Advertisement

ಹೈದರಾಬಾದ್‌ನಲ್ಲಿ ನಡೆದೀತೇ ಡೆಲ್ಲಿ ಕ್ಯಾಪಿಟಲ್ಸ್‌ ಆಟ?

09:43 AM Apr 14, 2019 | Team Udayavani |

ಹೈದರಾಬಾದ್‌: ಶುಕ್ರವಾರದ ಪಂದ್ಯದಲ್ಲಿ ಕೋಲ್ಕತಾದಲ್ಲೇ ಕೆಕೆಆರ್‌ಗೆ ಸೋಲುಣಿಸಿದ ಸಂಭ್ರಮದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್‌ ರವಿವಾರ ಮತ್ತೂಂದು “ಹೊರಗಿನ ಪಂದ್ಯ’ಕ್ಕೆ ಸಜ್ಜಾಗಿದೆ. ಅಯ್ಯರ್‌ ಪಡೆ ಸನ್‌ರೈಸರ್ ಹೈದರಾಬಾದ್‌ ವಿರುದ್ಧ ಅವರದೇ ಅಂಗಳದಲ್ಲಿ ಸೆಣಸಲಿದೆ.

Advertisement

ಹೈದರಾಬಾದ್‌ಗೆ ಇದು ತವರಿನ ಪಂದ್ಯವಾದ್ದರಿಂದ ಮೇಲುಗೈ ಅವಕಾಶ ಹೆಚ್ಚು. ಆದರೆ ಬಲಿಷ್ಠ ಕೆಕೆಆರ್‌ಗೆ “ಈಡನ್‌’ನಲ್ಲೇ ಸೋಲುಣಿಸಿದ ಡೆಲ್ಲಿಯನ್ನು ಯಾವ ಕಾರಣಕ್ಕೂ ಕಡೆಗಣಿಸುವಂತಿಲ್ಲ.

ಕೋಟ್ಲಾದಲ್ಲಿ ನಡೆದ ಇತ್ತಂಡಗಳ ಮೊದಲ ಸುತ್ತಿನ ಪಂದ್ಯದಲ್ಲಿ ಹೈದರಾಬಾದ್‌ 5 ವಿಕೆಟ್‌ಗಳಿಂದ ಡೆಲ್ಲಿಯನ್ನು ಮಣಿಸಿತ್ತು. ಡೆಲ್ಲಿ 8 ವಿಕೆಟಿಗೆ ಕೇವಲ 129 ರನ್‌ ಮಾಡಿದರೆ, ಹೈದರಾಬಾದ್‌ 18.3 ಓವರ್‌ಗಳಲ್ಲಿ 5ಕ್ಕೆ 131 ರನ್‌ ಬಾರಿಸಿ ಗೆದ್ದಿತ್ತು. ಹೀಗಾಗಿ ಇದು ಡೆಲ್ಲಿಗೆ ಸೇಡಿನ ಪಂದ್ಯವೂ ಹೌದು.ಬಲಾಬಲದ ಲೆಕ್ಕಾಚಾರದಲ್ಲಿ ಹೈದರಾಬಾದ್‌ ಮುಂದಿದೆ. ಈ ತಂಡಗಳು 13 ಬಾರಿ ಮುಖಾಮುಖೀಯಾಗಿದ್ದು, ಹೈದರಾಬಾದ್‌ 9, ಡೆಲ್ಲಿ 4ರಲ್ಲಿ ಗೆಲುವು ಸಾಧಿಸಿದೆ.

ಡೆಲ್ಲಿಗೆ ಬಲ ತುಂಬಿದ ಧವನ್‌
ನಿಧಾನಗತಿಯ ಬ್ಯಾಟಿಂಗ್‌ ನಡೆಸುತ್ತಿದ್ದ ಶಿಖರ್‌ ಧವನ್‌ ಕೆಕೆಆರ್‌ ವಿರುದ್ಧ ನೈಜ ಆಟಕ್ಕೆ ಕುದುರಿಕೊಂಡದ್ದು ಡೆಲ್ಲಿಗೆ ಹೆಚ್ಚಿನ ಬಲ ತುಂಬಿದೆ. ಶುಕ್ರವಾರ ರಾತ್ರಿ ಈಡನ್‌ನಲ್ಲಿ 62 ಎಸೆತಗಳಿಂದ ಅಜೇಯ 97 ರನ್‌ ಗಳಿಸುವ ಮೂಲಕ ಐಪಿಎಲ್‌ನಲ್ಲಿ ಜೀವನಶ್ರೇಷ್ಠ ಬ್ಯಾಟಿಂಗ್‌ ದಾಖಲಿಸಿದ್ದು ಧವನ್‌ ಹೆಗ್ಗಳಿಕೆ. ರಿಷಬ್‌ ಪಂತ್‌ ಸ್ಫೋಟಕ ಬ್ಯಾಟಿಂಗ್‌ ಕೂಡ ತಂಡಕ್ಕೆ ಪ್ಲಸ್‌ ಪಾಯಿಂಟ್‌. ಹೈದರಾಬಾದ್‌ ಪಂದ್ಯದಲ್ಲೂ ಇವರು ಮಿಂಚಿದರೆ ಡೆಲ್ಲಿ ಗೆಲುವನ್ನು ನಿರೀಕ್ಷಿಸಲಡ್ಡಿಯಿಲ್ಲ.

ಡೆಲ್ಲಿ ಬೌಲಿಂಗ್‌ನಲ್ಲಿ ಇಶಾಂತ್‌, ರಬಾಡ, ಮಾರಿಸ್‌, ಅಕ್ಷರ್‌ ಪಟೇಲ್‌ ಎದುರಾಳಿಗಳನ್ನು ಕಟ್ಟಿಹಾಕುವಲ್ಲಿ ಸಮರ್ಥರಿದ್ದಾರೆ. ಆದರೆ ಹೈದರಾಬಾದ್‌ ಟ್ರ್ಯಾಕ್‌ ಹೇಗೆ ವರ್ತಿಸಬಹುದು ಎಂಬುದು ಮುಖ್ಯ. ತವರಲ್ಲಿ ಆಡಿದ ಮೊದಲೆರಡು ಪಂದ್ಯಗಳನ್ನು ಗೆದ್ದಿರುವ ಸನ್‌ರೈಸರ್, 3ನೇ ಪಂದ್ಯದಲ್ಲಿ ಮುಂಬೈಗೆ ಶರಣಾಗಿತ್ತು.

Advertisement

ವಾರ್ನರ್‌, ಬೇರ್‌ಸ್ಟೊ ಬಲ
ಹೈದರಾಬಾದ್‌ಗೆ ವಾರ್ನರ್‌-ಬೇರ್‌ ಸ್ಟೊ ಜೋಡಿಯ ಡ್ಯಾಶಿಂಗ್‌ ಆರಂಭಿಕ ಆಟವನ್ನು ಹೆಚ್ಚು ಅವಲಂಬಿಸಿದೆ. ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದ ಕೇನ್‌ ವಿಲಿಯಮ್ಸನ್‌ ಈ ಪಂದ್ಯದಲ್ಲಿ ಮರಳಿ ನಾಯಕತ್ವ ವಹಿಸುವ ಸಾಧ್ಯತೆ ಇದೆ. ಕನ್ನಡಿಗ ಮನೀಷ್‌ ಪಾಂಡೆ ಕ್ಲಿಕ್‌ ಆಗದೇ ಇರುವುದೊಂದು ಸಮಸ್ಯೆ. ಯೂಸುಫ್ ಪಠಾಣ್‌, ವಿಜಯ್‌ ಶಂಕರ್‌ ಆಟ ಸಾಮಾನ್ಯ. ಹೈದರಾಬಾದ್‌ ಬೌಲಿಂಗ್‌ ಹೆಚ್ಚು ಘಾತಕ. ರಶೀದ್‌, ನಬಿ, ಭುವನೇಶ್ವರ್‌, ಸಂದೀಪ್‌ ಶರ್ಮ ಸಂಘಟಿತ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next