ಹೈದರಾಬಾದ್: ಕರ್ನಾಟಕದ ಸಚಿವ ಶಿವಾನಂದ ಪಾಟೀಲ್ ಅವರ ಮುಂದೆಯೇ ನೋಟುಗಳನ್ನು ಎಸೆಯುತ್ತಾ ಸಂಭ್ರಮ ಆಚರಿಸುತ್ತಿರುವ ವೀಡಿಯೋ ವೈರಲ್ ಆಗಿದ್ದು, ಇದಕ್ಕೆ ಎಲ್ಲೆಡೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಈ ಬಗ್ಗೆ ಈಗ ಖುದ್ದು ಸಚಿವರೇ ಸ್ಪಷ್ಟನೆ ನೀಡಿದ್ದಾರೆ.
ವೀಡಿಯೋ ಸಂಬಂಧಿಸಿ ಮಾಧ್ಯಮಗಳ ಜತೆಗೆ ಮಾತನಾಡಿರುವ ಸಚಿವ ಶಿವಾನಂದ ಪಾಟೀಲ್, ಹೈದರಾಬಾದ್‌ನಲ್ಲಿ ಅಯಾಜ್ ಖಾನ್ ಎಂಬವರ ಮಗನ ಮದುವೆಗೆಂದು ತೆರಳಿದ್ದೆ. ಅಲ್ಲಿ ಕವಾಲಿ (ಸಾಂಸ್ಕೃತಿಕ) ಸಮಾರಂಭವನ್ನು ಅವರು ಆಯೋಜಿಸಿದ್ದರು. ಸಮಾರಂಭ ಮುಗಿಯುತ್ತಿದ್ದಂತೆ ಅವರೇ ಹಣವನ್ನು ಚೆಲ್ಲಿ ಸಂಭ್ರಮಿಸಿದರು. ಆದರೆ ಆ ವಿಷಯದಲ್ಲಿ ನನದೆ ಯಾವುದೇ ಸಂಬಂಧವಿಲ್ಲ. ನಾನಲ್ಲಿ ಕೇವಲ ವೀಕ್ಷಕನಾಗಿದ್ದೆ ಅಷ್ಟೇ ಎಂದಿದ್ದಾರೆ.
ಸಚಿವ ಶಿವಾನಂದ ಪಾಟೀಲ್ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ನೋಟುಗಳನ್ನು ಎಸೆದು ಸಂಭ್ರಮಿಸಿದ್ದಾರೆ. ಸಚಿವರ ಕಾಲಿನಡಿಯೇ ಕೋಟಿ ರೂ.ಗೂ ಹೆಚ್ಚು ರಾಶಿ ಬಿದ್ದಿತ್ತು. ಇದರ ಕುರಿತು ಸಂಪೂರ್ಣ ತನಿಖೆ ಆಗಬೇಕು. ಈ ಕುರಿತು ಸಿಎಂ, ಡಿಸಿಎಂ ಸ್ಪಷ್ಟ ಹೇಳಿಕೆ ಕೊಡಬೇಕು.
-ಎನ್.ರವಿಕುಮಾರ್, ಬಿಜೆಪಿ ರಾಜ್ಯ ಪ್ರ.ಕಾರ್ಯದರ್ಶಿ
ಸಚಿವ ಶಿವಾನಂದ ಪಾಟೀಲ್ ಕಾನೂನಿಗೆ ವಿರುದ್ಧವಾಗಿ ವರ್ತಿಸಿದ್ದಾರೆ. ತೆಲಂಗಾಣ ಸರಕಾರ ಶಿವಾನಂದ ಪಾಟೀಲ್ ವಿರುದ್ಧ ದೂರು ದಾಖ ಲಿಸಿ ಬಂಧಿಸಲಿ. ರೈತರು ಬರದಲ್ಲಿ ಸಂಕಷ್ಟಲ್ಲಿರುವಾಗ ಒಬ್ಬ ಸಚಿವ ಹೀಗೆ ಹಣ ಚೆಲ್ಲುವುದು ಎಷ್ಟು ಸರಿ?
ಡಾ| ಅಶ್ವತ್ಥನಾರಾಯಣ, ಮಾಜಿ ಸಚಿವ
ಯಾರೋ ಮಾಡಿದ್ದಕ್ಕೆ ನಾನು ಹೇಗೆ ಕಾರಣನಾಗಬೇಕು? ವಿವಾಹಕ್ಕೆ ಅಲ್ಲಿನ ಗೃಹ ಸಚಿವರೂ ಆಗಮಿಸಿ ದ್ದರು. ಮದುವೆಗೆ ಹೋಗಬಾರದಾ? ದುಡ್ಡು ಎಸೆಯುವುದು ಅಲ್ಲಿನ ಸಂಸ್ಕೃತಿ, ನಾನು ಹೋಗಿ ಅವರ ಸಂಸ್ಕೃತಿ ನಿಲ್ಲಿಸಲು ಆಗುತ್ತದೆಯೇ?
-ಶಿವಾನಂದ ಪಾಟೀಲ್, ಸಚಿವ