ಹೂವಿನಹಿಪ್ಪರಗಿ: ಹೊರ ರಾಜ್ಯದಲ್ಲಿದ್ದ ಬಡ ಕೂಲಿ ಕಾರ್ಮಿಕರು ತಮ್ಮ ಸ್ವಗ್ರಾಮಗಳಿಗೆ ವಾಪಸ್ಸಾದ ಹಿನ್ನೆಲೆಯಲ್ಲಿ ಬಸವನ ಬಾಗೇವಾಡಿ ತಾಲೂಕಿನಾದ್ಯಾಂತ ವಿವಿಧ ಗ್ರಾಮಗಳ ವಿದ್ಯಾರ್ಥಿ ವಸತಿ ನಿಲಯ ಸೇರಿದಂತೆ ಶಾಲೆಯಲ್ಲಿ ಕ್ವಾರಂಟೈನ ಕೇಂದ್ರ ಆರಂಭಿಸಿ ಅವರಿಗೆ ವೈದ್ಯಕೀಯ ಸೇವೆ ನೀಡುವ ಮಹತ್ತರ ಜವಾಬ್ದಾರಿ ನಮ್ಮ ಮೇಲಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ| ಎಸ್.ಎಸ್. ಓತಗೇರಿ ಹೇಳಿದರು.
ಬಸವನ ಬಾಗೇವಾಡಿ ತಾಲೂಕಿನ ಅಂಬಳನೂರ ತಾಂಡಾದ ಕ್ವಾರಂಟೈನ ಕೇಂದ್ರಕ್ಕೆ ಭೇಟಿ ನೀಡಿ ಅವರು ಮಾತನಾಡಿದರು. ನಿಮ್ಮೆಲ್ಲರ ಆರೋಗ್ಯವನ್ನು ಕಾಯುವ ನಿಟ್ಟಿನಲ್ಲಿ ನಮ್ಮ ಆರೋಗ್ಯ ಇಲಾಖೆಯ ಎಲ್ಲ ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಕೆಲವೊಂದು ಕಡೆ ಕ್ವಾರಂಟೈನಲ್ಲಿದ್ದ ಜನರು ಕೋವಿಡ್ ಸೈನಿಕರ ಜತೆಗೆ ಸಹಕರಿಸುತ್ತಿಲ್ಲ ಎಂದು ಕೇಳಿ ಬರುತ್ತಿದೆ. ಅಂತ ಕಾರ್ಯಕ್ಕೆ ಯಾರು ಕೈಹಾಕದೆ ನಮ್ಮವರೊಂದಿಗೆ ಸಹಕರಿಸಿ. ಕ್ವಾರಂಟೈಲ್ಲಿದ್ದ ಜನತೆಗೆ ಜ್ವರ, ಕೆಮ್ಮು, ನೆಗಡಿ, ಕಂಡು ಬಂದರೆ ತಕ್ಷಣ ಆರೋಗ್ಯ ಇಲಾಖೆಯ ಸಿಬ್ಬಂದಿಯನ್ನು ಸಂಪರ್ಕ ಮಾಡಬೇಕು. ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಮಾಸ್ಕ್ ಹಾಕಿಕೊಳ್ಳಿ. ಕೋವಿಡ್ ವೈರಸ್
ಗೆ ಹೆದರಬೇಡಿ. ಆದರೆ, ಎಚ್ಚರದಿಂದ ಇರುವುದನ್ನು ಮರೆಯಬೇಡಿ ಎಂದು ಹೇಳಿದರು.
ಹೂವಿನಹಿಪ್ಪರಗಿ ಆಯುಷ್ಯ ವೈದ್ಯಾಧಿಕಾರಿ ಡಾ| ಬಿ.ಎಸ್. ಸಂದಿಮನಿ, ತಾಪಂ ಇಒ ಭಾರತಿ ಚಲುವಯ್ಯ, ವೈದ್ಯಾಧಿಕಾರಿ ಡಾ| ಕಲ್ಪನಾ ಬಸವರಾಜ, ಪಿಡಿಒ ಐ.ಎ. ಮಮದಾಪುರ, ಆಶಾ ಕಾರ್ಯಕರ್ತೆ ಸುವರ್ಣ ವಾಲಿಕಾರ ಧರೆಪ್ಪ ಬಮ್ಮನಳ್ಳಿ, ಗುರುನಾಥ ದಳವಾಯಿ, ಮುತ್ತುರಾಜ ಹಾಲಿಹಾಳ, ಇಬ್ರಾಹಿಂ ಮಕಾಂದಾರ, ಗ್ರಾಮ ಪಂಚಾಯತಿ ಸದಸ್ಯರು ಸೇರಿದಂತೆ ಇತರರು ಇದ್ದರು.
ತಾಲೂಕಿನಲ್ಲಿ ಒಟ್ಟು ಇಪ್ಪತೈದು ಕ್ವಾರಂಟೈನ ಕೇಂದ್ರ ಆರಂಭಿಸಿದ್ದು, ಎರಡು ಸಾವಿರಕ್ಕೂ ಹೆಚ್ಚು ಜನರಿದ್ದು, ಅದರಲ್ಲಿ ಗಭಿರ್ಣಿ, ಹತ್ತು ವರ್ಷದೊಳಗಿನ ಮಕ್ಕಳು, 60 ವಯಸ್ಸು ದಾಟಿದ ವೃದ್ಧರ ಗಂಟಲ ದ್ರವವನ್ನು ನಾಳೆಯಿಂದ ತಗೆದುಕೊಂಡು ಪರೀಕ್ಷೆಗಾಗಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿಕೊಡಲಾಗುವುದು.
ಡಾ| ಎಸ್.ಎಸ್. ಓತಗೇರಿ,
ಟಿಎಚ್‌ಒ ಬಸವನ ಬಾಗೇವಾಡಿ