ಹೈದರಾಬಾದ್ : ಶಾಲಾ ಶುಲ್ಕ ಪಾವತಿಸದ್ದಕ್ಕೆ ತನ್ನನ್ನು ಅವಮಾನಿಸಲಾಯಿತು ಎಂಬ ಕಾರಣಕ್ಕೆ 14 ವರ್ಷ ಪ್ರಾಯದ ಸಾಯಿ ದೀಪ್ತಿ ಎಂಬ ಬಾಲಕಿ ತನ್ನ ಮನೆಯಲ್ಲಿ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸಾಯಿ ದೀಪ್ತಿ ಇಲ್ಲಿನ ಮಲ್ಕಾಜ್‌ಗಿರಿ ಯಲ್ಲಿನ ಜ್ಯೋತಿ ಹೈಸ್ಕೂಲ್‌ನಲ್ಲಿ 9 ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿ.
ದೀಪ್ತಿ ಕುಟುಂಬ ಈಚೆಗೆ ದೀರ್ಘಕಾಲದಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿತ್ತು. ಆಟೋ ಡ್ರೈವರ್ ಆಗಿ ದುಡಿಯುತ್ತಿರುವ ಆಕೆ ತಂದೆಗೆ ಶಾಲೆಯ ಫೀಸ್ ಕಟ್ಟಲು ಸಾಧ್ಯವಾಗಿರಲಿಲ್ಲ.
ಶುಲ್ಕ ಕಟ್ಟಿಲ್ಲ ಎಂಬ ಕಾರಣಕ್ಕೆ ಶಾಲಾಡಳಿತದವರು ದೀಪ್ತಿಗೆ ಪರೀಕ್ಷೆ ಬರೆಯಲು ಬಿಟ್ಟಿರಲಿಲ್ಲ. ಇದರಿಂದ ಅವಮಾನಿತಳಾದ ದೀಪ್ತಿ ತನ್ನ ಮನೆಯಲ್ಲಿ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಳು ಎಂದು ಪೊಲೀಸರು ತಿಳಿಸಿದ್ದಾರೆ.
ದೀಪ್ತಿ ತನ್ನ ಸಾವಿನ ಬಗ್ಗೆ ಡೆತ್ ನೋಟ್ ಬರೆದಿಟ್ಟಿದ್ದು ಅದರಲ್ಲಿ ಆಕೆ ತನ್ನ ಕೃತ್ಯಕ್ಕೆ ತಾಯಿಯಲ್ಲಿ ಕ್ಷಮೆಯಾಚಿಸಿದ್ದಾಳೆ.
ಈ ನಡುವೆ ಮಕ್ಕಳ ಹಕ್ಕು ರಕ್ಷಣೆ ಸಂಘಟನೆ, ದೀಪ್ತಿಯ ಸಾವಿಗೆ ಶಾಲಾಡಳಿತವೇ ಕಾರಣ; ಆದುದರಿಂದ ಅದರ ವಿರುದ್ಧ ಕಠಿನ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದೆ.
ಮಲ್ಕಾಜ್‌ಗಿರಿ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇದೇ ವೇಳೆ ಶಿಕ್ಷಣ ಇಲಾಖೆ ಕೂಡ ಈ ಘಟನೆಯ ಬಗ್ಗೆ ತನಿಖೆ ಕೈಗೊಂಡಿದೆ.