Advertisement

ಹೈ-ಕ ಅಭಿವೃದ್ಧಿಗಾಗಿ ಮುಖ್ಯಮಂತ್ರಿಗೆ ಮನವಿ

07:00 AM Sep 07, 2018 | |

ಬೆಂಗಳೂರು: ಹೈದರಾಬಾದ್‌ ಕರ್ನಾಟಕ ಪ್ರದೇಶಕ್ಕೆ 371ಜೆ ತಿದ್ದುಪಡಿ ನಂತರ ವಿಶೇಷ ಸ್ಥಾನಮಾನ ದೊರೆತರೂ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ರಾಷ್ಟ್ರೀಯ ಉತ್ಪಾದನಾ ಹಾಗೂ ಹೂಡಿಕೆ ವಲಯ (ನಿಮ್‌j)  ಸ್ಥಾಪನೆಗೆ ಅನುಮತಿ ನೀಡದೆ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ ಎಂದು ಹೈದರಾಬಾದ್‌ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಪದಾಧಿಕಾರಿಗಳ ನಿಯೋಗ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಮನವಿ ಸಲ್ಲಿಸಿದೆ.

Advertisement

ಹೈದರಾಬಾದ್‌ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ದೊರೆತು ಐದು ವರ್ಷ ಕಳೆದರೂ ವಿದ್ಯಾರ್ಥಿಗಳಿಗೆ ವಿಶೇಷ ಸ್ಥಾನಮಾನದ ಪ್ರಮಾಣ ಪತ್ರ ಹಾಗೂ ವೃತ್ತಿಪರ ಕೋರ್ಸ್‌ಗಳಲ್ಲಿ ಕೆಲವು ಸೀಟ್‌ಗಳು ದೊರೆಯುತ್ತಿರುವುದನ್ನು ಹೊರತುಪಡೆಸಿದರೆ, ಕಣ್ಣಿಗೆ ಕಾಣುವಂತಹ ಅಭಿವೃದ್ಧಿಯಾಗಿಲ್ಲ ಎಂದು ಮಾಜಿ ಸಚಿವ ವೈಜನಾಥ ಪಾಟೀಲ್‌ ನೇತೃತ್ವದ ನಿಯೋಗ ಮುಖ್ಯಮಂತ್ರಿಗೆ ತಿಳಿಸಿದೆ.

ಪ್ರಮುಖವಾಗಿ 371 ಜೆ ಕಾಯ್ದೆ ಜಾರಿಗೆ ಪ್ರತ್ಯೇಕ ಸಚಿವರು ಮತ್ತು ಸಚಿವಾಲಯ ತೆರೆಯಬೇಕು. ಕೇಂದ್ರ ಸರ್ಕಾರ ಅನುಮತಿ ನೀಡಿರುವ ರಾಷ್ಟ್ರೀಯ ಹೂಡಿಕೆ ಮತ್ತು ಉತ್ಪಾದನಾ ವಲಯವನ್ನು ಕಲಬುರಗಿಯಲ್ಲಿ ಆರಂಭಿಸಲು ಅನುಮತಿ ನೀಡಬೇಕು. 2013 ರಲ್ಲಿ ಕೇಂದ್ರ ಸರ್ಕಾರ ತುಮಕೂರು ಹಾಗೂ ಕಲಬುರಗಿಗೆ ಎರಡು ಉತ್ಪಾದನಾ ವಲಯಗಳನ್ನು ಮಂಜೂರು ಮಾಡಿದ್ದು, ತುಮಕೂರು ವಲಯ ಈಗಾಗಲೇ ಕಾರ್ಯಾರಂಭ ಮಾಡಿ ಸಾವಿರಾರು ಜನರಿಗೆ ಉದ್ಯೋಗ ದೊರೆಯುವಂತಾಗಿದೆ. ಆದರೆ, ರಾಜ್ಯ ಸರ್ಕಾರದ ವಿಳಂಬ ಧೋರಣೆಯಿಂದ ಕಲಬುರಗಿ ನಿಮ್‌j (ರಾಷ್ಟ್ರೀಯ ಉತ್ಪಾದನಾ ಹಾಗೂ ಹೂಡಿಕೆ ವಲಯ) ಸ್ಥಾಪನೆ ನೆನೆಗುದಿಗೆ ಬಿದ್ದಿದೆ. ರಾಜ್ಯ ಸರ್ಕಾರ ಅನುಮತಿ ನೀಡಿದರೆ ಸುಮಾರು 2.5 ಲಕ್ಷ ಜನರಿಗೆ ಉದ್ಯೋಗ ದೊರೆಯಲಿದೆ ಎಂದು ಮುಖ್ಯಮಂತ್ರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ತೊಗರಿ ಮಂಡಳಿಯನ್ನು ಕೆಎಂಎಫ್ ಮಾದರಿಯಲ್ಲಿ ಸ್ವತಂತ್ರ ಸಂಸ್ಥೆಯನ್ನಾಗಿ ಘೋಷಿಸುವುದು, ಕೃಷಿ ಉತ್ಪನ್ನಗಳ ಬೆಂಬಲ ಬೆಲೆ ಮಾರಾಟಕ್ಕೆ ಭಾವಾಂತರ ಯೋಜನೆ ಜಾರಿಗೊಳಿಸುವುದು. ತೊಗರಿ ಕೈಗಾರಿಕೆಗಳನ್ನು ಪುನಶ್ಚೇತನಗೊಳಿಸಲು ವಿಶೇಷ ಪ್ಯಾಕೇಜ್‌ ನೀಡುವುದು, ಕಲಬುರಗಿ ವಿಮಾನ ನಿಲ್ದಾಣವನ್ನು ಉಡಾನ್‌ ಯೋಜನೆ ವ್ಯಾಪ್ತಿಗೊಳಪಡಿಸುವುದು ಮತ್ತು ಕಲಬುರಗಿ ರೈಲ್ವೆ ವಿಭಾಗ ರಚನೆ ಮಾಡುವಂತೆ ಮನವಿ ಸಲ್ಲಿಸಿದ್ದಾರೆ.

ಅವರ ಮನವಿಗೆ ಸ್ಪಂದಿಸಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, ಹೈದರಾಬಾದ್‌ ಕರ್ನಾಟಕ ಭಾಗದ ಅಭಿವೃದ್ಧಿ ಕುರಿತು ಚರ್ಚಿಸಲು ಕಲಬುರಗಿಯಲ್ಲಿ ವಿಶೇಷ ಸಭೆ ಕರೆಯಲಾಗುವುದು ಎಂದು ಹೇಳಿದ್ದಾರೆ.

Advertisement

ಹೈದರಾಬಾದ್‌ ಕರ್ನಾಟಕ ಭಾಗದಲ್ಲಿ ಶಿಕ್ಷಣ, ಉದ್ಯೋಗ ಮತ್ತಿತರ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವ ಬಗ್ಗೆ ಸರ್ಕಾರ ಸಮಗ್ರವಾಗಿ ತೀರ್ಮಾನ ಕೈರ್ಗೊಳ್ಳಲಿದೆ. ಅದಕ್ಕೂ ಮೊದಲು ಆ ಭಾಗದ ಸಮಸ್ಯೆಗಳ ಕುರಿತು ಎಲ್ಲ ಜಿಲ್ಲೆಗಳ ಮುಖಂಡರ ಜೊತೆ ಚರ್ಚೆ ನಡೆಸುವುದಾಗಿ ತಿಳಿಸಿದರು.

ರಾಜ್ಯ ಸರ್ಕಾರ ಈ ಭಾಗದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಉತ್ತೇಜನ ನೀಡುತ್ತಿದ್ದು, ಕಲಬುರಗಿಯಲ್ಲಿ ಸೋಲಾರ್‌ ಉಪಕರಣ ತಯಾರಿಕೆ, ಕೊಪ್ಪಳದಲ್ಲಿ ಆಟಿಕೆಗಳ ಉಪಕರಣ ತಯಾರಿಕೆ, ಬಳ್ಳಾರಿಯಲ್ಲಿ ವಸ್ತ್ರೋದ್ಯಮದ ಕ್ಲಸ್ಟರ್‌ ಸ್ಥಾಪಿಸಲು ಉದ್ದೇಶಿಸಲಾಗಿದೆ. ಆ ಭಾಗದಲ್ಲಿ ಸಾಕಷ್ಟು ಅನುದಾನ ನೀಡಿದರೂ, ಸಮರ್ಪಕವಾಗಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಅಧಿಕಾರಿಗಳು ಮತ್ತು ಸಿಬ್ಬಂದಿ ಕೊರತೆ ಇರುವುದು ಸರ್ಕಾರದ ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ಸಿಬ್ಬಂದಿ ಕೊರತೆ ನೀಗಿಸಲು ಕ್ರಮ ವಹಿಸುವುದಾಗಿ ತಿಳಿಸಿದರು. ಅಲ್ಲದೇ ಕಲಬುರಗಿಯಲ್ಲಿ ಹೈದರಾಬಾದ್‌ ಕರ್ನಾಟಕ ವಿಶೇಷ ಕೋಶ ಸ್ಥಾಪಿಸುವ ಕುರಿತು ಪರಿಶೀಲಿಸುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ.

ತುಮಕೂರು ಮತ್ತು ಕಲಬುರಗಿಗೆ ಏಕಕಾಲಕ್ಕೆ ರಾಷ್ಟ್ರೀಯ ಉತ್ಪಾದನಾ ಹಾಗೂ ಹೂಡಿಕೆ ವಲಯ ಸ್ಥಾಪಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಆದರೆ, ತುಮಕೂರಿನ ವಲಯ ಆರಂಭಿಸಲಾಗಿದೆ. ಕಲಬುರಗಿ ವಲಯ ಸ್ಥಾಪನೆಗೆ ಮಾತ್ರ ರಾಜ್ಯ ಸರ್ಕಾರ ಅನುಮತಿ ನೀಡುತ್ತಿಲ್ಲ. ರಾಜ್ಯ ಸರ್ಕಾರ ಒಪ್ಪಿಗೆ ನೀಡಿದರೆ ಸುಮಾರು ಎರಡೂವರೆ ಲಕ್ಷ ಜನರಿಗೆ ಉದ್ಯೋಗ ದೊರೆಯಲಿದೆ.
– ಅಮರನಾಥ ಪಾಟೀಲ್‌, ಕಲಬುರಗಿ ಚೇಂಬರ್‌ ಆಫ್ ಕಾಮರ್ಸ್‌ ಅಧ್ಯಕ್ಷ.
 

Advertisement

Udayavani is now on Telegram. Click here to join our channel and stay updated with the latest news.

Next