ಹೂವಿನಹಡಗಲಿ: ಪ್ರಸ್ತುತ ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು ಎಂದು ಒತ್ತಾಯಿಸಿ ಸಾರಿಗೆ ನೌಕರರು ಪಟ್ಟಣದ ಲಾಲ್ ಬಹದ್ದೂರು ಶಾಸ್ತ್ರಿ ವೃತ್ತದಿಂದ ತಾಲೂಕು ಕಚೇರಿಗೆ ಕಾಲ್ನಡಿಗೆ ಜಾಥಾ ನಡೆಸಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಸಾರಿಗೆ ನೌಕರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ತಿಪ್ಪೇಸ್ವಾಮಿ ಮಾತನಾಡಿ, ಕಳೆದ ಹತ್ತಾರು ವರ್ಷದಿಂದಲೂ ನಾವು ನಮ್ಮ ವೈಯಕ್ತಿಕ ಬದುಕನ್ನು ಬದಿಗಿಟ್ಟು ಕೆಲಸ ಮಾಡುತ್ತಿದ್ದೇವೆ. ಹಬ್ಬ ಹರಿದಿನಗಳನ್ನು ಲೆಕ್ಕಿಸದೇ ಹೆಂಡತಿ
ಮಕ್ಕಳ ಯೋಗ ಕ್ಷೇಮವನ್ನು ಸಹ ನಿರ್ಲಕ್ಷ್ಯ ಮಾಡಿ ಹಗಲಿರುವ ಕೆಲಸ ಮಾಡುತ್ತಿದ್ದೇವೆ. ಆದರೂ ಸಹ ಸರ್ಕಾರಕ್ಕೆ ನಮ್ಮ ಬಗ್ಗೆ
ಕನಿಕರ ಬರುತ್ತಿಲ್ಲ. ಸಾರಿಗೆ ಬಸ್ಸು ಮಾತ್ರ ಸರ್ಕಾರದ್ದು, ಕಟ್ಟಡ ಸರ್ಕಾರದ್ದು ಆದರೆ ನೌಕರರು ಸರ್ಕಾರದವರಲ್ಲ. ಸರ್ಕಾರದ ಈ ಮಲತಾಯಿ ಧೋರಣೆಯನ್ನು ಈ ಕೂಡಲೇ ಕೈ ಬಿಡಬೇಕು ಎಂದರು.
ಪ್ರತಿಭಟನೆ ಕುರಿತು ರಂಗಭಾರತಿ ಅಧ್ಯಕ್ಷೆ ಎಂ.ಪಿ. ಸುಮ, ನೌಕರರ ಒಕ್ಕೂಟದ ವಿಭಾಗದ ಅಧ್ಯಕ್ಷ ಮಹಾಂತೇಶ್, ಪ್ರವೀಣ, ನಿರ್ವಾಹಕ ಬಸವರಾಜ್ ಮುಂತಾದವರು ಮಾತನಾಡಿ, ಸಾರಿಗೆ ನೌಕರರು ಸಂಕಷ್ಟದ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಕಾರಣ ಕೂಡಲೇ ಸರ್ಕಾರ ಇವರ ಬಗ್ಗೆ ಗಮನಹರಿಸಿ ಇವರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು ಎಂದರು.
ಪ್ರತಿಭಟನೆಯಲ್ಲಿ ಸಾರಿಗೆ ನೌಕರರು ಹಾಗೂ ಅವರ ಕಟುಂಬದವರು ಭಾಗವಹಿಸಿದ್ದರು. ತಹಶೀಲ್ದಾರ್ ಕೆ.ರಾಘವೇಂದ್ರರಾವ್ ಅವರಿಗೆ ಮನವಿ ಸಲ್ಲಿಸಿದರು.