ಹೊಸದಿಲ್ಲಿ : ಪಾಕಿಸ್ಥಾನದಲ್ಲಿ ತನ್ನ ಗಂಡ, ಅತ್ತೆ, ಮಾವನಿಂದ ದೈಹಿಕ ಹಾಗೂ ಮಾನಸಿಕ ಕಿರುಕುಳಕ್ಕೆ ಗುರಿಯಾಗಿರುವ ಭಾರತದ ಹೈದರಾಬಾದಿನ ಮಹಿಳೆ, ತನ್ನನ್ನು ಈ ದಯನೀಯ ಸ್ಥಿತಿಯಿಂದ ಪಾರುಗೊಳಿಸುವಂತೆ ಕೋರಿ ಕಳುಹಿಸಿದ ವಿಡಿಯೋ ಸಂದೇಶಕ್ಕೆ ತತ್‌ಕ್ಷಣವೇ ಸ್ಪಂದಿಸಿರುವ ವಿದೇಶ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್ ಅವರು ಇದೀಗ ಭಾರತೀಯ ಮಹಿಳೆಯನ್ನು ಭಾರತಕ್ಕೆ ಕರೆತರುತ್ತಿದ್ದಾರೆ.
ಮೊಹಮ್ಮದೀಯ ಬೇಗಂ ಗೆ 1996ರಲ್ಲಿ , ತಾನು ಒಮಾನ್ ನವನು ಎಂದು ಹೇಳಿಕೊಂಡಿದ್ದ ಮುಹಮ್ಮದ್ ಯೂನಿಸ್ ಎಂಬಾತನೊಂದಿಗೆ ಟೆಲಿಫೋನ್ ಮೂಲಕ ನಿಖಾಹ್ ಆಗಿತ್ತು. ಮದುವೆ ಆದೊಡನೆಯೇ ಮೊಹಮ್ಮದೀಯ ಬೇಗಂ, ಮಸ್ಕತ್‌ನಲ್ಲಿ ಮೆಕ್ಯಾನಿಕ್ ಆಗಿ ದುಡಿಯುತ್ತಿದ್ದ ಪತಿಯನ್ನು ಸೇರಿಕೊಂಡಳು. ಮದುವೆಯಾಗಿ 12 ವರ್ಷಗಳ ಬಳಿಕ, ತನ್ನ ಪತಿ ಯೂನಿಸ್ ಪಾಕಿಸ್ಥಾನದವನೆಂದು ಮೊಹಮ್ಮದೀಯಾಗೆ ಗೊತ್ತಾಗಿ ಆಕೆಗೆ ಆಘಾತವಾಯಿತು. ಅ ಸಂದರ್ಭದಲ್ಲಿ ಮಸ್ಕತ್‌ನಲ್ಲಿನ ತನ್ನ ಉದ್ಯೋಗವನ್ನು ಕಳೆದುಕೊಂಡಿದ್ದ ಆತ ಪಾಕಿಸ್ಥಾನಕ್ಕೆ ಮರಳಿದ.
ಯೂನಿಸ್‌ನಿಂದ ಐದು ಮಕ್ಕಳ ತಾಯಿಯಾದ ಮೊಹಮ್ಮದೀಯಳ ಕೊನೇ ಪುತ್ರ ಪಾಕಿಸ್ಥಾನದಲ್ಲಿ ಜನಿಸಿದ್ದಾನೆ. ಐದು ಮಂದಿ ಮಕ್ಕಳಲ್ಲಿ ಮೂವರು ಪುತ್ರರು, ಇಬ್ಬರು ಪುತ್ರಿಯರು. ಇಷ್ಟಾಗಿಯೂ ಯೂನಿಸ್ ಈಚೆಗೆ ಬೇರೊಬ್ಬ ಪಾಕ್ ಮಹಿಳೆಯನ್ನು ಮದುವೆಯಾಗಿದ್ದಾನೆ.
ಮೊಹಮ್ಮದೀಯಳ ತಂದೆ ಮೊಹಮ್ಮದ್ ಅಕ್‌ಬರ್ ಭಾರತದ ಹೈದರಾಬಾದ್‌ನಲ್ಲಿ ಸೈಕಲ್ ಮೆಕ್ಯಾನಿಕ್. ತಾಯಿ ಹಜಾರಾ ಬೇಗಂ ಗೆ ಮನೆವಾರ್ತೆ.
ಪಾಕಿಸ್ಥಾನದಲ್ಲಿ ತನ್ನ ಗಂಡ,ಅತ್ತೆ ಮತ್ತು ಮಾವ ತನಗೆ ನೀಡುತ್ತಿರುವ ಹಿಂಸೆ, ಯಾತನೆಯನ್ನು ತಡೆಯಲಾರದೆ ಮಗಳು ಕಳುಹಿಸಿದ್ದ ವಿಡಿಯೋ ಸಂದೇಶವನ್ನು ಮೊಹಮ್ಮದ್ ಅಕ್‌ಬರ್ ಅವರು ನೇರವಾಗಿ ಸುಶ್ಮಾ ಸ್ವರಾಜ್ ಅವರಿಗೆ ಕಳುಹಿಸಿ ನೆರವಿನ ಹಸ್ತ ನೀಡುವಂತೆ ಯಾಚಿಸಿದರು. ಸುಶ್ಮಾ ಸ್ವರಾಜ್ ಕೂಡಲೇ ಕಾರ್ಯ ಪ್ರವೃತ್ತರಾಗಿ ಇದೀಗ ಮೊಹಮ್ಮದೀಯಾ ಭಾರತಕ್ಕೆ ಮರಳುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಮದುವೆಯಾದ ಬಳಿಕದ ಕಳೆದ 21 ವರ್ಷಗಳಲ್ಲಿ ಮೊಹಮ್ಮದೀಯ ಬೇಗಂ ಭಾರತಕ್ಕೆ ಬಂದದ್ದು ಒಂದೇ ಒಂದು ಬಾರಿ. 2012ರಲ್ಲಿ ಆಕೆ ಹೈದರಾಬಾದಿಗೆ ಬಂದು ತಂದೆ ತಾಯಿಯನ್ನು ಕಂಡಿದ್ದಳು.