Advertisement
ಫೆ. 1ರಂದು ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಹಾಲು ಉಕ್ಕಿಸುವ ಮೂಲಕ ಧಾರ್ಮಿಕ ವಿಧಿವಿಧಾನಗಳಿಗೆ ಚಾಲನೆ ನೀಡಲಾಗಿದ್ದು, ಫೆ. 9ರ ಭಾರತ ಹುಣ್ಣಿಮೆ ದಿನ ಧ್ವಜಾರೋಹಣ, ಮರುದಿನ ತ್ರಿಶೂಲ ಪೂಜೆ ನಡೆಯಲಿದೆ. ಫೆ. 11ರಂದು ಲಕ್ಷಾಂತರ ಭಕ್ತರ ಮಧ್ಯೆ ಕಾರ್ಣಿಕ ಉತ್ಸವ ನಡೆಯಲಿದೆ. ಕಾರ್ಣಿಕದ ಮರುದಿನ ಫೆ. 12ರಂದು ಕಂಚಿ ವೀರರು ಹಾಗೂ ಇತರ ಬಾಬುದಾರರಿಂದ ಸರಪಳಿ ಪವಾಡ ನಡೆಯಲಿವೆ. ಕಾರ್ಣಿಕ ನುಡಿ ಆಲಿಸಲು ನಾಡು ಹಾಗೂ ಹೊರ ನಾಡಿನಿಂದ ಲಕ್ಷೋಪಲಕ್ಷ ಭಕ್ತರು ಆಗಮಿಸುತ್ತಾರೆ.
11ರಂದು ಕಾರ್ಣಿಕದ ವರೆಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಇಲ್ಲಿ ನೆರವೇರಲಿವೆ. ಪ್ರತಿ ದಿನ ಬೆಳಗ್ಗೆ ಅರ್ಚಕರು ಇಲ್ಲಿಗೆ ಬಂದು ಶ್ರೀ ಸ್ವಾಮಿಗೆ ಪೂಜೆ ಸಲ್ಲಿಸುತ್ತಾರೆ. ಜಾತ್ರೆ ಕಾರ್ಯಕ್ರಮಗಳು: ಫೆ. 1ರಂದು ಕಾರ್ಣಿಕದ ಗೊರವಯ್ಯನಿಗೆ ಕಂಕಣ ಧಾರಣೆ. ಫೆ. 9ರಂದು ಭಾರತ ಹುಣ್ಣಿಮೆ ದಿವಸ ವಿಶೇಷ ಧಾರ್ಮಿಕ ಕಾರ್ಯಕ್ರಮ. ಫೆ. 10ರಂದು ತ್ರಿಶೂಲ ಪೂಜೆ. ಫೆ. 11ರಂದು ನಾಡಿನ ಸುಪ್ರಸಿದ್ಧ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವ. ಫೆ. 12ರಂದು ಸಂಜೆ ಗಂಗಿಮಾಳವ್ವ ದೇವಸ್ಥಾನದ ಮುಂಭಾಗದಲ್ಲಿ ಗುರು ವೆಂಕಪ್ಪಯ್ಯ ಒಡೆಯರ್ ಸಾನ್ನಿಧ್ಯದಲ್ಲಿ ಸರಪಳಿ ಪವಾಡ, ವಿವಿಧ ಪವಾಡ ಕಾರ್ಯಕ್ರಮಗಳು. ಹೀಗೆ ಶ್ರೀ ಮೈಲಾರಲಿಂಗೇಶ್ವರ ಜಾತ್ರೆ ಪ್ರಯುಕ್ತವಾಗಿ ರಥಸಪ್ತಮಿ ದಿನವಾದ ಶನಿವಾರದಿಂದ 11 ದಿನಗಳ ಕಾಲ ವಿಶೇಷವಾದ ಧಾರ್ಮಿಕ ಕಾರ್ಯಕ್ರಮಗಳು ಜರುಗುವವು.