ನವದೆಹಲಿ: ತೆಲಂಗಾಣದ ಪಶುವೈದ್ಯೆಯ ಮೇಲಿನ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣದ ನಾಲ್ವರು ಆರೋಪಿಗಳನ್ನು ಪೊಲೀಸರು ಎನ್ ಕೌಂಟರ್ ನಲ್ಲಿ ಹತ್ಯೆಗೈದಿರುವ ಘಟನೆಯ ತನಿಖೆ ನಡೆಸಲು ಸುಪ್ರೀಂಕೋರ್ಟ್ ತ್ರಿಸದಸ್ಯರನ್ನೊಳಗೊಂಡ ಆಯೋಗವನ್ನು ನೇಮಕ ಮಾಡಿದೆ.
ಸುಪ್ರೀಂಕೋರ್ಟ್ ನ ನಿವೃತ್ತ ನ್ಯಾಯಾಧೀಶ ವಿಎಸ್ ಸರ್ಪುಕಾರ್ ಆಯೋಗದ ಮುಖ್ಯಸ್ಥರಾಗಿದ್ದು, ಬಾಂಬೆ ಹೈಕೋರ್ಟ್ ನಿವೃತ್ತ ಜಡ್ಜ್ ರೇಖಾ ಬಲ್ಡೋಟಾ, ಸಿಬಿಐ ಮಾಜಿ ಮುಖ್ಯಸ್ಥ ಬಿ.ಕಾರ್ತಿಕೇಯನ್ ಆಯೋಗದ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.
ತೆಲಂಗಾಣ ಎನ್ ಕೌಂಟರ್ ಪ್ರಕರಣದ ತನಿಖೆಯನ್ನು ಆರು ತಿಂಗಳೊಳಗೆ ಪೂರ್ಣಗೊಳಿಸುವಂತೆ ಸುಪ್ರೀಂಕೋರ್ಟ್ ತಿಳಿಸಿದೆ. ಮುಂದಿನ ಆದೇಶ ನೀಡುವವರೆಗೆ ಬೇರೆ ಯಾವುದೇ ನ್ಯಾಯಾಲಯವಾಗಲಿ ಅಥವಾ ಅಧಿಕಾರಿಗಳಾಗಲಿ ಪ್ರಕರಣದ ತನಿಖೆ ನಡೆಸುವಂತಿಲ್ಲ ಎಂದು ಸುಪ್ರೀಂ ನಿರ್ದೇಶನ ನೀಡಿದೆ.
ತನಿಖೆಯ ವೇಳೆ ತೆಲಂಗಾಣ ಸರ್ಕಾರದ ಪರವಾಗಿ ಅಭಿಪ್ರಾಯವ್ಯಕ್ತಪಡಿಸಲು ಮಾಜಿ ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ಅವರಿಗೆ ಸಿಜೆಐ ಎಸ್ ಎ ಬೋಬ್ಡೆ ಸೂಚನೆ ನೀಡಿರುವುದಾಗಿ ವರದಿ ವಿವರಿಸಿದೆ.
ಪಶುವೈದ್ಯೆಯ ಮೇಲಿನ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣದ ನಾಲ್ವರು ಆರೋಪಿಗಳನ್ನು ಸ್ಥಳ ಮಹಜರಿಗೆ ಕರೆದೊಯ್ದಿದ್ದ ವೇಳೆ ಪೊಲೀಸರ ಶಸ್ತ್ರಾಸ್ತ್ರ ಕಸಿದುಕೊಂಡು ಹಲ್ಲೆ ನಡೆಸಲು ಮುಂದಾಗಿದ್ದರು. ಈ ಸಂದರ್ಭದಲ್ಲಿ ಪ್ರಾಣರಕ್ಷಣೆಗಾಗಿ ಎನ್ ಕೌಂಟರ್ ನಡೆಸಿರುವುದಾಗಿ ತೆಲಂಗಾಣ ಪೊಲೀಸರು ತಿಳಿಸಿದ್ದರು. ಆದರೆ ಪೊಲೀಸರ ಕ್ರಮಕ್ಕೆ ಒಂದೆಡೆ ಭಾರೀ ಬೆಂಬಲ ವ್ಯಕ್ತವಾಗಿದ್ದರೆ, ಮತ್ತೊಂದೆಡೆ ವಿರೋಧವೂ ವ್ಯಕ್ತವಾಗಿತ್ತು.
ತೆಲಂಗಾಣ ಎನ್ ಕೌಂಟರ್ ತನಿಖೆ ನಡೆಸಲು ರಾಜ್ಯ ಸರ್ಕಾರ ಎಸ್ ಐಟಿಯನ್ನು ರಚಿಸಿತ್ತು. ಎಸ್ ಐಟಿಯೂ ಕೂಡಾ ತನಿಖೆ ನಡೆಸಲಿ ಎಂದು ಸಿಜೆಐ ಬೋಬ್ಡೆ ತಿಳಿಸಿದ್ದಾರೆ. ಆದರೆ ಎಸ್ ಐಟಿ ತನಿಖೆ ನಡೆಸುತ್ತಿರುವ ನಡುವೆಯೇ ಸುಪ್ರೀಂಕೋರ್ಟ್ ನಿವೃತ್ತಿ ನ್ಯಾಯಾಧೀಶರ ಆಯೋಗವನ್ನು ನೇಮಕ ಮಾಡಿದ ಬಗ್ಗೆ ತೆಲಂಗಾಣ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದೆ.
ಇದು ವಿಶ್ವಾಸಾರ್ಹತೆಯ ವಿಷಯವಾಗಿದೆ. ಆರೋಪಿಗಳನ್ನು ಕೊಂದ ಘಟನೆ ಬಗ್ಗೆ ನೀವು ಯಾವ ಹಾದಿಯಲ್ಲಿ ತನಿಖೆ ನಡೆಸುತ್ತಿದ್ದೀರಿ ಎಂಬ ಬಗ್ಗೆ ನಾವು ಚಿಂತಿಸುವುದಿಲ್ಲ. ಎಸ್ ಐಟಿ ತನಿಖಾ ವರದಿಯನ್ನು ಆಯೋಗಕ್ಕೆ ನೀಡಲಿ ಎಂದು ಸಿಜೆಐ ಬೋಬ್ಡೆ ಸೂಚನೆ ನೀಡಿದ್ದಾರೆ.