ಹೂವಿನಹಿಪ್ಪರಗಿ: ಪ್ರಸಕ್ತ ವರ್ಷ ಮುಂಗಾರು ವಿಳಂಬವಾದರೂ ಮಳೆರಾಯ ಹಲವೆಡೆ ಕೃಪೆ ತೋರಿದ್ದು ರೈತರು ತಮ್ಮ ತಮ್ಮ ಹೊಲಗಳನ್ನು ಬಿತ್ತಲು ಮುಂದಾಗಿದ್ದಾರೆ. ಆದರೆ ರೈತ ಸಂಪರ್ಕ ಕೇಂದ್ರದಲ್ಲಿ ಮೂರು, ನಾಲ್ಕು ದಿನದಿಂದ ಮುಂಗಾರು ಹಂಗಾಮಿನಲ್ಲಿ ಅತಿ ಹೆಚ್ಚು ಬೇಡಿಕೆ ಇರುವ ತೊಗರಿ ಬೀಜಕ್ಕಾಗಿ ರೈತರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಬಸವನಬಾಗೇವಾಡಿ ತಾಲೂಕಿನ ಹೂವಿನಹಿಪ್ಪರಗಿ ಹೋಬಳಿ ರೈತ ಸಂಪರ್ಕ ಕೇಂದ್ರಕ್ಕೆ ರೈತರು ತಮಗೆ ಬೇಕಿರುವ ಮುಂಗಾರು ಹಂಗಾಮಿನ ಬಿತ್ತನೆ ಬೀಜಗಳಾದ ಸಜ್ಜಿ, ಸೂರ್ಯಕಾಂತಿ, ಗೋವಿನ ಜೋಳ, ಹೆಸರು ಸೇರಿದಂತೆ ಇತರೆ ಬೀಜಗಳು ಕೇಂದ್ರದಲ್ಲಿ ದಾಸ್ತಾನು ಇದೆ. ಅದರೆ ಅತಿ ಹೆಚ್ಚು ಬೇಡಿಕೆ ಇರುವ ತೊಗರಿ ಬೀಜದ ಕೊರತೆ ಕಾಣುತ್ತಿದೆ.
ಈವರೆಗೆ ಜಿಲ್ಲಾಡಳಿತ ಈ ವರ್ಷದ ಮುಂಗಾರು ಹಂಗಾಮಿಗೆ ಬೇಕಾಗುವ ಬಿತ್ತನೆ ಬೀಜ ಕೃಷಿ ಇಲಾಖೆ ಬೇಡಿಕೆಗೆ ತಕ್ಕಂತೆ ದಾಸ್ತುನು ಮಾಡಿದೆ ಎಂದು ಹೇಳಲಾಗಿತ್ತು. ಆದರೆ ಸದ್ಯದ ಸ್ಥಿತಿ ಬೇರೆನೇ ಕಾಣುತ್ತಿತೆ. ರೈತರು ಮಾತ್ರ ತಮ್ಮ ಕೆಲಸ ಕಾರ್ಯ ಬಿಟ್ಟು ಎರಡು ಮೂರು ದಿನದಿಂದ ತೊಗರಿ ಬೀಜಕ್ಕಾಗಿ ರೈತ ಸಂಪರ್ಕ ಕೇಂದ್ರಕ್ಕೆ ಬಂದು ಹೋಗಿ ಬೇಸತ್ತಿದ್ದಾರೆ.
ಅಧಿಕಾರಿಗಳು ಮಾತ್ರ ಕಾಟಾಚಾರಕ್ಕೆ ಎಂಬಂತೆ ಇಂದು ಬರುತ್ತೆ ನಾಳೆ ಬರುತ್ತೆ ಎಂದು ರೈತರಿಗೆ ಬೇಜವ್ದಾರಿ ಉತ್ತರ ನೀಡುತ್ತಿದ್ದಾರೆ. ಹಂಗಾಮು ಆರಂಭಕ್ಕೂ ಮುನ್ನಾ ಕೇಂದ್ರಕ್ಕೆ 300 ಕ್ವಿಂಟಲ್ ತೊಗರಿ ಬೀಜ ಬೇಡಿಕೆ ಇತ್ತು. ಆದರೆ ಇಲಾಖೆಯಿಂದ 100 ಕ್ವಿಂಟಲ್ ಬೀಜವನ್ನು ಮಾತ್ರ ಪೂರೈಸಲಾಗಿತ್ತು. ಇದೀಗ ಮದ್ಯದಲ್ಲಿ ಬೀಜ ಮುಗಿದು ಹೊದ ಮೇಲೆ ಮತ್ತೆ 50 ಕ್ವಿಂಟಲ್ ತೊಗರಿ ಬೀಜ ಕಳುಹಿಸಲಾಗಿದೆ. ಇದು ಎಷ್ಟರ ಮಟ್ಟಿಗೆ ರೈತರಿಗೆ ಸಾಕಾಗುತ್ತದೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ.
50 ಕ್ವಿಂಟಲ್ ತೊಗರಿ ಬೀಜ: ರೈತರು ದಿನ ಬೆಳಗಾದರೆ ತಮ್ಮ ಕೆಲಸ ಬಿಟ್ಟು ಸರತಿ ಹಚ್ಚುತ್ತಿದ್ದಾರೆ. ಅಧಿಕಾರಿಗಳು ತೊಗರಿ ಬೀಜ ಇಂದು ಬರಲ್ಲ ನಾಳೆ ಬನ್ನಿ ಎಂದು ಹೇಳಿದ ಮೂರು ದಿನ ನಂತರ ಶನಿವಾರ 50 ಕ್ವಿಂಟಲ್ ತೊಗರಿ ಬೀಜ ಬಂದು ಕೇಂದ್ರವನ್ನು ತಲುಪಿದೆ. ಆದರೆ ಇನ್ನೂ 100ರಿಂದ 200 ಕ್ವಿಂಟಲ್ ತೊಗರಿ ಬೀಜದ ಬೇಡಿಕೆ ಇದೆ. ಅದರೆ ಇಲಾಖೆಯಿಂದ ಪೂರೈಕೆಯಾಗಿದ್ದು ಮಾತ್ರ ಬೇಡಿಕೆಯ ಅರ್ಧದಷ್ಟು.