ್ ಚುನಾವಣೆಯಲ್ಲಿ ಇಬ್ಬರು ಸದಸ್ಯರು ಕೈಕೊಟ್ಟರೂ ಗೆದ್ದಿದ್ದು, ಚುನಾವಣೆಗೆ ನಾವು ಸಿದ್ಧರಿದ್ದೇವು. ಆದರೆ, ಅನಗತ್ಯವಾಗಿ ಪ್ರತಿಭಟನೆ ನಡೆಸಿ ಚುನಾವಣೆ ನಡೆಯದಂತೆ ಮಾಡಿದ್ದಾರೆ.
-ಎಂ.ಶಿವರಾಜು, ಆಡಳಿತ ಪಕ್ಷ ನಾಯಕ