Advertisement

ಚರ್ಚೆಗೆ ಗ್ರಾಸವಾದ ಫಲಿತಾಂಶ ಕುಸಿತ!

11:44 AM May 03, 2019 | Naveen |

ಹೂವಿನಹಡಗಲಿ: ಪ್ರಸ್ತುತ ಎಸ್‌ಎಸ್‌ಎಲ್ಸಿ ಫಲಿತಾಂಶದಲ್ಲಿ ಈ ಬಾರಿ ತಾಲೂಕಿನಲ್ಲಿ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದ್ದು, ರಾಜ್ಯದ 204 ಶೈಕ್ಷಣಿಕ ಬ್ಲಾಕ್‌ನಲ್ಲಿ ಹಡಗಲಿ ತಾಲೂಕು 204ನೇ ಸ್ಥಾನ ಪಡೆದು ರಾಜ್ಯಕ್ಕೆ ಕೊನೆ ಸ್ಥಾನ ಪಡೆದುಕೊಂಡಿದೆ.

Advertisement

ಪರೀಕ್ಷೆ ವೇಳೆ ಕೈಗೊಂಡ ಬಿಗಿಯಾದ ಕ್ರಮಗಳು ಇದಕ್ಕೆಲ್ಲ ಪ್ರಮುಖ ಕಾರಣವಾಗಿದೆ ಎಂದು ತಾಲೂಕಿನಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕಳೆದ ವರ್ಷದ ಫಲಿತಾಂಶಕ್ಕೆ ಹೋಲಿಸಿದರೆ ಈ ಬಾರಿ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದ್ದು, ಶೇ.40ರಷ್ಟು ಫಲಿತಾಂಶ ಲಭಿಸಿದೆ.

ಪಟ್ಟಣದ ಹೃದಯ ಭಾಗದಲ್ಲಿರುವ ಸರ್ಕಾರಿ ಬಾಲಕರ ಪ.ಪೂ ಕಾಲೇಜಿಗೆ ಕೇವಲ ಶೇ.5.26ರಷ್ಟು ಫಲಿತಾಂಶ ಲಭಿಸಿದ್ದು, ಶಿಕ್ಷಣ ತಜ್ಞರು, ಮಕ್ಕಳ ಪೋಷಕರಿಗೆ, ಶಿಕ್ಷಕರಿಗೆ ಅಚ್ಚರಿ ತಂದಿದೆ. ಫಲಿತಾಂಶ ಕುಸಿತದಲ್ಲೂ ತಾಲೂಕಿನ ಎಂ.ಎಂ. ಪಾಟೀಲ್ ಪ್ರೌಢಶಾಲೆ, ಹೊಳಲು ಸಾಧನಾ ಪ್ರೌಢಶಾಲೆ, ಹಿರೇಹಡಗಲಿಯ ಸ್ವಾಮಿ ವಿವೇಕಾನಂದ ಪ್ರೌಢಶಾಲೆ, ಗಿರಿಯಾಪುರ ಮಠದ ಮೊರಾರ್ಜಿ ಪ್ರೌಢಶಾಲೆ, ಕಿತ್ತೂರರಾಣಿ ಚನ್ನಮ್ಮ ವಸತಿಶಾಲೆ ಸೇರಿ ಮುಂತಾದ ಶಾಲೆಗಳಲ್ಲಿ ಉತ್ತಮ ಫಲಿತಾಂಶ ಬಂದಿದೆ.

ಯಾವ ಶಾಲೆಯಲ್ಲಿ ಶಿಕ್ಷಕರ ಕೊರತೆ ಇದೆಯೋ ಆ ಶಾಲೆಯಲ್ಲಿ ಈ ಬಾರಿ ಹೆಚ್ಚುವರಿ ಶಿಕ್ಷಕರನ್ನು ನೀಡಲಾಗಿದೆ. ಅಲ್ಲದೆ, ಜಿಲ್ಲೆಯಲ್ಲಿ ಫಲಿತಾಂಶ ಹೆಚ್ಚಿಸಲು ಅಬ್ದುಲ್ ಕಲಾಂ ಶಿಕ್ಷಣ ಸೇವೆ, ಬಳ್ಳಾರಿ ವಿಜನ್‌ ಫಾರ ಎಜುಕೇಶನ್‌ ಅಡಿ ಅತಿಥಿ ಶಿಕ್ಷಕರನ್ನು ನೀಡಲಾಗಿತ್ತು. ಇಷ್ಟೆಲ್ಲ ಸೌಲಭ್ಯ ನೀಡಿದರೂ ಕೂಡ ಫಲಿತಾಂಶ‌ ಕಡಿಮೆ ಬರುವುದಕ್ಕೆ ಶಿಕ್ಷಣ ಇಲಾಖೆಯ ಮೇಲಧಿಕಾರಿಗಳ ಮಾರ್ಗದರ್ಶನ ಕೊರತೆ ಇರಬಹುದು ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ.

ನೂರಕ್ಕೆ ನೂರು ಯಾವ ಶಾಲೆ ಇಲ್ಲ: ಕಳೆದ ಬಾರಿ ಸಾಧನಾ ಆಂಗ್ಲ ಮಾಧ್ಯಮ ಶಾಲೆ, ಎಂ.ಎಂ .ಪಾಟೀಲ ಶಾಲೆ, ಸರ್ಕಾರಿ ಪ್ರೌಢಶಾಲೆ ಉಪನಾಯ್ಕಹಳ್ಳಿ, ಮೊದಲಗಟ್ಟೆ ಮೊರಾರ್ಜಿ ವಸತಿ ಶಾಲೆ, ಗಿರಿಯಾಪುರ ಮಠದ ವಸತಿ ಶಾಲೆ, ಇಟಗಿ ವಸತಿ ಶಾಲೆ, ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಸೇರಿದಂತೆ ಒಟ್ಟು 7 ಶಾಲೆಗಳು ನೂರಕ್ಕೆ ನೂರರಷ್ಟು ಫಲಿತಾಂಶ ಪಡೆದಿದ್ದವು. ಆದರೆ ಈ ಬಾರಿ ತಾಲೂಕಿನಲ್ಲಿರುವ ಒಂದು ಶಾಲೆಯೂ ಶೇ.100ರಷ್ಟು ಫಲಿತಾಂಶ ಪಡೆದಿಲ್ಲ.

Advertisement

ಈ ಬಾರಿ ತಾಲೂಕಿನಲ್ಲಿ ಫಲಿತಾಂಶ ಕುಸಿಯಲು ವಿದ್ಯಾರ್ಥಿಗಳಲ್ಲಿ ಕಲಿಕೆ ಬಗ್ಗೆ ನಿರಾಸಕ್ತಿ ಇರಬಹುದು. ಕೆಲವು ಶಿಕ್ಷಕರು ಮಕ್ಕಳಿಗೆ ಗುಣಮಟ್ಟ ಬೋಧನೆ ಮಾಡುವಲ್ಲಿ ನಿರ್ಲಕ್ಷ್ಯ ತೋರಿರಬಹುದು. ಅಲ್ಲದೆ, ಈ ಬಾರಿ ಪಠ್ಯ ಪುಸ್ತಕ ಬದಲಾವಣೆಯಾಗಿ ನೂತನ ಪಠ್ಯಕ್ರಮ ಬಂದಿರುವುದೂ ಕೂಡ ಫಲಿತಾಂಶ ಕುಸಿಯಲು ಕಾರಣವಾಗಿರಬಹುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ನಾಗರಾಜ್‌ ಪ್ರತ್ರಿಕ್ರಿಯಿಸಿದ್ದಾರೆ.

ಮುಂದಿನ ಶೈಕ್ಷಣಿಕ ವರ್ಷದಲ್ಲಿ ತಾಲೂಕಿನಲ್ಲಿ ಫಲಿತಾಂಶ ಹೆಚ್ಚಳ ಮಾಡುವುದಕ್ಕೆ ಈಗಾಗಲೇ ಮುಖ್ಯೋಪಾಧ್ಯಾರ ಸಭೆ ಕರೆಯಲಾಗಿದೆ. ಶಿಕ್ಷಕರಿಗೆ ಇಂದಿನಿಂದಲೇ ಸೂಕ್ತ ತಯಾರಿ ನಡೆಸಲು ಮುಖ್ಯ ಶಿಕ್ಷಕರಿಗೆ ವೇದಿಕೆ ತಯಾರಿಸಿದ್ದು, ವಿಷಯವಾರು ತರಬೇತಿ ನೀಡಲಾಗುವುದು.
•ಸಿ.ನಾಗರಾಜ,
ಕ್ಷೇತ್ರ ಶಿಕ್ಷಣಾಧಿಕಾರಿ.

ವಿಶ್ವನಾಥ ಹಳ್ಳಿಗುಡಿ

Advertisement

Udayavani is now on Telegram. Click here to join our channel and stay updated with the latest news.

Next