ಹೈದರಾಬಾದ್ : ಇಲ್ಲಿನ ಉಸ್ಮಾನಿಯಾ ಸರಕಾರಿ ಆಸ್ಪತ್ರೆಯ ಮಾರ್ಚರಿಯಲ್ಲಿ ಇರಿಸಲಾಗಿದ್ದ 21ರ ಹರೆಯದ ಮಹಿಳೆಯ ಶವವನ್ನು ಇಲಿಗಳು ಕಚ್ಚಿ ವಿರೂಗೊಳಿಸಿದ ಅತ್ಯಂತ ಆಘಾತಕಾರಿ ಘಟನೆ ವರದಿಯಾಗಿದೆ.
ಇಲಿಗಳು ಕಚ್ಚಿ ತಿಂದು ವಿರೂಪಗೊಳಿಸಿದ ಮಹಿಳೆಯ ಶವ ಯು. ಮಧು ಎಂಬಾಕೆಯದ್ದಾಗಿದೆ. ಈಕೆ ಸೋಮವಾರ ರಾತ್ರಿ ಹಬೀಬ್‌ನಗರದಲ್ಲಿನ ಮಾಂಗಾರ್ ಬಸ್ತಿಯಲ್ಲಿರುವ ತನ್ನ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಳು.
ಅಂದೇ ರಾತ್ರಿ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಒಯ್ಯಲಾಗಿತ್ತು. ಪೊಲೀಸರು ಈ ಪ್ರಕರಣವನ್ನು ಸಂಶಯಾಸ್ಪದ ಸಾವೆಂದು ದಾಖಲಿಸಿಕೊಂಡಿದ್ದರು. ಮರಣೋತ್ತರ ಪರೀಕ್ಷೆಯ ಬಳಿಕ ಮೃತ ದೇಹವನ್ನು ಆಸ್ಪತ್ರೆಯ ಮಾರ್ಚರಿಗೆ ಸಾಗಿಸಲಾಗಿತ್ತು.
ಮೃತ ದೇಹವನ್ನು ಇಲಿಗಳು ತಿಂದು ವಿರೂಪಗೊಳಿಸುವಲ್ಲಿ ಆಸ್ಪತ್ರೆಯ ನಿರ್ಲಕ್ಷ್ಯವೇ ಕಾರಣವೆಂದು ಮೃತ ಮಹಿಳೆಯ ಮನೆಯವರು ದೂರಿದ್ದಾರೆ. ಆ ಪ್ರಕಾರ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಆಸ್ಪತ್ರೆಯ ಸುಪರಿಂಟೆಂಡೆಂಟ್ ಡಾ. ಬಿ. ನರೇಂದ್ರ ಅವರು ಹೇಳುವ ಪ್ರಕಾರ, “ಮಾರ್ಚರಿಯಲ್ಲಿನ ಎಲ್ಲ ಫ್ರೀಜರ್‌ಗಳು ಸರಿಯಾಗಿ ಕೆಲಸ ಮಾಡುತ್ತಿವೆ; ಇಲಿಗಳು ಪ್ರವೇಶಿಸುವುದಕ್ಕೆ ಯಾವುದೇ ತೂತುಗಳಿಲ್ಲ; ಬಹುಷಃ ಮಾರ್ಚರಿ ಸಿಬಂದಿಗಳು ಮೃತ ಮಹಿಳೆಯ ಶವ ಇರಿಸಲಾದ ಫ್ರೀಜರ್‌ನ ಬಾಗಿಲನ್ನು ಭದ್ರವಾಗಿ ಮುಚ್ಚಿಲ್ಲ’ ಎಂದು ಮಾಧ್ಯಮಗಳು ವರದಿ ಮಾಡಿವೆ.
ವಿಶೇಷವೆಂದರೆ ಆಸ್ಪತ್ರೆಯ ಮಾರ್ಚರಿಯಲ್ಲಿರುವ ಇತರ ಹಲವು ಶವಗಳು ಇಲಿಗಳ ದಾಳಿಗೆ ಗುರಿಯಾಗಿಲ್ಲ; ಅವೆಲ್ಲವೂ ಸರಿಯಾಗಿಯೇ ಇವೆ ಎಂದು ಮಾಧ್ಯಮಗಳು ಹೇಳಿವೆ.