ವಿಶ್ವನಾಥ ಹಳ್ಳಿಗುಡಿ
ಹೂವಿನಹಡಗಲಿ: ಪ್ರಸ್ತುತ ಮುಂಗಾರು ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಕೃಷಿ ಇಲಾಖೆ ಮುಂಗಾರು ಬಿತ್ತನೆಗೆ ಸಕಲ ಸಿದ್ಧತೆ ಮಾಡಿಕೊಂಡಿದೆ.
ಈ ತನಕ ಕಳೆದ ವರ್ಷ ಹೋಲಿಕೆ ಮಾಡಿದಲ್ಲಿ ವಾರ್ಷಿಕ ಸರಾಸರಿ ಮಳೆ 144 ಮಿಮೀ ಆಗಬೇಕಿತ್ತು. ಕಳೆದ ವರ್ಷದಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಅಂದರೆ ಈ ಹೊತ್ತಿಗಾಗಲೇ 226 ಮಿಮೀ ಮಳೆ ಆಗಿತ್ತು. ಪ್ರಸ್ತುತ ಈ ಬಾರಿ 25 ಮಿಮೀ ಮಾತ್ರ ಮಳೆಯಾಗಿ ಶೇ.66ರಷ್ಟು ವಾಡಿಕೆ ಮಳೆಗಿಂತ ಕೊರತೆಯಾಗಿರುವುದು ತಾಲೂಕಿನ ರೈತರನ್ನು ಚಿಂತೆಗೀಡು ಮಾಡಿದೆ.
ಕಳೆದ ವರ್ಷ ಮೇ ಅಂತ್ಯದಲ್ಲಿ 53,961 ಹೆಕ್ಟೇರ್ ಪ್ರದೇಶದ ಒಟ್ಟು ಗುರಿಯಲ್ಲಿ 17.23 ರಷ್ಟು ಬಿತ್ತನೆ ಆಗಿತ್ತು. ಆದರೆ ಈ ವರ್ಷ ಈ ತನಕ ಒಂದು ಹೆಕ್ಟೇರ್ ಪ್ರದೇಶದಷ್ಟು ಸಹ ಬಿತ್ತನೆಯಾಗದಿರುವುದು ತಾಲೂಕಿನಲ್ಲಿ ಕಂಡು ಬಂದಿದ್ದು, ರೈತರ ಬದುಕು ಭವಿಷ್ಯದಲ್ಲಿ ಕಷ್ಟದಾಯಕ ಎನ್ನುವ ಮುನ್ಸೂಚನೆ ತೋರುತ್ತಿದೆ. ಕಳೆದ ಬಾರಿ ಒಟ್ಟಾರೆ ಮುಂಗಾರಿನಲ್ಲಿ 99.58 ರಷ್ಟು ಬಿತ್ತನೆಯಾಗಿತ್ತು. ಹಿಂಗಾರಿನಲ್ಲಿ ಒಟ್ಟು 24,672 ಹೆಕ್ಟೇರ್ ಪ್ರದೇಶದ ಗುರಿಯಲ್ಲಿ 17,616 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಿ ಶೇ 71.40 ರಷ್ಟು ಸಾಧನೆ ಮಾಡಲಾಗಿತ್ತು.ಈ ಬಾರಿ ಮುಂಗಾರಿಗೆ ರೈತರಿಗೆ ಯಾವುದೇ ತೊಂದರೆಯಾಗದಂತೆ ಒಟ್ಟು 3 ರೈತ ಸಂಪರ್ಕ ಕೇಂದ್ರಗಳನ್ನು ತೆರೆಯಲಾಗಿದ್ದು, ಹಡಗಲಿ, ಹಿರೇಹಡಗಲಿ, ಇಟಗಿ ಕಸಬಾದಲ್ಲಿ ಸಂಪರ್ಕ ಕೇಂದ್ರ ತೆರಯಲಾಗಿದೆ. ಅಲ್ಲದೇ ಬೀಜ ವಿತರಣೆಗೆ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿನ ರೈತರಿಗೆ ಬಿತ್ತನೆ ಬೀಜದ ಸಮಸ್ಯೆಯಾಗಬಾರದು ಎನ್ನುವ ಹಿನ್ನೆಲೆಯಲ್ಲಿ 3 ಉಪ ಕೇಂದ್ರಗಳನ್ನು ಹೊಳಲು, ಹೊಳಗುಂದಿ, ಹಿರೇಮಲ್ಲನಕೇರಿ ಗ್ರಾಮಗಳಲ್ಲಿ ತೆರಯಲಾಗಿದೆ.
ರೈತರಿಗೆ ಅಗತ್ಯ ಬೀಜ ಸಂಗ್ರಹ ಮಾಡಲಾಗಿದ್ದು, ಭತ್ತ ಸುಮಾರು 60 ಕ್ವಿಂಟಲ್, ಜೋಳ 36 ಕ್ವಿಂ., ರಾಗಿ 12 ಕ್ವಿಂ., ಮೆಕ್ಕೆಜೋಳ 240 ಟನ್, ಸಜ್ಜೆ 36 ಕ್ವಿಂ.ತೊಗರಿ 240 ಕ್ವಿಂ. ಹೆಸರು 18 ಕ್ವಿಂ. ಸೂರ್ಯಕಾಂತಿ ಬೀಜ 24 ಕ್ವಿಂಟಲ್ದಷ್ಟು ಸಂಗ್ರಹಿಸಲಾಗಿದ್ದು, ಮಳೆ ಬಿದ್ದ ತಕ್ಷಣ ರೈತರಿಗೆ ಆಗತ್ಯ ಬೀಜಗಳನ್ನು ವಿತರಿಸಲಾಗುವುದು. •
ನೀಲಾನಾಯ್ಕ,
ಕೃಷಿ ಸಹಾಯಕ ನಿರ್ದೇಶಕ.