Advertisement

ಕಬ್ಬು ಕಟಾವಿಗೆ ರೈತರ ಒತ್ತಾಯ

12:41 PM Jan 15, 2020 | Naveen |

ಹೂವಿನಹಡಗಲಿ: ಪಟ್ಟಣದ ಗಂಗಾಪುರ ಶುಗರ್ ಕಚೇರಿ ಮುಚ್ಚಿ ತಾಲೂಕಿನ ತಿಪ್ಪಾಪುರ, ಮೀರಾಕೊರ್ನಹಳ್ಳಿ ಹಾಗೂ ಇತರೆ ಗ್ರಾಮದ ರೈತರು ಪ್ರತಿಭಟನೆ ನಡೆಸಿದರು.

Advertisement

ಈ ವೇಳೆ ಸ್ಥಳಕ್ಕೆ ಆಗಮಿಸಿದ ಎಜಿಎಂ ಮಂಜುನಾಥ ಅವರನ್ನು ತರಾಟೆಗೆ ತೆಗೆದುಕೊಂಡ ರೈತರು ತಮ್ಮ ಅಳಲನ್ನು ಹೇಳಿಕೊಂಡರು. ನಿಮ್ಮ ಕಚೇರಿಗೆ ಬಂದು ರೈತರ ಸಮಸ್ಯೆ ಹೇಳಿಕೊಂಡರೆ ಕೇಳುವವರಿಲ್ಲ. ಯಾರೊಬ್ಬರು ಫೋನ್‌ ರಿಸಿವ್‌ ಮಾಡಿ ಮಾತನಾಡುತ್ತಿಲ್ಲ. ಕಬ್ಬು ಕಟಾವ್‌ ಮಾಡಲು ತಿಳಿಸಿದಾಗ್ಯೂ ತುಂಬಾ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಕಟಾವ್‌ ದಿನಾಂಕ ಮುಗಿದರೂ ಕಟಾವ್‌ಗೆ ಬಾರದಿದ್ದರೆ ಹೇಗೆ, ರೈತರಿಗೆ ಇದರಿಂದಾಗಿ ತುಂಬಾ ನಷ್ಟವಾಗುತ್ತದೆ. ಮೇಲಾಗಿ ದರ ನಿಗದಿ ಮಾಡಿದ ಮೇಲೆ ಕಬ್ಬು ಕಟಾವ್‌ ಮಾಡಲು ರೈತರು ಹೆಚ್ಚುವರಿಯಾಗಿ ಒಂದು ಟನ್‌ ಕಬ್ಬಿಗೆ 350 ರೂ. ಕಟಾವ್‌ ಮಾಡಲು ಕೇಳುತ್ತಾರೆ. ಅಲ್ಲದೆ ಅವರಿಗೆ ಖುಷಿಯಾಗಿ ಕುರಿ, ಕೋಳಿ ಕೊಡಬೇಕು.
ಹಿಂಗಾದರೆ ರೈತರು ಬದುಕುವುದಾದರೂ ಹೇಗೆ ಎಂದು ಎಜಿಎಂ ಅವರನ್ನು ತರಾಟೆಗೆ ತೆಗೆದುಕೊಂಡರು.

ಗಂಗಾಪುರ ಶುಗರ್ ಫ್ಯಾಕ್ಟರಿ ಎಜಿಎಂ ಮಂಜುನಾಥ ಮಾತನಾಡಿ, ರೈತರು
ಬೆಳೆದಿರುವ ಕಬ್ಬು ಕಟಾವ್‌ ಮಾಡಲು ಕೂಲಿ ಕಾರ್ಮಿಕರ ಸಮಸ್ಯೆಯಿದ್ದು, ಸಾಧ್ಯವಾದಷ್ಟು ರೈತರ ಕಬ್ಬು ಜನವರಿ ಕೊನೆ ವಾರದೊಳಗೆ ಹಂತ ಹಂತವಾಗಿ ಕಟಾವ್‌ ಮಾಡಲಾಗುವುದು ಎಂದು ತಿಳಿಸಿದರು.

ರೈತರು ಬೆಳೆದಿರುವ ಕಬ್ಬು ಕಟಾವ್‌ ಮಾಡಲು ಈಗಾಗಲೇ ಮಹಾರಾಷ್ಟ್ರದ
ಕಾರ್ಮಿಕರಿಗೆ ಫ್ಯಾಕ್ಟರಿ ವತಿಯಿಂದ ಸುಮಾರು 345 ತಂಡಗಳಿಗೆ ಮುಂಗಡ ಹಣ ಸಹ ನೀಡಲಾಗಿದೆ. ಅದರಲ್ಲಿ 175 ತಂಡದವರು ಮಾತ್ರ ಬಂದಿದ್ದಾರೆ. ಇದರಿಂದಾಗಿ ತೊಂದರೆಯಾಗುತ್ತಿದೆ. ಸಾಧ್ಯವಾದಷ್ಟು ಬೇಗನೆ ಕ್ರಮ ಕೈಗೊಳ್ಳಲಾಗುವುದು ಎಂದು ಕಾರ್ಖಾನೆ ಅಧಿಕಾರಿ ತಿಳಿಸಿದರು.

ಆದರೆ ರೈತರಲ್ಲಿ ಮೊದಲು ನನ್ನ ಕಬ್ಬು ಕಟಾವ್‌ ಮಾಡಿಕೊಳ್ಳಲಿ ಎಂದು ಅವಸರ ಮಾಡುತ್ತಿದ್ದಾರೆ. ಇದರಿಂದಾಗಿ ಕೆಲ ರೈತರು ತಾವೇ ಸ್ವತಃ ಕಾರ್ಮಿಕರಿಗೆ ಹೆಚ್ಚುವರಿ ಹಣ ನೀಡಲು ಮುಂದಾಗುತ್ತಿದ್ದಾರೆ. ಕಾರಣ ಈ ಖುಷಿ ಪದ್ಧತಿ ಬಿಡಿಸಲು ತುಂಬಾ ಕಷ್ಟವಾಗುತ್ತಿದೆ ಎಂದರು.

Advertisement

ಹಡಗಲಿ ತಾಲೂಕಿನಲ್ಲಿ ಒಟ್ಟು ಸುಮಾರು 10 ಸಾವಿರ ಎಕರೆಯಷ್ಟು ಕಬ್ಬು ಬೆಳೆಯಲಾಗಿದ್ದು, ಇದರಲ್ಲಿ 3700 ಮೈಲಾರ ಶುಗರ್ಸ್ ವ್ಯಾಪ್ತಿಗೆ ಹಾಗೂ 6300 ನಮ್ಮ ವ್ಯಾಪ್ತಿಗೆ ಬರುತ್ತಿದ್ದು, ಪ್ರತಿ ದಿನ 5000 ಟನ್‌ ನಷ್ಟು ಕಬ್ಬು ಅರೆಯವ ಸಾಮರ್ಥ ಫ್ಯಾಕ್ಟರಿಗೆ ಇರುತ್ತದೆ. ಹೀಗೆ ಹಂತ, ಹಂತವಾಗಿ ಒಟ್ಟಾರೆಯಾಗಿ ಜನವರಿ ಅಥವಾ ಫೆಬ್ರವರಿಯಲ್ಲಿ ರೈತರ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ರೈತರು, ನೀವು ಸಾಧ್ಯವಾದಷ್ಟು ಬೇಗನೆ ಸಮಸ್ಯೆ ಬಗೆಹರಿಸದಿದ್ದಲ್ಲಿ ಫ್ಯಾಕ್ಟರಿಗೆ ಹೋಗುವ ಕಬ್ಬಿನ ಲಾರಿ ತಡೆ ಹಿಡಿದು ರಸ್ತೆ ಬಂದ್‌ ಮಾಡಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ರೈತ ಮುಖಂಡರಾದ ಜಮೀರುದ್ದೀನ್‌, ಹೇಮರೆಡ್ಡಿ, ಶರಣ, ಪಿ.ಎಂ.ಕೊಟ್ರಯ್ಯ, ಬಸವರಾಜ್‌ ಐನಳ್ಳಿ, ಮನೋಹರ ಮಂಜುನಾಥ ಗೌಡ್‌, ಮಂಜುನಾಥ, ಹನುಮಂತರೆಡ್ಡಿ, ಟಿ. ಹಾಲೇಶ್‌, ತಿಪ್ಪಾಪುರ ಶೇಖರಪ್ಪ ಮುಂತಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next