ಬೆಂಗಳೂರು: ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಎಂದು ನಾಮಕರಣ ಮಾಡಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, ಇದು ಹೈಕ ಭಾಗಕ್ಕೆ ಕಲ್ಯಾಣ ಕರ್ನಾಟಕ ಎಂಬ ಹೆಸರಿಡುವ ಮೊದಲ ಹೆಜ್ಜೆ ಎಂದು ಭಾವಿಸಲಾಗಿದೆ.
ಆ ಭಾಗದ ಜನಪ್ರತಿನಿಧಿಗಳ ಬೇಡಿಕೆ ಹಿನ್ನೆಲೆಯಲ್ಲಿ ಮಂಡಳಿ ಹೆಸರು ಬದಲಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ಸೆಪ್ಟೆಂಬರ್ 17 ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕಲಬುರಗಿಗೆ ಭೇಟಿ ನೀಡಿ ಹೈದರಾಬಾದ್ ಕರ್ನಾಟಕ ವಿಮೋಚನಾ ದಿನದ ಹಿನ್ನೆಲೆಯಲ್ಲಿ, ಧ್ವಜಾರೋಹಣ ನೆರವೇರಿಸಲಿದ್ದು ಅಂದು ಕಲ್ಯಾಣ ಕರ್ನಾಟಕ ಎಂದು ಘೋಷಣೆಯಾಗಲಿದೆ ಎಂದು ಮೂಲಗಳು ತಿಳಿಸಿವೆ. ಇದರೊಂದಿಗೆ, ಈವರೆಗೆ ಹೈದರಾಬಾದ್ ಕರ್ನಾಟಕ ಎಂದೇ ಕರೆಯಿಸಿಕೊಳ್ಳುತ್ತಿರುವ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು,ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳ ಭಾಗಕ್ಕೆ ಕಲ್ಯಾಣ ಕರ್ನಾಟಕ ಎಂಬ ಹೆಸರು ಬರಲಿದೆ.
ಸ್ಥಳಾಂತರ ಕೈ ಬಿಡಲು ತೀರ್ಮಾನ: ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯರ ಪೈಕಿ ಒಬ್ಬರ ಕಚೇರಿ ಧಾರವಾಡಕ್ಕೆ ಸ್ಥಳಾಂತರಿಸು ವುದುನ್ನು ಕೈ ಬಿಡಲು ಸಂಪುಟದಲ್ಲಿ ನಿರ್ಧರಿಸಲಾಗಿದೆ. ಆಯೋಗದ ಸದಸ್ಯರು ಬೆಂಗಳೂರಿನಿಂದಲೇ ಕಾರ್ಯನಿರ್ವಹಿಸುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಕೊಂಕಣ ರೈಲ್ವೆ ನಿಗಮಕ್ಕೆ ಎರಡನೇ ಹಕ್ಕುಗಳ ವಿತರಣೆಯ ವಂತಿಕೆಯಾಗಿ 29.40 ಕೋಟಿ ರೂ. ರಾಜ್ಯ ಸರ್ಕಾರದಿಂದ ನೀಡುವುದು. ಕೊಪ್ಪಳ-ಗಿಣಿಗೇರಾ ರೈಲು ನಿಲ್ದಾಣದಲ್ಲಿ ಬರುವ ಮೇಲುಸೇತುವೆ ಕಾಮಗಾರಿ 23.65 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳುವುದು ಎಂದು ಹೇಳಿದರು.