ಹೂವಿನಹಡಗಲಿ: ಕಳೆದ ಒಂದು ವಾರದಿಂದಲೂ ತಾಲೂಕಿನಾದ್ಯಂತ ಮಳೆಯಾಗುತ್ತಿದ್ದು ತುಂಗಭದ್ರಾ ನದಿಯ ಒಳ ಹರಿವು ಹೆಚ್ಚುತ್ತಿದ್ದು ರಾಜವಾಳ ಡ್ಯಾಂ ಭರ್ತಿಯಾಗಿದೆ. ಇದರಿಂದಾಗಿ ಡ್ಯಾಂನ ಎಡ ಹಾಗೂ ಬಲ ಭಾಗದ ರೈತರಲ್ಲಿ ಹರ್ಷ ತಂದಿದೆ.
ಇತ್ತ ತಾಲೂಕಿನ ಜೀವನಾಡಿಯಾಗಿರುವ ಸಿಂಗಟಾಲೂರು ಬ್ಯಾರೇಜ್ ಮೇಲ್ಭಾಗದಲ್ಲಿ ಮಲೆನಾಡಿನಲ್ಲಿ ಸುರಿದ ಮಳೆಯಿಂದಾಗಿ ತುಂಗಭದ್ರಾ ನದಿಗೆ ಹೆಚ್ಚಿನ ನೀರು ಹರಿದು ಬರುತ್ತಿದ್ದು ರೈತರಿಗೆ ಜೀವ ಕಳೆ ತಂದಂತಾಗಿದೆ.
ಪ್ರಸ್ತುತ ಸಿಂಗಟಾಲೂರು ಬ್ಯಾರೇಜ್ ಸುಮಾರು 509 ಎಫ್‌ಆರ್‌ಎಲ್, ಸುಮಾರು 3.12 ಟಿಎಂಸಿ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದೆ. ಬ್ಯಾರೇಜ್ ನಿರ್ಮಾಣದಲ್ಲಿ ಹಿನ್ನೀರಿನಿಂದ ಮುಳುಗಡೆಯಾಗಲಿರುವ ಗ್ರಾಮಗಳು ಇನ್ನು ಸ್ಥಳಾಂತರವಾಗದ ಹಿನ್ನ್ನೆಲೆಯಲ್ಲಿ 506.8 ಎಫ್‌ಆರ್‌ಎಲ್(1.90) ಪ್ರಮಾಣದಲ್ಲಿ ನೀರು ನಿಲ್ಲಿಸಲಾಗಿದೆ ಎಂದು ಸಹಾಯಕ ಕಾರ್ಯಪಾಲಕ ಅಭಿಯಂತರ ಐಗೋಳ್ ಪ್ರಕಾಶ್ ತಿಳಿಸಿದ್ದಾರೆ. ತಾಲೂಕಿನ ರೈತರಿಗೆ ಕೃಷಿ ಚಟುವಟಿಕೆಗೆ ಅನುಕೂಲವಾಗಲು ಈಗಾಗಲೇ ರಾಜವಾಳ ಮುಖ್ಯ ಕಾಲುವೆಗೆ ನೀರು ಹರಿಸಿದ್ದೇವೆ. ದೇವಗೊಂಡನಹಳ್ಳಿ ಮುದೇನೂರು ಗ್ರಾಮಗಳಿಗೆ ಕಾಲುವೆ ಮೂಲಕ ನೀರು ಹರಿಸಲಾಗಿದ್ದು, ಹಿರೇಮಲ್ಲನಕೇರಿ ಗ್ರಾಮಕ್ಕೆ ಇನ್ನೂ 4-5 ದಿನಗಳಲ್ಲಿ ನೀರು ಹರಿಸಲಾಗುವುದು ಎಂದರು.
ಇನ್ನು ಶಾಕಾರಾ ಚಾಕೋಲ್ನಿಂದಾಗಿ ದಾಸನಹಳ್ಳಿ, ಹ್ಯಾರಡ, ಮಲಿಯಮ್ಮನಕೆರೆಗೆ ನೀರು ಹರಿಸಲಾಗುತ್ತಿದ್ದು ತಾಲೂಕಿನ ಮಾಗಳ ಜಾಕೋಲ್ ಮೂಲಕ ಹಿರೇಹಡಗಲಿ, ಹಗರನೂರು, ಎಂ.ಎಂ. ವಾಡ, ಕೊಮಾರ್ನಹಳ್ಳಿ ತಾಂಡ, ತಳಕರ್ಲ ಬನ್ನಿಕಲ್ ಕೆರೆಗಳಿಗೆ ನಾಗತಿ ಬಸಾಪುರ, ಕೆರೆಗಳಿಗೆ ನೀರು ಬಿಡಲಾಗಿದೆ. ಇದರಿಂದಾಗಿ ಈ ಭಾಗದ ರೈತರು ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ.
ಪ್ರಾರಂಭದಲ್ಲಿ ತಾಲೂಕಿನಲ್ಲಿ ಮುಂಗಾರು ಸಂಪೂರ್ಣವಾಗಿ ವಿಫಲವಾಗುವ ವಾತಾವರಣ ನಿರ್ಮಾಣವಾಗಿತ್ತು. ಜೂನ್ ತಿಂಗಳು ಮುಗಿಯುತ್ತ ಬಂದಿದ್ದರೂ ತಾಲೂಕಿನಲ್ಲಿ ಬಿತ್ತನೆ ಪ್ರಾಮಾಣ ತುಂಬ ಕಡಿಮೆ ಹಂತದಲ್ಲಿದ್ದು ಮುಂದಿನ ದಿನಗಳಲ್ಲಿ ತಾಲೂಕು ಭೀಕರ ಬರಗಾಲ ಎದುರಿಸುವ ಹಂತ ತಲುಪಿತ್ತು. ಆದರೆ ಅದೃಷ್ಟವಶಾತ್ ಜುಲೈ ಪ್ರಾರಂಭದಲ್ಲಿ ದೊಡ್ಡ ಪ್ರಮಾಣದ ಮಳೆಯಾಗದಿದ್ದರೂ ಸುರಿದ ಸರಾಸರಿ ಮಳೆಯಿಂದಾಗಿ ರೈತರು ಸುಮಾರು 30-40ರಷ್ಟು ಬಿತ್ತನೆ ಕೈಗೊಂಡಿದ್ದಾರೆ. ಇನ್ನೂ ಹೆಚ್ಚಿನ ಬಿತ್ತನೆ ತಾಲೂಕಿನಲ್ಲಿ ಕಂಡುಬಂದಿದ್ದು ರೈತರು ನಿರಾಳರಾಗಿದ್ದಾರೆ.