ಹೈದರಾಬಾದ್: ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರತ್ಯೇಕ ಪ್ರಕರಣಗಳಲ್ಲಿ ಕಸ್ಟಮ್ಸ್ ಅಧಿಕಾರಿಗಳು 1.37 ಕೋಟಿ ರೂ.ಮೌಲ್ಯದ 2.27 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. 1 ಲಕ್ಷ ವಿದೇಶಿ ಸಿಗರೇಟ್ ಅನ್ನು ವಶ ಪಡಿಸಿಕೊಳ್ಳಲಾಗಿದೆ.
ಮೊದಲ ಪ್ರಕರಣದಲ್ಲಿ 72 ಲಕ್ಷ ರೂ. ಮೌಲ್ಯದ 1196 ಗ್ರಾಂ ಚಿನ್ನವನ್ನು ಯುಎಇಯ ರಾಸ್ ಅಲ್ ಖೈಮಾದಿಂದ ಹೈದರಾಬಾದ್‌ಗೆ ಆಗಮಿಸಿದ ವಿಮಾನದಲ್ಲಿ ಕೆಲವರು ಪ್ರಯಾಣಿಕರ ಸೀಟಿನ ಹಿಂದೆ ಪೇಸ್ಟ್ ರೂಪದಲ್ಲಿ ಬಚ್ಚಿಟ್ಟಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎರಡನೇ ಪ್ರಕರಣದಲ್ಲಿ, ಕಸ್ಟಮ್ಸ್ ಅಧಿಕಾರಿಗಳು, ಪ್ರಯಾಣಿಕರ ಪ್ರೊಫೈಲ್ ಮತ್ತು ಕಣ್ಗಾವಲು ಆಧರಿಸಿ, ಕತ್ತರಿಸಿದ ತುಂಡುಗಳ ರೂಪದಲ್ಲಿ ಚಿನ್ನವನ್ನು ಕಳ್ಳಸಾಗಣೆ ಮಾಡಲು ಯತ್ನಿಸಿದ ಪ್ರಯಾಣಿಕನನ್ನು ಹಿಡಿದಿದ್ದಾರೆ. ಆತನಿಂದ 752 ಗ್ರಾಂ ತೂಕದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಯಾಣಿಕ ಕುವೈತ್‌ನಿಂದ ದುಬೈ ಮೂಲಕ ಹೈದರಾಬಾದ್‌ಗೆ ಆಗಮಿಸಿದ್ದರು.
ಮೂರನೇ ಪ್ರಕರಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಶಾರ್ಜಾದಿಂದ ಬಂದ ಪ್ರಯಾಣಿಕರಿಂದ 331 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಪ್ರಯಾಣಿಕರು ಚಿನ್ನದ ಪೇಸ್ಟ್ ಅನ್ನು ಒಳ ಉಡುಪಿನಲ್ಲಿ ಬಚ್ಚಿಟ್ಟಿದ್ದ.
ಮತ್ತೊಂದು ಪ್ರಕರಣದಲ್ಲಿ, ಕಾಂಬೋಡಿಯಾದಿಂದ ಬ್ಯಾಂಕಾಕ್ ಮೂಲಕ ಬಂದ ಪ್ರಯಾಣಿಕರಿಂದ 1.01 ಲಕ್ಷ ಸಿಗರೇಟ್ ಕಡ್ಡಿಗಳನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ತನಿಖೆ ಪ್ರಗತಿಯಲ್ಲಿದೆ.