ಹೂವಿನಹಡಗಲಿ: ಹೇಮರಡ್ಡಿ ಮಲ್ಲಮ್ಮನವರ ಆದರ್ಶ ಮೌಲ್ಯಗಳನ್ನು ಪ್ರತಿಯೊಂದು ಕುಟುಂಬದ ಮಾತೆಯರು ಬದುಕಿನಲ್ಲಿ ಅಳವಡಿಸಿಕೊಂಡಾಗ ಉತ್ತಮ ಸಮಾಜ ನಿರ್ಮಿಸಲು ಸಾಧ್ಯ ಎಂದು ಗವಿಮಠದ ಡಾ.ಹಿರಿಶಾಂತವೀರ ಸ್ವಾಮೀಜಿ ಹೇಳಿದರು.
ತಾಲೂಕಿನ ಕೆಂಚಮನಹಳ್ಳಿ ಗ್ರಾಮದಲ್ಲಿ ಹೇಮರಡ್ಡಿ ಮಲ್ಲಮ್ಮ ಸೇವಾ ಟ್ರಸ್ಟ್ ಹಾಗೂ ನೌಕರರ ಟ್ರಸ್ಟ್ ಹಮ್ಮಿಕೊಂಡಿದ್ದ ಹೇಮರಡ್ಡಿ ಮಲ್ಲಮ್ಮನವರ 592ನೇ ಜಯಂತ್ಯುತ್ಸವ ಆಚರಣೆ ವೇಳೆ ಮಾತನಾಡಿದರು.
ಉಪನ್ಯಾಸಕ ಶಂಕರ ಬೆಟಗೇರಿ ಮಾತನಾಡಿ, ಬದುಕಿನುದ್ದಕ್ಕೂ ನೋವು ಅನುಭವಿಸಿ ಮಲ್ಲಮ್ಮ ದಾನ ಧರ್ಮ, ಕ್ಷಮಾ ಗುಣಗಳ ಮೂಲಕ ಮಹಿಳೆಯರಿಗೆ ಆದರ್ಶವಾಗಿದ್ದಾರೆ. ಶರಣರು ಕಟ್ಟಿ ಬೆಳೆಸಿದ ವೀರಶೈವ ಪರಂಪರೆ ಮುಂದುವರಿಸಿಕೊಂಡು ಬಂದ ಮಹಾನ್ ಸಾದ್ವಿ ಎಂದರು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರ ಮೂಲಕ ಮಲ್ಲಮ್ಮನವರ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸಬೇಕಾಗಿದೆ ಎಂದರು.
ತಾಲೂಕು ರಡ್ಡಿ ಸಮಾಜದ ಖಜಾಂಚಿ ಗೋವಿನಾಳು ಹಾಲಪ್ಪ ಅಧ್ಯಕ್ಷತೆ ವಹಿಸಿದ್ದರು. ಎಚ್.ಎಂ.ಮಲ್ಲಯ್ಯ, ಗ್ರಾಪಂ ಸದಸ್ಯರಾದ ಡಿ.ಮಲ್ಲಪ್ಪ, ಬಣಕಾರ ಕೆ.ಮಲ್ಲಿಕಾರ್ಜುನ, ಮುಖಂಡರಾದ ಪಿ.ವೀರಪ್ಪ, ಕೆ.ಚಂದ್ರಪ್ಪ, ಎಂ.ಶಿವಣ್ಣ, ಕೆ.ಬಸವಲಿಂಗಪ್ಪ, ಬಿ.ಬಸಪ್ಪ, ಕೆ.ಶಿವಪುತ್ರಪ್ಪ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಪಂ.ಪಂಚಾಕ್ಷರಿ ಹಿರೇಮಠ ಶಾಸ್ತ್ರೀಜಿ ಹೇಮರಡ್ಡಿ ಮಲ್ಲಮ್ಮನವರ ಕೀರ್ತನೆ ನಡೆಸಿಕೊಟ್ಟರು. ದೂರದರ್ಶನ ಹಾಸ್ಯ ಕಲಾವಿದ ಕೋಗಳಿ ಕೊಟ್ರೇಶ್ ನಡೆಸಿಕೊಟ್ಟ ಹಾಸ್ಯ ಜನಮನ ರಂಜಿಸಿತು.
ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಾದ ಭೋವಿ ಸುರೇಶ್, ಪ್ರಿಯಾಂಕ ಮಡಿವಾಳರ, ಎಸ್.ಎಂ.ಸ್ವಾಮಿ, ಎಂ.ಸುಷ್ಮಾ, ಕೆ.ಲಕ್ಷ್ಮಿ, ಜೆ.ಶಶಿಕಲಾ ಅವರನ್ನು ಸಮಾಜದ ವತಿಯಿಂದ ಸನ್ಮಾನಿಸಲಾಯಿತು. ಜೆ.ಶಶಿಕಲಾ, ಕೆ.ಲಕ್ಷ್ಮಿ ಪ್ರಾರ್ಥಿಸಿದರು. ವೈ.ಗುರುಬಸವರಾಜ ಸ್ವಾಗತಿಸಿದರು. ಹಿರಿಯೂರಿನ ಶಿಕ್ಷಕ ಟಿ.ಶೇಖರಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಎಚ್.ಎಂ.ಗುರುಬಸವರಾಜಯ್ಯ ನಿರೂಪಿಸಿದರು.
ಕಾರ್ಯಕಮಕ್ಕೂ ಮುನ್ನ ಗ್ರಾಮದ ಬೀದಿಗಳಲ್ಲಿ ಹೇಮರಡ್ಡಿ ಮಲ್ಲಮ್ಮನವರ ಭಾವಚಿತ್ರದ ಮೆರವಣಿಗೆ ನಂದಿಕೋಲು, ಸಮಾಳ, ಡ್ರಮ್‌ಸೆಟ್, ಮಹಿಳೆಯರ ಕಳಸದೊಂದಿಗೆ ಅದ್ಧೂರಿಯಾಗಿ ಜರುಗಿತು.