ಹೈದರಾಬಾದ್: ಪ್ರಿಯತಮೆಯನ್ನು ವಿದೇಶಕ್ಕೆ ಕಳುಹಿಸಿದ್ದಕ್ಕಾಗಿ ವ್ಯಕ್ತಿಯೊಬ್ಬ ಆಕೆಯ ತಂದೆಯ ಮೇಲೆ ಗುಂಡು ಹಾರಿಸಿರುವ ಘಟನೆ ಹೈದರಬಾದ್‌ನಲ್ಲಿ ನಡೆದಿರುವುದು ವರದಿಯಾಗಿದೆ.
ಪ್ರಕರಣ ಸಂಬಂಧ 25 ವರ್ಷದ ಯುವಕ ಬಲ್ವಿಂದರ್ ಸಿಂಗ್ ಎಂಬಾತನನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ.
ಬಲ್ವಿಂದರ್ ತನ್ನ ಮಗಳಿಗೆ ಪ್ರೀತಿಯ ಹೆಸರಿನಲ್ಲಿ ಕಿರುಕುಳ ನೀಡುತ್ತಿದ್ದಾನೆ ಮತ್ತು ಈ ವಿಷಯದ ಬಗ್ಗೆ ಇತ್ತೀಚೆಗೆ ತನ್ನೊಂದಿಗೆ ಜಗಳವಾಡಿದ್ದಾನೆ. ಇದಕ್ಕಾಗಿ ನಾನು ಮಗಳನ್ನು ಯುಎಸ್ ಗೆ ಕಳುಹಿಸಿದ್ದೇನೆ ಎಂದು ಯುವತಿಯ ತಂದೆ ದೂರಿನಲ್ಲಿ ಹೇಳಿದ್ದಾರೆ.
ಬಲ್ವಿಂದರ್ ಸಿಂಗ್ ಮತ್ತು ಯುವತಿ ಒಂದೇ ತರಗತಿಯಲ್ಲಿ ಓದುತ್ತಿದ್ದು, ಪರಸ್ಪರ ಪ್ರೀತಿಸುತ್ತಿದ್ದಾರೆ ಎನ್ನಲಾಗಿದೆ. ಆದರೆ ಈ ಸಂಬಂಧ ಯುವತಿಯ ತಂದೆಗೆ ಇಷ್ಟವಿರಲಿಲ್ಲ ಎನ್ನಲಾಗಿದೆ. ಮಗಳನ್ನು ಆತನಿಂದ ದೂರವಿಡಬೇಕೆನ್ನುವ ಉದ್ದೇಶದಿಂದ ಆಕೆಯನ್ನು ವಿದೇಶಕ್ಕೆ ಕಳುಹಿಸಿದ್ದರು.
ಈ ವಿಚಾರದಿಂದ ಸಿಟ್ಟಿಗೆದ್ದಿದ್ದ ಬಲ್ವಿಂದರ್ ಭಾನುವಾರ (ನ.10ರಂದು) ಏರ್‌ಗನ್ ಹಿಡಿದುಕೊಂಡು ಅಪಾರ್ಟ್ಮೆಂಟ್ ಗೆ ನುಗ್ಗಿದ್ದಾನೆ. ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಬಲ್ವಿಂದರ್ ಸಿಟ್ಟಿನಿಂದ ಯುವತಿಯ ತಂದೆಯ ಮೇಲೆ ಗುಂಡು ಹಾರಿಸಿ ಪರಾರಿ ಆಗಿದ್ದಾನೆ. ಪರಿಣಾಮ ವ್ಯಕ್ತಿಯ ಬಲ ಕಣ್ಣಿಗೆ ಗಾಯವಾಗಿದೆ.
ಸದ್ಯ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಬಲ್ವಿಂದರ್ ವಿರುದ್ಧ ಸರೂರ್ನಗರ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 109 (ಕೊಲೆ ಯತ್ನ) ಅಡಿಯಲ್ಲಿ ದೂರು ದಾಖಲಿಸಿ ಬಂಧಿಸಲಾಗಿದೆ.