ಹೂವಿನಹಿಪ್ಪರಗಿ: ಆಲಮಟ್ಟಿ ಜಲಾಶಯದಿಂದ ಮುಳವಾಡ ಏತ ನೀರಾವರಿ ಮುಖ್ಯ ಕಾಲುವೆಯಿಂದ ಹರಿದ ಬಿಟ್ಟ ನೀರು ಹೂವಿನಹಿಪ್ಪರಗಿ ಕೆರೆಗೆ ಬಂದು ಸೇರಿದ್ದು ರೈತರಲ್ಲಿ, ಜನಸಾಮಾನ್ಯರಲ್ಲಿ ಸಂತಸವನ್ನುಂಟು ಮಾಡಿದೆ ಎಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಹೇಳಿದರು.
ನೀರು ತುಂಬುತ್ತಿರುವ ಕೆರೆಗೆ ಬಂದ ಗಂಗೆಗೆ ಹೂವಿನಹಿಪ್ಪರಗಿ ರೈತರು ಹಾಗೂ ಅಖಂಡ ಕರ್ನಾಟಕ ರೈತ ಸಂಘದ ವತಿಯಿಂದ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಕಳೆದ 6 ತಿಂಗಳಿನಿಂದ ಹೂವಿನಹಿಪ್ಪರಗಿ ಕೆರೆಗೆ ನೀರು ತುಂಬಿಸಲು ಮಾಡಿದ ಹೋರಾಟದ ಪ್ರತಿಫಲವಾಗಿ ಜಿಲ್ಲೆಯ ಬಹುತೇಕ ಜನಸಾಮಾನ್ಯರಿಗೆ ಕಾಲುವೆಗೆ ಬಂದು ನೀರು ಅನುವು ಮಾಡಿಕೊಟ್ಟಿದೆ ಎಂದರು.
ಪ್ರಥಮದಲ್ಲಿ ಬಳೂತಿ ಜಾಕ್ವೇಲ್ ಸುಟ್ಟ ಸಂದರ್ಭದಲ್ಲಿ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿಗೆ ಭೇಟಿಯಾಗಿ ಬಳೂತಿ ಜಾಕ್ವೇಲ್ಗೆ ದುರಸ್ತಿ ಮಾಡಿಸಿ ಎಂದು ಹೇಳಲು ಪ್ರಯತ್ನಿಸಿದ್ದು ಅಖಂಡ ಕರ್ನಾಟಕ ರೈತ ಸಂಘ. ನಾಡಿನ ಕೆಲವು ಮಠಾಧೀಶರ ಪ್ರಯತ್ನದ ಫಲವಾಗಿ ಮತ್ತು ಕೂಡಗಿ ರೈಲ್ವೇ ಬ್ರಿಡ್ಜ್ ಕೆಳಗೆ ಹಾಯ್ದು ಹೋಗಿರುವ ಕಾಲುವೆ ಕಾಮಗಾರಿ ಶೀಘ್ರದಲ್ಲಿ ಮುಕ್ತಾಯಗೊಳಿಸಲು ವಿಳಂಬ ಮಾಡಿದ್ದನ್ನು ಖಂಡಿಸಿ ರೈಲು ತಡೆ ಚಳವಳಿ ಮಾಡಿದ್ದರ ಫಲವಾಗಿ ಜಿಲ್ಲೆಯ 27 ಕೆರೆಗಳಿಗೆ ನೀರು ತುಂಬಿಸಲು ಅನುಕೂಲ ಎಂದರು.
ರೈತ ಸಂಘದ ತಾಲೂಕಾಧ್ಯಕ್ಷ ಸಿದ್ದರಾಮ ಅಂಗಡಗೇರಿ ಮಾತನಾಡಿ, ಅಖಂಡ ಕರ್ನಾಟಕ ರೈತ ಸಂಘ ಹಾಗೂ ಕೆಲವು ಮಠಾಧಿಧೀಶರ ಹೋರಾಟದ ಪ್ರತಿಫಲದ ಹೊರತು ಜಿಲ್ಲೆಯ ಯಾವೋಬ್ಬ ಜನ ಪ್ರತಿನಿಗಧಿಳ ಹೋರಾಟ ಇದರಲ್ಲಿ ಇಲ್ಲ. ಆದರೂ ಕೆಲವೊಬ್ಬ ಜನಪ್ರತಿನಿಧಿಗಳು ನಾವೇ ನೀರು ಬೀಡಿಸಿದ್ದೇವೆ ಎಂದು ಪೂಜೆ ಸಲ್ಲಿಸಿ ಪ್ರಚಾರ ಪಡೆಯುತ್ತಿರುವುದು ಹಾಸ್ಯಸ್ಪದ ಎಂದರು.
ರೈತರು, ಜನಸಾಮಾನ್ಯರು, ಪ್ರಾಣಿ ಸಂಕುಲಗಳ ಮೇಲೆ ಕನಿಕರವಿದ್ದರೆ ಈ ಮೊದಲು ಏಕೆ ಬಾಯಿ ಬಿಡಲಿಲ್ಲ. ಈಗ ನೀರು ಬಂದ ಮೇಲೆ ನನ್ನಿಂದಲೇ ಆಯಿತು ಎಂದು ಹೇಳಿಕೊಳ್ಳುವುದು ಸರಿಯಲ್ಲ ಎಂದ ಅವರು, ಕೆರೆಗಳು ಸಂಪೂರ್ಣ ತುಂಬುವವರೆಗೂ ನೀರು ಹರಿಸಲು ಒತ್ತಾಯಿಸಿದರು.
ರಮೇಶ ಕೋರಿ ಹನುಮಂತ್ರಾಯ ಗುಣಕಿ, ಸೋಮಣ್ಣ ಶಿವಯೋಗಿ, ಚಂದ್ರಶೇಖರ ಬಾಟಿ, ಸಿದ್ದಲಿಂಗಯ್ಯ ಹಿರೇಮಠ, ಲಕ್ಷಣ ಪೂಜಾರಿ, ಸಿದ್ದು ಪೂಜಾರಿ, ಅನಿಲ ಕುಂಬಾರ, ಶಬ್ಬೀರ್ ಮುಲ್ಲಾ ಇದ್ದರು.