Advertisement

ಕಾಶ್ಮೀರ ಸರಣಿ ಹತ್ಯೆಯಲ್ಲಿ ಹೈಬ್ರಿಡ್‌ ಉಗ್ರರ ಕೈವಾಡ; ಕೇಂದ್ರ ಗುಪ್ತಚರ ಇಲಾಖೆ

11:26 AM Jun 05, 2022 | Team Udayavani |

ಜಮ್ಮು: ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಒಂದು ತಿಂಗಳಲ್ಲಿ ತೀವ್ರಗೊಂಡಿರುವ ಹಿಂಸಾಚಾರದ ಹಿಂದೆ ಹೈಬ್ರಿಡ್‌ ಉಗ್ರರ ಕೈವಾಡ ಇದೆ. ಕೇಂದ್ರಾಡಳಿತ ಪ್ರದೇಶದ ಜನರಲ್ಲಿ ಮತ್ತೆ ಅಭದ್ರತೆ ಉಂಟು ಮಾಡುವುದೇ ಸರಣಿ ಘಟನೆಗಳ ಮೂಲ ಉದ್ದೇಶವೆಂದು ಕೇಂದ್ರ ಗುಪ್ತಚರ ಸಂಸ್ಥೆಗಳು ಖಚಿತಪಡಿಸಿವೆ.

Advertisement

“ಹೈಬ್ರಿಡ್‌ ಭಯೋತ್ಪಾದನೆ’ ಎನ್ನುವುದು ಉಗ್ರರ ವಿಶೇಷ ಸಂಚು ಎಂದು ಪರಿಣಿಸಿರುವ ಗುಪ್ತಚರ ಸಂಸ್ಥೆಗಳು, ದಾಳಿಯನ್ನು ಎಸಗುವವರು ಯಾವುದೇ ನಿರ್ದಿಷ್ಟ ಉಗ್ರ ಸಂಘಟನೆಗೆ ಸೇರಿದವರಾಗಿ ಇರುವುದಿಲ್ಲ. ಅವರನ್ನು ಕೇವಲ ಕಾಶ್ಮೀರಿ ಪಂಡಿತ ಸಮುದಾಯ, ಸರ್ಕಾರಿ ಉದ್ಯೋಗಿಗಳು, ಬೇರೆ ರಾಜ್ಯದಿಂದ ವಲಸೆ ಬಂದವರನ್ನು ಗುರಿಯಾಗಿಸಿ ದಾಳಿ ಎಸಗಿ ಗಾಯಗೊಳಿಸುವುದು ಅಥವಾ ಕೊಲ್ಲಲು ಮಾತ್ರ ಸೂಚನೆ ಇರುತ್ತದೆ.

ಹಿಂದಿನ ಸಂದರ್ಭಗಳಲ್ಲಿ ಅವರನ್ನೇ ಭದ್ರತಾ ಸಿಬ್ಬಂದಿಯನ್ನು ಗುರಿಯಾಗಿಸಿ ದಾಳಿ ನಡೆಸಲು ಬಳಕೆ ಮಾಡಿಕೊಳ್ಳಲಾಗುತ್ತಿತ್ತು. ಈಗ ಅವರು ತಮ್ಮ ಯೋಜನೆ ಬದಲು ಮಾಡಿ ಇಂಥ ಕಿಡಿಗೇಡಿತನದ ಕೃತ್ಯಗಳನ್ನು ನಡೆಸುತ್ತಿದ್ದಾರೆ ಎಂದು ಕೇಂದ್ರ ಗುಪ್ತಚರ ಸಂಸ್ಥೆಗಳು ಕಂಡುಕೊಂಡಿವೆ.

ಕಾಶ್ಮೀರ ಪಂಡಿತ ಸಮುದಾಯದವರ ಮೇಲೆ ದಾಳಿ ನಡೆಸಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತೆ ಇಲ್ಲ ಎಂಬ ಅಂಶವನ್ನು ಅವರೇ ಕಂಡುಕೊಳ್ಳಬೇಕು ಮತ್ತು ಅಲ್ಲಿಂದ ಪರಾರಿಯಾಗುವಂತೆ ಮಾಡುವುದೇ ಸದ್ಯದ ದಾಳಿಯ ಉದ್ದೇಶವಾಗಿ ಎಂದೂ ಅವು ಖಚಿತಪಡಿಸಿವೆ.

ಉಗ್ರರು ಆತಂಕಗೊಂಡಿಲ್ಲ:
ಕೇಂದ್ರಾಡಳಿತ ಪ್ರದೇಶದಲ್ಲಿ ಭದ್ರತಾ ಪಡೆಗಳು ಉಗ್ರರನ್ನು ಕೊಂದು ಹಾಕುತ್ತಿದ್ದರೂ, ಅವರು ಎದೆಗುಂದಿಲ್ಲ. ಏಕೆಂದರೆ ಇಂಥ ದಾಳಿ ಎಸಗುವವರು ನಿರ್ದಿಷ್ಟ ಸಂಘಟನೆಗೆ ಸೇರಿದವರೇ ಎಂದು ಸಾಬೀತು ಮಾಡಲು ಕಷ್ಟ. “ಹೈಬ್ರಿಡ್‌ ಉಗ್ರರು’ ಸ್ಥಳೀಯರೇ ಆಗಿರುವುದರಿಂದ ಅವರನ್ನು ಕೊಲ್ಲುವುದರಿಂದ ನಾಗರಿಕರು ಯೋಧರ ವಿರುದ್ಧ ಸಿಡಿದು ನಿಲ್ಲುತ್ತಾರೆ ಮತ್ತು ಉಗ್ರ ಸಂಘಟನೆಯತ್ತ ಜನರು ಆಕರ್ಷಿತರಾಗುತ್ತಾರೆ ಎಂಬ ಅಂಶವನ್ನೂ ಗುಪ್ತಚರ ಅಧಿಕಾರಿಗಳು ಕಂಡುಕೊಂಡಿದ್ದಾರೆ.

Advertisement

ಸಣ್ಣ ಶಸ್ತ್ರಾಸ್ತ್ರಗಳು:
ದಾಳಿಯ ವಿಧಾನದಲ್ಲೂ ಉಗ್ರರು ತಂತ್ರಗಳನ್ನು ಬದಲಾಯಿಸಿದ್ದಾರೆ ಎಂದು ಹೇಳುವ ಗುಪ್ತಚರ ಅಧಿಕಾರಿಗಳು, ಎ.ಕೆ.47 ರೈಫ‌ಲ್‌ಗ‌ಳ ಬದಲಾಗಿ, ಸಣ್ಣ ಗಾತ್ರದ ಪಿಸ್ತೂಲು, ಸ್ಟಿಕಿ ಬಾಂಬ್‌ಗಳನ್ನು ಬಳಕೆ ಮಾಡಲಾಗುತ್ತಿದೆ. ಕುಲ್ಗಾಂವ್‌ನಲ್ಲಿ ರಾಜಸ್ಥಾನ ಮೂಲಕ ಬ್ಯಾಂಕ್‌ ಮ್ಯಾನೇಜರ್‌ ಅವರನ್ನು ಸಣ್ಣ ಪ್ರಮಾಣದ ಪಿಸ್ತೂಲ್‌ ಬಳಕೆ ಮಾಡಿಯೇ ಕೊಲ್ಲಲಾಗಿದೆ.

ಇದೇ ವೇಳೆ, ಗುರುವಾರ ನಡೆದಿದ್ದ ದಾಳಿಗೆ ಲಷ್ಕರ್‌ ಉಗ್ರ ಸಂಘಟನೆಯ ದ ರೆಸಿಸ್ಟೆನ್ಸ್‌ ಫ್ರಂಟ್‌ ಕಾರಣ ಎಂದು ಹೇಳಿಕೊಂಡಿದೆ ಎಂಬ ವಿಚಾರವೂ ಬೆಳಕಿಗೆ ಬಂದಿದೆ.

ಇಬ್ಬರಿಗೆ ಗಾಯ:
ಶೋಪಿಯಾನ್‌ ಜಿಲ್ಲೆಯಲ್ಲಿ ಉಗ್ರರು ಎಸೆದ ಗ್ರೆನೇಡ್‌ನಿಂದಾಗಿ ಇಬ್ಬರು ಕಾರ್ಮಿಕರು ಗಾಯಗೊಂಡಿದ್ದಾರೆ. ಅವರೆಲ್ಲರೂ ಬೇರೆ ರಾಜ್ಯದವರು ಎಂದು ಪೊಲೀಸ್‌ ಇಲಾಖೆ ವಕ್ತಾರರು ತಿಳಿಸಿದ್ದಾರೆ.

ಬಂಧನ:
ಉಧಂಪುರ ಕೋರ್ಟ್‌ ಕಾಂಪ್ಲೆಕ್ಸ್‌ನಲ್ಲಿ ಮಾರ್ಚ್‌ನಲ್ಲಿ ಉಂಟಾಗಿದ್ದ ಸುಧಾರಿತ ಸ್ಫೋಟಕದ ಸ್ಫೋಟಕ್ಕೆ ಸಂಬಂಧಿಸಿದಂತೆ ವ್ಯಕ್ತಿಯನ್ನು ಬಂಧಿಸಲಾಗಿದೆ. ಈ ಘಟನೆಯಲ್ಲಿ ವ್ಯಕ್ತಿ ಅಸುನೀಗಿ, 14 ಮಂದಿ ಗಾಯಗೊಂಡಿದ್ದರು. ಬಂಧಿತ ವ್ಯಕ್ತಿ ರಂಬಾನ್‌ ಎಂಬಲ್ಲಿಗೆ ಸೇರಿದವನಾಗಿದ್ದಾನೆ.

ಹಿಜ್ಬುಲ್‌ ಉಗ್ರ ಸಾವು:
ಅನಂತನಾಗ್‌ ಜಿಲ್ಲೆಯ ರಿಶಿಪೋರಾ ಎಂಬಲ್ಲಿ ಶುಕ್ರವಾರ ಶುರುವಾಗಿದ್ದ ಎನ್‌ಕೌಂಟರ್‌ ಶನಿವಾರ ಮುಕ್ತಾಯವಾಗಿದೆ. ಅದರಲ್ಲಿ ಹಿಜ್ಬುಲ್‌ ಮುಜಾಹಿದೀನ್‌ ಉಗ್ರ ಸಂಘಟನೆಯ ಸ್ವಯಂಘೋಷಿತ ಕಮಾಂಡರ್‌ ಸಾವಿಗೀಡಾಗಿದ್ದಾನೆ. ಈ ಎನ್‌ಕೌಂಟರ್‌ನ ಆರಂಭದಲ್ಲಿ ಮೂವರು ಯೋಧರು ಮತ್ತು ನಾಗರಿಕರೊಬ್ಬರಿಗೆ ಗಾಯಗಳಾಗಿತ್ತು ಮತ್ತು ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

“ಟಿಆರ್‌ಎಫ್’ ಎಂಬ ಅಗೋಚರ ಶತ್ರು
ಕಾಶ್ಮೀರದಲ್ಲಿ, ಕಾಶ್ಮೀರಿ ಪಂಡಿತರನ್ನು, ಹಿಂದೂಗಳನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ದಾಳಿಗಳ ಹಿಂದೆ, ದ ರೆಸಿಸ್ಟಂಟ್‌ ಫ್ರಂಟ್‌ (ಟಿಆರ್‌ಎಫ್) ಎಂಬ ಇನ್ನೂ ಅಷ್ಟು ಪ್ರವರ್ಧಮಾನಕ್ಕೆ ಬಾರದ ಸಂಘಟನೆಯಿದೆ ಎಂದು ಮೂಲಗಳು ತಿಳಿಸಿವೆ. ಈ ಸಂಘಟನೆ ತೆರೆಮರೆಯಲ್ಲಿ ನಿಂತು ಈ ಎಲ್ಲಾ ದುಷ್ಕೃತ್ಯಗಳನ್ನು ಯೋಜಿಸಿ, ಅವುಗಳನ್ನು ಅನುಷ್ಠಾನಗೊಳಿಸುತ್ತಿದೆ. ಇದು ಇಸ್ಲಾಮಿಕ್‌ ಸ್ಟೇಟ್‌ (ಐಸಿಸ್‌) ಸಿದ್ಧಾಂತಗಳನ್ನು ಅಳವಡಿಸಿಕೊಂಡಿದ್ದು, ಭದ್ರತಾ ಪಡೆಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.