ಹೂವಿನಹಡಗಲಿ: ತಾಲೂಕಿನ ನದಿ ತೀರದ ಪ್ರದೇಶಗಳಲ್ಲಿ ನೆರೆ ಹಾವಳಿಯಿಂದಾಗಿ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದ್ದು ಕಳೆದ 3-4 ದಿನಗಳಿಂದ ಸುಸ್ಥಿತಿಗೆ ಬರುತ್ತಿದೆ.
ಈ ಹಿನ್ನೆಲೆಯಲ್ಲಿ ನೆರೆ ನಷ್ಟ ಲಕ್ಷಾಂತರ ರೂಗಳಾಗಿದ್ದು ಜನತೆ ಆಸ್ತಿ ಪಾಸ್ತಿ ನಷ್ಟವಾಗಿರುವುದಲ್ಲದೆ ನೆರೆ ಬಂದ ಗ್ರಾಮಗಳಲ್ಲಿ ಈಗ ಸ್ವಚ್ಛತೆ ಸಮಸ್ಯೆ ಕಾಡುತ್ತಿದೆ. ರಸ್ತೆ ಚರಂಡಿಗಳು, ಕೆಲ ಕಡೆಗಳಲ್ಲಿ ಸಂಪೂರ್ಣ ಹಾಳಾಗಿದ್ದು ಇನ್ನೂ ಕೆಲವೊಂದು ಪ್ರದೇಶದಲ್ಲಿ ಅಲ್ಲಲ್ಲಿ ನಿಂತಿರುವ ನೀರನ್ನು ತೆರವುಗೊಳಿಸಬೇಕಾಗಿದೆ. ಜೊತೆಯಲ್ಲಿ ಯಾವುದೇ ರೀತಿಯಲ್ಲಿ ಸಾಂಕ್ರಾಮಿಕ ರೋಗಗಳು ಬಾರದಂತೆ ತಾಲೂಕು ಆಡಳಿತ ಮುಂಜಾಗ್ರತೆ ವಹಿಸಬೇಕಾಗಿದೆ.
ಕ್ರಮ: ತಾಲೂಕಿನ ಹಿರೇಬನ್ನಿ ಮಟ್ಟಿ, ಚಿಕ್ಕಬನ್ನಿ ಮಟ್ಟಿ, ಮಾಗಳ,ಕುರುವತ್ತಿ, ಮೊದಲಗಟ್ಟಿ ಗ್ರಾಮಗಳಲ್ಲಿ ಈಗಾಗಲೇ ಸ್ಥಳೀಯ ಗ್ರಾಪಂ ವತಿಯಿಂದಾಗಿ ಚರಂಡಿ, ಸ್ವಚ್ಛತೆ, ಫಾಗಿಂಗ್ ಹೊಡೆಯುವ ಕೆಲಸ ಸಾಗಿದೆ.
ನಷ್ಟದ ಅಂದಾಜು: ತಾಲೂಕಿನಲ್ಲಿ ನೆರೆ ಹಾವಳಿಯಿಂದಾಗಿ ಕೃಷಿಗೆ ಸಂಬಂಧಪಟ್ಟಂತೆ ಬೆಳೆ ಹಾನಿ 60.67 ಲಕ್ಷ ರೂಗಳಲ್ಲಿ 1567.55 ಹೆಕ್ಟೇರ್ ಪ್ರದೇಶದಲ್ಲಿ ನಷ್ಟವಾಗಿದ್ದರೆ, ತೋಟಗಾರಿಕೆಗೆ ಸಂಬಂಧಪಟ್ಟಂತೆ 64,100ರೂಗಳ 10 ಮನೆಗಳು, ತೀವ್ರಹಾನಿಯಾಗಿದ್ದು 19,65600 ರೂಗಳ ನಷ್ಟವಾಗಿದೆ. ಒಟ್ಟಾರೆಯಾಗಿ ತಾಲೂಕಿ ನಲ್ಲಿ ಅಂದಾಜು 81,29,700 ರೂ ನಷ್ಟ ಅಂದಾಜಿಸಲಾಗಿದೆ.
ಪರಿಹಾರ: ಈಗಾಗಲೇ ತಾಲೂಕಿನಲ್ಲಿ ನೆರೆ ಸಂತ್ರಸ್ತರಿಗೆ ತಾಲೂಕು ಆಡಳಿತ ಮಾಹಿತಿ ಪ್ರಕಾರವಾಗಿ ರೂ 5200ರಂತೆ ಒಟ್ಟು 342 ಜನರಿಗೆ ಪರಿಹಾರ ಧನ ವಿತರಣೆಯಾಗಿದೆ. ಇನ್ನೂ ಕೆಲ ಕಡೆ ವಿತರಣೆಯಾಗಿಲ್ಲ. ಈ ಕೂಡಲೇ ಪರಿಹಾರ ಧನ ವಿತರಿಸಬೇಕೆಂದು ಸಂತ್ರಸ್ತರು ಒತ್ತಾಯಿಸಿದ್ದಾರೆ.