Advertisement

ಹೈದರಾಬಾದ್ ಗ್ಯಾಂಗ್ ರೇಪ್ ಪ್ರಕರಣ ; ಪೊಲೀಸರಿಂದ ಮಹಿಳೆಯರಿಗೆ ಸುರಕ್ಷಾ ಮಾಹಿತಿ

10:01 AM Dec 03, 2019 | Hari Prasad |

ಹೈದರಾಬಾದ್: ನಗರದ ಹೊರವಲಯದಲ್ಲಿರುವ ಟೋಲ್ ಗೇಟ್ ಸಮೀಪದಿಂದ 26 ವರ್ಷದ ಪಶುವೈದ್ಯೆಯನ್ನು ಅಪಹರಿಸಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ ಸುಟ್ಟು ಕೊಂದ ಭೀಕರ ಘಟನೆಯ ಬಳಿಕ ನಗರ ಪೊಲೀಸರು ಮಹಿಳೆಯ ಸುರಕ್ಷತೆಯ ದೃಷ್ಟಿಯಿಂದ ಕೆಲವೊಂದು ಸೂಚನೆಗಳನ್ನು ಇಂದು ಪ್ರಕಟಿಸಿದ್ದಾರೆ. ಮಹಿಳೆಯರು ಮತ್ತು ಹುಡುಗಿಯರು ತಾವು ಒಬ್ಬರೇ ಪ್ರಯಾಣಿಸುವ ಸಂದರ್ಭದಲ್ಲಿ ಗಮನದಲ್ಲಿಟ್ಟುಕೊಳ್ಳಲೇಬೇಕಾದ ಪ್ರಮುಖ ಸೂಚನೆಗಳು ಇಂತಿವೆ.

Advertisement

1. ಮಹಿಳೆಯೊಬ್ಬಳು ತಾನು ಮನೆಯಿಂದ ಅಥವಾ ತನ್ನ ಕೆಲಸದ ಸ್ಥಳದಿಂದ ಹೊರ ಹೋಗುವ ಸಂದರ್ಭದಲ್ಲಿ ತನ್ನ ಮನೆಯವರಿಗೆ/ಸಂಬಂಧಿಗಳಿಗೆ ಅಥವಾ ಗೆಳತಿಯರಲ್ಲಿ ತಾನು ಎಲ್ಲಿಗೆ ಹೋಗುತ್ತಿದ್ದೇನೆ ಮತ್ತು ಎಷ್ಟು ಹೊತ್ತಿಗೆ ಹಿಂತಿರುಗಿ ಬರಬಹುದು ಎಂಬ ಮಾಹಿತಿಯನ್ನು ನೀಡಿ ತೆರಳಬೇಕು.

2. ಸಾಧ್ಯವಾದಲ್ಲಿ ತಾನು ತಲುಪಿದ ಜಾಗದ ಲೊಕೇಷನ್ ಅನ್ನು ಹಂಚಿಕೊಳ್ಳುವುದು ಉತ್ತ,

3. ಇನ್ನು ಮಹಿಳೆಯು ತಾನು ಪ್ರಯಾಣಿಸುವ ಸಂದರ್ಭದಲ್ಲಿ ಟ್ಯಾಕ್ಸಿ ಅಥವಾ ಆಟೋ ರಿಕ್ಷಾದ ನಂಬರ್ ಪ್ಲೇಟ್ ಚಿತ್ರವನ್ನು ಮತ್ತು ಚಾಲಕನ ಸೀಟಿನ ಹಿಂಭಾಗದಲ್ಲಿ ಪ್ರಕಟಿಸಿರುವ ಸಂಪರ್ಕ ಮಾಹಿತಿಯನ್ನು (ಟ್ಯಾಕ್ಸಿ ಐಡಿ ಕಾರ್ಡ್) ಹಂಚಿಕೊಳ್ಳುವುದು.

4. ಒಂದುವೇಳೆ ನೀವು ಅಪರಿಚಿತ ಜಾಗಕ್ಕೆ ಪ್ರಯಾಣಿಸುತ್ತಿದ್ದಲ್ಲಿ ಆ ಜಾಗದ ಕುರಿತಾಗಿ ಮೊದಲೇ ತಿಳಿದಿಕೊಳ್ಳುವುದು ಉತ್ತಮ.

Advertisement

5. ಬಸ್ಸು, ಟ್ಯಾಕ್ಸಿ ಅಥವಾ ಇನ್ಯಾರಿಗಾದರೂ ಕಾಯುತ್ತಿರುವ ಸಂದರ್ಭದಲ್ಲಿ ಏಕಾಂತ ಪ್ರದೇಶದಲ್ಲಿ ನಿಲ್ಲುವ ಬದಲು ಜನಸಂದಣಿ ಇರುವ ಪ್ರದೇಶದಲ್ಲಿಯೇ ಕಾಯಿರಿ. ಮತ್ತು ನಿಮ್ಮ ಸುರಕ್ಷತೆಗೆ ಅಪಾಯವಾಗುತ್ತಿದೆ ಎಂದು ನಿಮಗೆ ಗೊತ್ತಾದ ತಕ್ಷಣ ಪೊಲೀಸ್ ಗಸ್ತು ವಾಹನಗಳಿಗೆ ಅಥವಾ ಬ್ಲೂ ಕೋಲ್ಟ್ ಪೊಲೀಸ್ ಮೊಟಾರ್ ಸೈಕಲ್ಲಿಗೆ ಸೂಚನೆ ಮತ್ತು ಮಾಹಿತಿಯನ್ನು ನೀಡಲು ಯಾವತ್ತೂ ಹಿಂಜರಿಯಬೇಡಿ. ಅವರು ನಿಮ್ಮ ಸಹಾಯಕ್ಕಾಗಿ ಸದಾ ಸಿದ್ಧರಿರುತ್ತಾರೆ.

6. ನಿಮ್ಮ ಸುತ್ತಮುತ್ತ ಜನಸಂಚಾರ ಇಲ್ಲದೇ ಇದ್ದ ಸಂದರ್ಭದಲ್ಲಿ ಹತ್ತಿರದ ಅಂಗಡಿ ಅಥವಾ ವಾಣಿಜ್ಯ ಸಂಕೀರ್ಣದ ಬಳಿಯಲ್ಲಿ ನಿಲ್ಲಿ. ಇದರಿಂದ ನಿಮಗೆ ಅಪಾಯ ಉಂಟಾಗುವ ಸಾಧ್ಯತೆಗಳು ತುಂಬಾ ಕಡಿಮೆ ಇರುತ್ತದೆ.

7. ಯಾವುದೇ ತುರ್ತು ಸಂದರ್ಭದಲ್ಲಿ 100 ನಂಬರ್ ಗೆ ಡಯಲ್ ಮಾಡಲು ಸದಾ ಸಿದ್ಧರಾಗಿರಿ.

8. ಶಂಕಾಸ್ಪದ ಸನ್ನಿವೇಶಗಳಲ್ಲಿ ಸಹ ಪ್ರಯಾಣಿಕರ ಮತ್ತು ಸುತ್ತಮುತ್ತಲಿನ ವ್ಯಕ್ತಿಗಳ ಸಹಾಯವನ್ನು ಪಡೆದುಕೊಳ್ಳಿ.

9. ನಿಮ್ಮ ಸುತ್ತಮುತ್ತ ಯಾವುದೇ ಸಹ ಪ್ರಯಾಣಿಕರು ಅಥವಾ ಜನಸಮೂಹ ಇಲ್ಲದೇ ಇದ್ದ ಪಕ್ಷದಲ್ಲಿ ನಿಮ್ಮ ಸಂಬಂಧಿ ಪೊಲೀಸ್ ಹತ್ತಿರ ಮೊಬೈಲ್ ನಲ್ಲಿ ಮಾತನಾಡುತ್ತಿರುವಂತೆ ನಟಿಸಿ ಹಾಗೂ ನೀವಿರುವ ಸ್ಥಳದ ಎಲ್ಲಾ ಮಾಹಿತಿಯನ್ನು ಫೋನಿನಲ್ಲಿ ಹಂಚಿಕೊಳ್ಳುತ್ತಿರುವಂತೆ ನಟಸಿ, ಇದು ನಿಮಗೆ ಅಪಾಯ ಉಂಟುಮಾಡಲಿರುವ ವ್ಯಕ್ತಿ/ವ್ಯಕ್ತಿಗಳಿಗೆ ಭಯವನ್ನುಂಟುಮಾಡಬಹುದು.

10. ಯಾವುದೇ ಸಂದರ್ಭದಲ್ಲಿ ಧೃತಿಗೆಡದಿರಿ ಮತ್ತು ಅಗತ್ಯಬಿದ್ದಲ್ಲಿ ಸಹಾಯಕ್ಕಾಗಿ ಕೂಗಿಕೊಳ್ಳಿ. ಮತ್ತು ಸಾಧ್ಯವಾದಷ್ಟು ಜನಸಂದಣಿ ಇರುವ ಪ್ರದೇಶಕ್ಕೆ ಓಡಿಹೋಗಿ.

Advertisement

Udayavani is now on Telegram. Click here to join our channel and stay updated with the latest news.

Next