Advertisement

Election: ಮಾರ್ಚ್ 16 ರಂದು ಪ್ರತಿಷ್ಠಿತ ಎಚ್ ಕೆಇ ಸಂಸ್ಥೆ ಚುನಾವಣೆ

02:37 PM Feb 14, 2024 | Team Udayavani |

ಕಲಬುರಗಿ: ಪ್ರತಿಷ್ಠಿತ ಹೈದ್ರಾಬಾದ್ ಕರ್ನಾಟಕ ಶಿಕ್ಷಣ (ಎಚ್ಕೆಇ)  ಸಂಸ್ಥೆ 2024- 2027 ನೇ ಸಾಲಿನ ಆಡಳಿತ ಮಂಡಳಿ ಚುನಾವಣೆ ಮುಂದಿನ ತಿಂಗಳು ಮಾರ್ಚ್ 16 ರಂದು ನಡೆಸಲು ನಿರ್ಧರಿಸಲಾಗಿದೆ.‌

Advertisement

ಸಂಸ್ಥೆಯ ಇಲ್ಲಿನ‌ ಪಿಡಿಎ ಇಂಜಿನಿಯರಿಂಗ್ ಕಾಲೇಜ್ ನ ಆಡಳಿತ ಮಂಡಳಿ ಕಚೇರಿಯಲ್ಲಿ ಸಂಸ್ಥೆ ಅಧ್ಯಕ್ಷ ಡಾ. ಭೀಮಾಶಂಕರ ಬಿಲಗುಂದಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಮಂಡಳಿ ಮಾಸಿಕ ಸಭೆಯಲ್ಲಿ ಚುನಾವಣಾ ದಿನಾಂಕ ನಿಗದಿಗೊಳಿಸಲಾಗಿದೆ.‌

ಸಂಸ್ಥೆಯ ಉಪಾಧ್ಯಕ್ಷ ಡಾ. ಶರಣಬಸಪ್ಪ ಹರವಾಳ, ಜಂಟಿ ಕಾರ್ಯದರ್ಶಿ ಡಾ.‌ಜಗನ್ನಾಥ ಬಿಜಾಪುರ, ಜಂಟಿ ಕಾರ್ಯದರ್ಶಿ ಡಾ.‌ಮಹಾದೇವಪ್ಪ ರಾಂಪೂರೆ,  ಆಡಳಿತ ಮಂಡಳಿ ಸದಸ್ಯರಾದ ಡಾ.ಶರಣಬಸಪ್ಪ ಕಾಮರೆಡ್ಡಿ, ಅರುಣಕುಮಾರ ಪಾಟೀಲ್, ಡಾ.‌ನಾಗೇಂದ್ರ ಮಂಠಾಳೆ, ಬಸವರಾಜ ಖಂಡೇರಾವ್, ಡಾ.‌ಕೈಲಾಸ ಪಾಟೀಲ್, ಸೋಮನಾಥ ನಿಗ್ಗುಡಗಿ, ಸಾಯಿನಾಥ ಪಾಟೀಲ್, ಡಾ. ರಜನೀಶ ವಾಲಿ, ವಿನಯ ಎಸ್. ಪಾಟೀಲ್, ಅನೀಲಕುಮಾರ ಬಿ. ಪಟ್ಟಣ, ಎನ್.‌ ಗಿರಿಜಾ ಶಂಕರ, ಡಾ. ವೀರೇಂದ್ರ ಪಾಟೀಲ್ ಪಾಲ್ಗೊಂಡ ಸಭೆಯಲ್ಲಿ ಎರಡ್ಮೂರು ಚುನಾವಣಾ ದಿನಾಂಕಗಳನ್ನು ತಾಳೆ ಹಾಕಿ ಕೊನೆಗೆ ಮಾರ್ಚ 16 ಎಂಬುದಾಗಿ ಅಂತಿಮಗೊಳಿಸಲಾಗಿದೆ.

ಪ್ರಸ್ತುತ ಆಡಳಿತ ಮಂಡಳಿ ಉಪಾಧ್ಯಕ್ಷ ರಿಂದ ಹಿಡಿದು ಸರ್ವ ಪದಾಧಿಕಾರಿಗಳು ಹಾಗೂ ಆಡಳಿತ ಮಂಡಳಿ ಸದಸ್ಯರು ಪಾಲ್ಗೊಂಡ  ಈ ಸಭೆಯಲ್ಲಿ ಕಳೆದ ಮೂರು ವರ್ಷದಲ್ಲಿನ ಸಾಧನೆ ಮತ್ತು ಆರ್ಥಿಕತೆ ಕುರಿತಾಗಿ ವಿವರವಾಗಿ ಚರ್ಚಿಸಿ ಎಲ್ಲವೂ ಅಂತೀಮಗೊಂಡ ನಂತರ  ಮಾಚ್೯ 16 ರಂದು ಚುನಾವಣೆ ನಡೆಸುವ ಹಾಗೂ ಮರುದಿನ‌ ಮತ ಏಣಿಕೆ ನಡೆಸುವ ಕುರಿತಾಗಿ ಚರ್ಚಿಸಲಾಯಿತು.

ಮೂರು ವರ್ಷದ ಹಿಂದೆ ಅಂದರೆ 2021 ರಲ್ಲಿ ಫೆ. 27 ರಂದು ಚುನಾವಣೆ ನಡೆಸಲಾಗಿತ್ತು.‌ ಆದರೆ ಈ ಸಲ ಮಾರ್ಚ 16 ರಂದು ನಡೆಸಲು ನಿರ್ಧರಿಸಲಾಗಿದೆ.

Advertisement

ಚುನಾವಣೆ ದಿನಾಂಕ ಘೋಷಣೆ ಹಿನ್ನೆಲೆಯಲ್ಲಿ ಕಳೆದ ಹತ್ತು ದಿನಗಳಿಂದ ದಿನಾಲು ಒಂದಿಲ್ಲ ಒಂದು ಅಭಿವೃದ್ಧಿ ಕಾರ್ಯಗಳು ನಡೆದಿದ್ದವು. ಈಗ ಚುನಾವಣೆ ಘೋಷಣೆಯಾಗಿದ್ದರಿಂದ ಎಲ್ಲವುದಕ್ಕೂ ಬ್ರೇಕ್ ಹಾಕಿದಂತಾಗಿದೆ.‌

ಸಂಸ್ಥೆಯ ಪ್ರಸ್ತುತ ಅಧ್ಯಕ್ಷರಾಗಿರುವ ಡಾ.ಭೀಮಾಶಂಕರ ಬಿಲಗುಂದಿ 2018 ಹಾಗೂ 2021 ರಲ್ಲಿ ಸತತ ಎರಡು ಅಧ್ಯಕ್ಷರಾಗಿದ್ದು, ಈಗ ಮೂರನೇ ಸಲ ಅಧ್ಯಕ್ಷ ಸ್ಥಾನಕ್ಕೆ  ಸ್ಪರ್ಧಿಸಲು ಅವಕಾಶ ಇರದ ಹಿನ್ನೆಲೆಯಲ್ಲಿ ಈಗ ಡಾ.ಭೀಮಾಶಂಕರ ಪುತ್ರ ಸಂತೋಷ ಬಿಲಗುಂದಿ ಪೆನಾಲ್ ರಚಿಸಿಕೊಂಡು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದಾರೆ.

ಇನ್ನುಳಿದಂತೆ ವಿಧಾನ ಪರಿಷತ್  ಸದಸ್ಯ ಶಶೀಲ್ ಜಿ. ನಮೋಶಿ ತಮ್ಮದೇಯಾದ ಪೆನಾಲ್ ರಚಿಸಿಕೊಂಡು ಈಗಾಗಲೇ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಖ್ಯಾತ ವೈದ್ಯರಾದ ಡಾ. ಶರಣಬಸಪ್ಪ ಕಾಮರೆಡ್ಡಿ ಸಹ ಪೆನಾಲ್ ರಚಿಸಿಕೊಂಡು ಅಧ್ಯಕ್ಷ ಸ್ಪರ್ಧಿಸಲು ಮುಂದಾಗಿ ಪ್ರತಿಷ್ಠೆ ಕಣಕ್ಕಿಟ್ಟಿದ್ದಾರೆ.

ಈ ಹಿಂದಿನ ಬಹುತೇಕ ಚುನಾವಣೆಗಳಲ್ಲಿ ಎರಡೇ ಪೆನಾಲ್ ಗಳು ಚುನಾವಣೆ ಇಳಿದಿದ್ದನ್ನು ನೋಡಿದ್ದೇವೆ. ಆದರೆ ಈವ ಮೂರು ಪೆನಾಲ್ ಗಳು ರಚನೆಯಾಗಿ ಚುನಾವಣೆ ರಂಗಕ್ಕೆ ಇಳಿದಿದ್ದರಿಂದ ಚುನಾವಣೆಗೆ ಏಲ್ಲಿಲ್ಲದ ರಂಗು ಬಂದಿದೆ.‌

ಸಾರ್ವತ್ರಿಕ ಚುನಾವಣೆಗೆ ಸೆಡ್ಡು: ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಎಚ್ಕೆಇ ಚುನಾವಣೆ ರಾಜಕೀಯ ಕ್ಷೇತ್ರದ ಸಾರ್ವತ್ರಿಕ ಚುನಾವಣೆ ಮೀರಿಸುವ ಮಟ್ಟಿಗೆ ನಡೆಯುವುದೇ ಇದರ ಹೈಲೆಟ್.  ಇದರ ಚುನಾವಣೆ ಯಲ್ಲಿ ಎಲ್ಲ ತಂತ್ರ- ಪ್ರತಿತಂತ್ರ ನಡೆಯುತ್ತಿರುತ್ತವೆ. ಪ್ರಸ್ತುತ ಚುನಾವಣೆ ಈ ಹಿಂದಿನ‌ ಎಲ್ಲ ದಾಖಲೆ ಮೀರಿಸುವ ಮಟ್ಟಿಗೆ ವಿದ್ಯಮಾನಗಳು ನಡೆಯುವ ಸಾಧ್ಯತೆ ಯನ್ನು ಮನಗಂಡೇ ಸಂಸ್ಥೆಯ ಹಿರಿಯ ಸದಸ್ಯರಾಗಿರುವ ಮಾಜಿ ಶಾಸಕ ವಿಶ್ವನಾಥ ಪಾಟೀಲ್ ಹಾಗು ಹೆಬ್ಬಾಳ ಅವರು ಯುವಕರು ಯಾವುದೇ ಕಾರಣಕ್ಕೂ ಮತದ ಮೌಲ್ಯ ಕಡಿಮೆ ಮಾಡಿಕೊಳ್ಳಬೇಡಿ ಎಂದು ವಿನಂತಿಸಿರುವುದು ತೀವ್ರ ಸಂಚಲನ ಮೂಡಿಸಿದೆ.  ಒಟ್ಟಾರೆ ಚುನಾವಣೆಗೆ ಈಗ ದಿನಾಂಕ ನಿಗದಿಯಾಗಿದ್ದರಿಂದ ಇನ್ಮುಂದೆ ಆಟಗಳು ಶುರುವಾಗಲಿವೆ.

Advertisement

Udayavani is now on Telegram. Click here to join our channel and stay updated with the latest news.

Next