Advertisement

ಜಿಲ್ಲಾದ್ಯಂತ ಅವರೇಕಾಯಿ ಗಮಲು

05:17 PM Dec 17, 2022 | Team Udayavani |

ದೇವನಹಳ್ಳಿ: ನವೆಂಬರ್‌, ಡಿಸೆಂಬರ್‌ ತಿಂಗಳು ಬಂತೆಂದರೆ ಅವರೇಕಾಯಿ ಸೀಸನ್‌ ಶುರು. ಮಾರು ಕಟ್ಟೆ ಪ್ರದೇಶದಷ್ಟೇ ಅಲ್ಲದೆ, ಜನನೀಬಿಡ ಪ್ರದೇಶಗಳು ಹಾಗೂ ಮನೆಗಳ ಮುಂದೆ ಅವರೇಕಾಯಿ ಕೊಂಡು ವ್ಯಾಪಾರ ಮಾಡುವ ದೃಶ್ಯ ಸಾಮಾನ್ಯವಾಗಿದೆ. ಸ್ಥಳೀಯವಾಗಿ ಬೆಳೆದ ಅವರೇ ಸೊಗಡಿನೊಂದಿಗೆ ಬೇರೆ ಪ್ರದೇಶದ ಅವರೇ ಮಾರುಕಟ್ಟೆ ಪ್ರವೇಶಿಸುತ್ತಿ ರುವುದ ರಿಂದ ಈ ಬಾರಿ ಅವರೇ ಬೆಳೆ ಸ್ವಲ್ಪ ಕಡಿಮೆಯಾಗಿದೆ. ಜಿಲ್ಲೆ ಮತ್ತು ತಾಲೂಕು ನಗರ ಪ್ರದೇಶ ದಲ್ಲಿ ಅವರೇಕಾಯಿ ವ್ಯಾಪಾರ ಜೋರಾಗಿದೆ. ಬೆಲೆ ಗಗನಕ್ಕೇರಿದ್ದರೂ ಪ್ರಾರಂಭಿಕ ಸರಕನ್ನು ಕೊಳ್ಳಲು ಗ್ರಾಹಕರು ಮುಗಿಬಿದ್ದಿದ್ದು ಬೆಳೆಗಾರರ, ವ್ಯಾಪಾರಸ್ಥರ ಮೊಗದಲ್ಲಿ ಮಂದಹಾಸ ಮೂಡಿದೆ.

Advertisement

ಈವರೆಗೂ ಮಾರುಕಟ್ಟೆಗೆ ಹೊರಗಿನಿಂದ ಅವರೇ ಕಾಯಿ ಅವಕವಾಗುತ್ತಿತ್ತು. ಕಾಯಿ ಗುಣಮಟ್ಟ ಹಾಗೂ ಸೊಗಡು ತೃಪ್ತಿಕರ ಆಗದಿದ್ದರೂ, ಅವರೇಕಾಯಿ ಪ್ರಿಯರು ಖರೀದಿಸಿ ಕೊಂಡೊಯ್ಯುತ್ತಿದ್ದರು. ಬರೋ ಬರಿ 1 ಕೆ.ಜಿ.ಗೆ 50 ರೂ. ಮಾರಾಟ ಮಾಡಿ ವ್ಯಾಪಾರ ಸ್ಥರು ಜೇಬು ತುಂಬಿಸಿಕೊಳ್ಳುತ್ತಿದ್ದಾರೆ. ಆರಂಭದಲ್ಲಿ ಬಿತ್ತನೆ ವೇಳೆಯಲ್ಲಿ ಉತ್ತಮವಾಗಿ ಮಳೆ ಬಂದು ಅವರೇ ಬೆಳೆ ಹೂವು, ಪಿಂದೆ ಕಾಯಿ ಹಂತದಲ್ಲಿದೆ. ಮೊದಲ ಬಿತ್ತನೆ ಕಾಯಿ ಈಗ ಮಾರುಕಟ್ಟೆಯಲ್ಲಿದೆ. ಬಿತ್ತನೆ ಪ್ರಮಾಣ ಇಳಿಮುಖ: ಇತ್ತೀಚಿನ ದಿನಗಳಲ್ಲಿ ಚಂಡಮಾರುತ, ಜಿಟಿ, ಜಿಟಿ ಮಳೆಯಿಂದ ಅವರೇ ಬೆಳೆ ಯಲ್ಲಿ ಇಳಿಮುಖವಾಗಿದೆ.

ಕೃಷಿ ಇಲಾಖೆ ಮಾಹಿತಿ ಪ್ರಕಾರ ಮುಂಗಾರು ಆರಂಭದಲ್ಲಿ ಬೆಂಗ ಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅವರೇ ಬೆಳೆಯು 614 ಹೆಕ್ಟೇರ್‌ ಬೆಳೆಯಾಗಿದೆ. ಕಳೆದ ವರ್ಷ 1,298 ಹೆಕ್ಟೇರ್‌ ಅವರೇಕಾಯಿ ಪ್ರದೇಶ ವಾಗಿತ್ತು. ಈ ಬಾರಿ ಸಾಕಷ್ಟು ಅವರೇ ಬೆಳೆಯಲ್ಲಿ ಸಾಕಷ್ಟು ಇಳಿಮುಖ ವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅವರೇಕಾಯಿ ತಿನಿಸುಗಳ ವೈಶಿಷ್ಟ್ಯ: ಅವರೇಕಾಯಿ ತಿನಿಸುಗಳೆಂದರೆ ಪ್ರಮುಖವಾಗಿ ಅತಿ ಹೆಚ್ಚು ಪ್ರಿಯ ವಾದ ಹಿಸುಕಿದ ಬೇಳೆ ಸಾರು, ಉಪ್ಪಿಟ್ಟು, ಉಗ್ಗಿ ಅನ್ನ, ವಡೆ, ಪಾಯಸ, ಗೊಜ್ಜು ರೊಟ್ಟು ಹೀಗೆ ಹಲವಾರು ತಿನಿಸುಗಳಾಗಿವೆ. ಯಾವುದೇ ಮದುವೆ, ನಾಮಕರಣ ಇನ್ನಿತರೆ ಕಾರ್ಯಕ್ರಮಗಳಲ್ಲಿ ಹಿದುಕಿದ ಬೇಳೆ ಸಾರಿನ ಜೊತೆ ಮುದ್ದೆ ಮತ್ತು ಪೂರಿ ಮಾಡಿಸುವುದು ವಿಶೇಷ ವಾಗಿದೆ. ಕೇವಲ 3 ತಿಂಗಳ ಕಾಲ ಬಂದು ಹೋಗುವ ಅವರೇಕಾಯಿಯ ಸೊಗಡನ್ನು ವರ್ಷಪೂರ್ತಿ ಮರೆಯಲಾರರು. ಸಂಕ್ರಾಂತಿವರೆಗೆ ಸುಗ್ಗಿ ತಾಲೂಕಿನ ಮಣ್ಣಿನ ಗುಣದಿಂದ ಇಲ್ಲಿ ಬೆಳೇಯುವ ಅವರೇಗೆ ಸುತ್ತಮುತ್ತಲಿನ ತಾಲೂಕು, ನೆರೆ ರಾಜ್ಯದ ವ್ಯಾಪಾರಸ್ಥರು ಮುಗಿಬಿದ್ದು ಖರೀದಿಸುತ್ತಾರೆ. ಬಹಳಷ್ಟು ಕಡೆಗಳಲ್ಲಿ ಅವರೇ ಬೆಳೆ ಕಾಣಿಸುತ್ತವೆ.

ಫೆಬ್ರುವರಿ ತನಕ ಅವರೇಕಾಯಿ ಸೀಸನ್‌ ಇರುತ್ತೆ : ಅವರೇ ಬೆಳೆ ದಕ್ಷಿಣ ಭಾರತದ ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಕೆಲವು ಭಾಗಗಳಲ್ಲಿ ಜನಪ್ರಿಯವಾಗಿದೆ. ಇದು ನಮ್ಮ ರಾಜ್ಯದ ದಕ್ಷಿಣ ಜಿಲ್ಲೆಗಳಲ್ಲಿ ಮುಖ್ಯ ದ್ವಿದಳ ಧಾನ್ಯದ ಬೆಳೆಗಳಲ್ಲೊಂದು. ಈ ಬೆಳೆಯನ್ನು ಸಾಮಾನ್ಯವಾಗಿ ರಾಗಿ ಬೆಳೆಯೊಂದಿಗೆ ಅಂತರ, ಮಿಶ್ರ ಬೆಳೆಯಾಗಿ ಬೆಳೆಯುವುದು ವಾಡಿಕೆ. ಡಿಸೆಂಬರ್‌ನಿಂದ ಫೆಬ್ರುವರಿ ತನಕ ಅವರೇಕಾಯಿ ಬರುತ್ತದೆ. ಅವರೇಕಾಯಿ ಸುಗ್ಗಿಯಲ್ಲಿ ತರಕಾರಿ ಬೆಲೆ ಕುಸಿಯುತ್ತದೆ.

Advertisement

ನೂರಾರು ಮೂಟೆ ಅವರೇ ವಹಿವಾಟು : ಸ್ಥಳೀಯವಾಗಿ ಬೆಳೆಯುವ ಅವರೇಕಾಯಿ ಹೆಚ್ಚು ಸೊಗಡಿದ್ದು, ಅವರೇ ಬೇಳೆ ತನ್ನದೇ ಆದ ವಿಶಿಷ್ಟತೆ ಹೊಂದಿದೆ. ಬೆಂಗಳೂರಿನ ಕೆ.ಆರ್‌. ಮಾರುಕಟ್ಟೆಗೆ ತಾಲೂಕಿನಿಂದ ಟನ್‌ ಗಟ್ಟಲೆ ಅವರೇಕಾಯಿ ಸರಬರಾಜಾಗುತ್ತಿದೆ. ಚಳಿಯಿಂದ ಹೊಲಗಳಲ್ಲಿ ಅವರೇಕಾಯಿ ಕಾಣಲಾರಂಭಿಸಿದೆ. ಮಾರಾಟಗಾರರು ಮಾರುಕಟ್ಟೆಯಲ್ಲಿ ನೂರಾರು ಮೂಟೆ ಅವರೇಯನ್ನು ಗೌರಿಬಿದನೂರು ಚಿಂತಾಮಣಿ, ಕೋಲಾರ, ಶ್ರೀನಿವಾಸಪುರದಿಂದ ತಂದು 1 ಕೆ.ಜಿ.ಗೆ 50 ರೂ.ನಂತೆ ಮಾರಾಟ ಮಾಡುತ್ತಿದ್ದಾರೆ.

ಹೈಬ್ರಿಡ್‌ ಅವರೇಕಾಯಿಗೆ ನಾಟಿ ರುಚಿ ಇರಲ್ಲ: ಹಿಂದಿನ ಕಾಲದಲ್ಲಿ ಅವರೇಕಾಯಿ ತಿನ್ನಬೇಕೆಂದರೆ ಡಿಸೆಂಬರ್‌ ಮತ್ತು ಜನವರಿ ತಿಂಗಳಿಗೆ ಕಾಯಬೇಕಾಗಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಹೈಬ್ರಿಡ್‌ ಅವರೇ ವರ್ಷಪೂರ್ತಿ ಸಿಗುತ್ತದೆ. ಆದರೆ, ಅವು ಹೊಲದಲ್ಲಿ ಬೆಳೆಯುವ ನಾಟಿ ಸೊಗಡು ಪಡೆದಿರುವುದಿಲ್ಲ. ರುಚಿಯೂ ಮಾಮೂಲಿ ಸೊಗಡು ಅವರೇಕಾಯಿ ಮಾದರಿ ಇರುವುದಿಲ್ಲ ಎಂಬುದು ಅವರೇ ಪ್ರಿಯರ ಹೇಳಿಕೆ.

ಅವರೇಕಾಯಿಯನ್ನು ಚಿಂತಾಮಣಿ ಇನ್ನಿತರೆ ಕಡೆಗಳಿಂದ ತೋಟಗಳಿಗೆ ಹೋಗಿ ಸೊಗಡು ಇರುವ ಅವರೇಕಾಯಿಯನ್ನು ಪ್ರತಿನಿತ್ಯ ರೈತರಿಂದ ಖರೀದಿಸಿಕೊಂಡು ಸೀಸನ್‌ನಲ್ಲಿ ಮಾರಾಟ ಮಾಡುತ್ತೇವೆ.-ಚಂದ್ರಪ್ಪ, ವ್ಯಾಪಾರಸ್ಥ

ಬಿತ್ತನೆ ವೇಳೆಯಲ್ಲಿ ಮಳೆ ಸಕಾಲದಲ್ಲಿ ಬರಲಿಲ್ಲ. ಬಿತ್ತನೆ ಮಾಡಿದ ನಂತರ ಮಳೆ ಚೆನ್ನಾಗಿ ಬಂದಿತ್ತು. ಅವರೇಕಾಯಿ ಉತ್ತಮ ಇಳುವರಿ ಬರುವ ನಿರೀಕ್ಷೆಯಲ್ಲಿದ್ದೇವೆ. – ಮುನಿರಾಜು,ರೈತ

ಜಿಲ್ಲೆಯಲ್ಲಿ ಈ ಬಾರಿ ಉತ್ತಮ ಅವರೇ ಇಳುವರಿ ಬಂದಿದೆ. 20 ಹೆಕ್ಟೇರ್‌ನಷ್ಟು ಅವರೇ ಕಾಯಿ ಬೆಳೆ ಬಂದಿದೆ. ಕಳೆದ ಬಾರಿ 1,298 ಹೆಕ್ಟೇರ್‌ ಬೆಳೆಯಲಾಗಿತ್ತು. ಈ ಬಾರಿ 614 ಹೆಕ್ಟೇರ್‌ ಮಾತ್ರ ಬೆಳೆದಿದ್ದಾರೆ ಸ್ಥಳೀಯ ಅವರೇ ಸೊಗಡಿಗೆ ಬಾರಿ ಬೇಡಿಕೆ ಇದೆ. – ಲಲಿತಾರೆಡ್ಡಿ, ಕೃಷಿ ಜಿಲ್ಲಾ ಜಂಟಿ ನಿರ್ದೇಶಕಿ

– ಎಸ್‌. ಮಹೇಶ್‌

Advertisement

Udayavani is now on Telegram. Click here to join our channel and stay updated with the latest news.

Next