ಮಹಾನಗರ: ಮೈಸೂರಿನ ಹುಲಿ ಎಂದೇ ಖ್ಯಾತಿವೆತ್ತಿರುವ ಟಿಪ್ಪು ಸುಲ್ತಾನ್ ಎಲ್ಲ ಧರ್ಮಗಳ ನಂಬಿಕೆಗಳಿಗೂ ಮಹತ್ವ ನೀಡಿದ ಆದರ್ಶನಾಯಕರಾಗಿದ್ದಾರೆ. ಅವರನ್ನು ಒಂದು ಧರ್ಮಕ್ಕೆ ಸೀಮಿತಗೊಳಿಸಿ ರಾಜಕೀಯ ಲಾಭ ಪಡೆಯುವುದು ಸರಿಯಲ್ಲ. ಈ ಕುರಿತು ಪ್ರಜೆಗಳಿಂದಲೇ ಆರಿಸಿ ಬಂದವರು ಜನವಿರೋಧಿ ನೀತಿ ಅನುಸರಿಸುತ್ತಿರುವುದು ತಪ್ಪು ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿದರು.
ಅವರು ಶನಿವಾರ ನಗರದ ಪುರಭವನದ ಮಿನಿಹಾಲ್‌ನಲ್ಲಿ ಟಿಪ್ಪು ಸುಲ್ತಾನ್ ಇತಿಹಾಸ ಸಂಶೋಧನ ಸಮಿತಿ ಆಯೋಜಿಸಿದ್ದ ಹೈದರಲಿ ಮತ್ತು ಟಿಪ್ಪು ಸುಲ್ತಾನ್ ವಿಚಾರಗೋಷ್ಠಿಯನ್ನು ಉದ್ಘಾಟಿಸಿದರು.
ತನ್ನ ಉತ್ತಮ ರಾಜನೀತಿಯ ಮೂಲಕ ಟಿಪ್ಪು ರೈತರು ಸಹಿತ ಎಲ್ಲ ವರ್ಗಗಳಿಗೂ ಅನುಕೂಲವಾಗುವ ಸುಧಾರಣೆಗಳನ್ನು ತರುವ ಜತೆಗೆ ಸರಳ ಜೀವನದ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿದ್ದರು. ಆದರೆ ಇಂದು ಈ ಕುರಿತು ತಪ್ಪು ಅಭಿಪ್ರಾಯಗಳನ್ನು ನೀಡುವ ಮೂಲಕ ಚರಿತ್ರೆಗೆ ದ್ರೋಹ ಬಗೆಯುವ ಕೆಲಸವಾಗುತ್ತಿದೆ. ಇತಿಹಾಸದ ಎಲ್ಲ ರಾಜರು ಕೂಡ ಜಾತಿ, ಧರ್ಮ ನೋಡದೆ ಯುದ್ಧ ಮಾಡಿದ್ದರು. ತಮ್ಮ ರಾಜ್ಯ ವಿಸ್ತರಣೆಗಾಗಿ ಇತರ ರಾಜರ ವಿರುದ್ಧ ಸವಾರಿ ನಡೆಸಿದ್ದರು. ಅದು ಅಂದಿನ ಕಾಲದಲ್ಲಿ ಅನಿವಾರ್ಯವಾಗಿತ್ತು. ಹೀಗಾಗಿ ಟಿಪ್ಪುವನ್ನು ಧರ್ಮದ ಆಧಾರದಲ್ಲಿ ವಿಭಾಗಿಸುವುದು ಧರ್ಮಾಂಧತೆ ಎನಿಸುತ್ತದೆ ಎಂದು ಅವರು ಹೇಳಿದರು.
ಜಿಲ್ಲಾ ವಕ್ಫ್ ಸಲಹಾ ಸಮಿತಿ ಮಾಜಿ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಬ್ಯಾರಿ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಎಂ.ಅಸ್ಲಾಂ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕ ಶಾಹುಲ್ ಹಮೀದ್ ಕದಿಕೆ, ಅಖಿಲ ಭಾರತ ಬ್ಯಾರಿ ಪರಿಷತ್ ಸ್ಥಾಪಕಾಧ್ಯಕ್ಷ ಜೆ.ಹುಸೈನ್ ವೇದಿಕೆಯಲ್ಲಿದ್ದರು. ಸಮಿತಿ ಅಧ್ಯಕ್ಷ ಪಿ.ಎಚ್.ಎಂ.ರಫೀಕ್ ಕಾಟಿಪಳ್ಳ ಸ್ವಾಗತಿಸಿದರು. ಜೀವನ್ ಕುತ್ತಾರ್ ಕಾರ್ಯಕ್ರಮ ನಿರ್ವಹಿಸಿದರು.