Advertisement

ಪೌರತ್ವ ಮಸೂದೆಯ ಪ್ರತಿಯನ್ನು ಹರಿದು ಹಾಕಿದ ಒವೈಸಿ ; ತನ್ನನ್ನು ಗಾಂಧೀಜಿಗೆ ಹೋಲಿಸಿಕೊಂಡ ಸಂಸದ

09:53 AM Dec 10, 2019 | Team Udayavani |

ನವದೆಹಲಿ: ನೆರೆದೇಶಗಳಿಂದ ಭಾರತಕ್ಕೆ ವಲಸೆ ಬಂದು ಇಲ್ಲಿ ನೆಲೆಸಿರುವ ಮುಸ್ಲಿಮೇತರರಿಗೆ ಭಾರತದ ಪೌರತ್ವವನ್ನು ನೀಡಲು ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಕೇಂದ್ರ ಸರಕಾರವು ತಿದ್ದುಪಡಿಗೆ ಉದ್ದೇಶಿಸಿರುವ ಬಹುಚರ್ಚಿತ ಪೌರತ್ವ ಮಸೂದೆ ತಿದ್ದುಪಡಿಗೆ ಸಂಬಂಧಿಸಿದಂತೆ ಲೋಕಸಭೆಯಲ್ಲಿ ಗಂಭೀರ ಚರ್ಚೆಯಾಗುತ್ತಿದೆ.

Advertisement

ಈ ಚರ್ಚೆಯ ಸಂದರ್ಭದಲ್ಲಿ ಹೈದರಾಬಾದ್ ಸಂಸದ ಅಸಾದುದ್ದೀನ್ ಒವೈಸಿ ಅವರು ಸಂಸತ್ತಿನಲ್ಲಿ ಮಸೂದೆಯ ಪ್ರತಿಯನ್ನು ಹರಿದು ಬಿಸಾಡುವ ಮೂಲಕ ವಿವಾದ ಹುಟ್ಟುಹಾಕಿದ್ದಾರೆ.

ಈ ತಿದ್ದುಪಡಿ ಮಸೂದೆ ದೇಶದ ಮುಸ್ಲಿಂ ಸುಮದಾಯದ ಹಿತಾಸಕ್ತಿಗೆ ವಿರುದ್ಧವಾಗಿದೆ ಮತ್ತು ಅವರನ್ನು ದೇಶ ರಹಿತರನ್ನಾಗಿ ಮಾಡುವ ಹುನ್ನಾರ ಇದರಲ್ಲಿ ಅಡಗಿದೆ ಎಂದು ಒವೈಸಿ ಅವರು ಸಂಸತ್ತಿನಲ್ಲಿ ಕಿಡಿಕಾರಿದ್ದಾರೆ. ಇದೊಂದು ಸಂವಿಧಾನ ವಿರೋಧಿ ಕ್ರಮ ಎಂಬುದು ಒವೈಸಿ ವಾದವಾಗಿದೆ.

ಭಾರತದ ಕೆಲ ಭಾಗಗಳನ್ನು ಆಕ್ರಮಿಸಿಕೊಂಡಿರುವ ಚೀನಾ ಮತ್ತು ಇನ್ನಿತರ ಕೆಲ ನೆರೆ ರಾಷ್ಟ್ರಗಳನ್ನು ಈ ಮಸೂದೆಯಲ್ಲಿ ಯಾಕೆ ಸೇರಿಸಿಲ್ಲ, ನೀವು ಚೀನಾ ದೇಶಕ್ಕೆ ಹೆದರುತ್ತೀರಾ ಎಂದು ಒವೈಸಿ ಅವರು ಕಟು ಮಾತುಗಳಲ್ಲಿ ಸರಕಾರವನ್ನು ಪ್ರಶ್ನಿಸಿದ್ದಾರೆ.

ಕೇಂದ್ರ ಸರಕಾರ ಮಾಡಲು ಹೊರಟಿರುವ ಈ ಕ್ರಮ ದೇಶದ ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡಿರುವ ಅವಮಾನವಾಗಿದೆ. ಈ ದೇಶದ ಮುಸ್ಲಿಂರನ್ನು ಮೂಲೆಗುಂಪು ಮಾಡಲು ಸರಕಾರ ಹೊರಟಂತಿದೆ ಮತ್ತು ಸರಕಾರದ ಈ ಕ್ರಮ ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ಜಾರಿಗೆ ತಂದಿದ್ದ ಜನಾಂಗೀಯ ತಾರತಮ್ಯ ನೀತಿಗಿಂತಲೂ ಕ್ರೂರವಾದದ್ದು ಎಂದು ಒವೈಸಿ ಅಭಿಪ್ರಾಯಪಟ್ಟಿದ್ದಾರೆ.

Advertisement

ಈ ಮಸೂದೆಗೆ ತಿದ್ದುಪಡಿ ತರುವ ಮೂಲಕ ಮಹಮ್ಮದ್ ಅಲಿ ಜಿನ್ನಾ ಅವರ ದ್ವಿರಾಷ್ಟ್ರ ಕಲ್ಪನೆಯನ್ನು ನೀವು ಸಾಕಾರಗೊಳಿಸಲು ಹೊರಟಂತಿದೆ. ಓರ್ವ ಭಾರತೀಯ ಮುಸ್ಲಿಂ ಆಗಿರುವ ನಾನು ಜಿನ್ನಾ ಅವರ ದ್ವಿರಾಷ್ಟ್ರ ಕಲ್ಪನೆಯನ್ನು ತಿರಸ್ಕರಿಸಿದವನಾಗಿದ್ದೇನೆ ಎಂದು ಒವೈಸಿ ಇದೇ ಸಂದರ್ಭದಲ್ಲಿ ಹೇಳಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ ಗಾಂಧೀಜಿ ಅವರು ಪೌರತ್ವ ಕಾರ್ಡ್ ಅನ್ನು ಹರಿದು ಹಾಕಿದ ನಂತರ ಅವರು ಮಹಾತ್ಮ ಎಂದು ಗುರುತಿಸಲ್ಪಟ್ಟರು ಎಂದು ಒವೈಸಿ ಅವರು ಸಂಸತ್ತಿನಲ್ಲಿ ತಾನು ಮಾಡಿದ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next