ಹೂವಿನಹಿಪ್ಪರಗಿ: ಸಾರ್ವಜನಿಕರ ಬದುಕಿಗೆ ಆರೋಗ್ಯದ ಭಾಗ್ಯ ನೀಡಿ, ಸ್ವಚ್ಛತೆ ಕಾಪಾಡುವ ಆಸ್ಪತ್ರೆ ಕಟ್ಟಡವೇ ಅನಾರೋಗ್ಯದ ವಾತವರಣದಲ್ಲಿ ನಿರ್ಮಾಣವಾಗುತ್ತಿರವುದು ಜನ ಸಾಮಾನ್ಯರಲ್ಲಿ ಭಯದ ವಾತಾವರಣ ನಿರ್ಮಿಸಿದೆ.
ಬಸವನಬಾಗೇವಾಡಿ ತಾಲೂಕಿನ ಕುದರಿ ಸಾಲವಾಡಗಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅನುದಾನ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಕಿರಿಯ ಆರೋಗ್ಯ ಮಹಿಳಾ ಉಪ ಕೇಂದ್ರ ಕಟ್ಟಡ ಸ್ಥಳ ನೋಡಿದರೆ ಗಾಬರಿಯಾಗುತ್ತದೆ.
ಹತ್ತು ಸಾವಿರ ಜನರು ವಾಸಿಸುವ ಈ ಗ್ರಾಮದಲ್ಲಿ ಮಹಿಳಾ ಉಪ ಕೇಂದ್ರ ನಿರ್ಮಾಣವಾಗುತ್ತಿರುವುದು ಒಳ್ಳೆಯ ಕಾರ್ಯ. ಆದರೆ ಆ ಕೇಂದ್ರದ ಕಟ್ಟಡ ಮಾತ್ರ ಗ್ರಾಮದ ಚರಂಡಿ ಹಾಗೂ ಮಳೆಗಾಲದ ಮಳೆ ನೀರು ಬಂದು ಸಂಗ್ರಹವಾಗುವ ಸ್ಥಳದಲ್ಲಿ ರೂಪುಗೊಳ್ಳುತ್ತಿದೆ ಎಂಬುದೆ ಆತಂಕದ ವಿಷಯ. ಸರಕಾರ ಜನರ ಆರೋಗ್ಯ ಕಾಪಾಡಲು ಕೋಟಿ ಕೋಟಿ ಹಣ ವ್ಯಯ ಮಾಡುತ್ತಿದೆ. ಆದರೆ ಸಂಬಂಧ ಪಟ್ಟ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಬೆಜವಾಬ್ದಾರಿಯಿಂದ ಕೆಲಸದಿಂದ ಸರಿಯಾಗಿ ಪರಿಪಾಲನೆ ಯಾಗುತ್ತಿಲ್ಲ.
ಇಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡಕ್ಕೆ ಸರಕಾರದಿಂದ 25 ಲಕ್ಷ ರೂ. ಮಂಜೂರಾಗಿದೆ. ಇಷ್ಟೊತ್ತಿಗಾಗಲೆ ಕಟ್ಟಡ ಕಾಮಗಾರಿ ಮುಗಿಯಬೇಕಿತ್ತು. ಸ್ವಲ್ಪ ವಿಳಂಬವಾಗಿದೆ. ಜೊತೆಯಲ್ಲಿ ಈ ಬೇಸಿಗೆ ಬಿಸಿಲಿಗೆ ಕಟ್ಟಡದ ಕಾಮಗಾರಿ ನಡೆಯುತ್ತಿರುವ ಕಾರಣ ಕಾರ್ಮಿಕರು ನೀರು ಸರಿಯಾಗಿ ಹೊಡೆಯುತ್ತಿಲ್ಲ. ಸಿಮೆಂಟ್ ಕಾಮಗಾರಿಗೆ ನೀರಿನ ಬೇಡಿಕೆ ಹೆಚ್ಚು ಇರುತ್ತದೆ.
ಆದರೆ ಇಲ್ಲಿ ಕಟ್ಟಡಕ್ಕೆ ಕ್ಯೂರಿಂಗ್ ಸಮರ್ಪಕವಾಗಿಲ್ಲ. ಕಟ್ಟಡ ಕಾಮಗಾರಿ ಕಳಪೆಯಾಗಿದೆ. ಸಾರ್ವಜನಿಕ ಶೌಚಾಲಯ ಪಕ್ಕದಲ್ಲಿ ಆಸ್ಪತ್ರೆ ನಿರ್ಮಾಣವಾಗುತ್ತಿದೆ ಎಂಬುದು ಸಾರ್ವಜನಿಕರ ವಾದ. ಸರಕಾರ ಗ್ರಾಮೀಣ ಮಹಿಳೆಯರ ಆರೋಗ್ಯ ಗುಣಮಟ್ಟದ ಕಡೆಗೆ ಕೊಂಡೊಯ್ಯುವ ನಿಟ್ಟಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಹೊಂದಿದ ಪ್ರತಿ ಗ್ರಾಮಕ್ಕೊಂದು ಕಿರಿಯ ಮಹಿಳಾ ಆರೋಗ್ಯ ಉಪ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಇಲ್ಲಿ ಮಹಿಳೆಯರಿಗೆ ಸಂಬಂಧಿಸಿದ ಆಪ್ತ ಸಮಾಲೋಚನೆ ಸೇರಿದಂತೆ ವಿವಿಧ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಮಹಿಳಾ ವೈದ್ಯಾಧಿಕಾರಿಗಳು ಕಾರ್ಯ ನಿರ್ವಹಿಸುತ್ತಾರೆ.
ಒಟ್ಟನಲ್ಲಿ ಸರಕಾರ ಲಕ್ಷಾಂತರ ರೂ. ಖರ್ಚು ಮಾಡಿ ಕಟ್ಟಡಗಳನ್ನು ನಿರ್ಮಾಣ ಮಾಡುತ್ತಿದೆ. ಸಂಬಂಧಿಸಿದ ಅಧಿಕಾರಿಗಳ ಕುರುಡತನಕ್ಕೆ ನಿರ್ಮಿಸಿದ ಕಟ್ಟಡದ ಆಯಷ್ಯು ಕಡಿಮೆ ಅವಧಿಗೆ ಸೀಮಿತವಾಗಿದೆ ಎಂಬುದು ಇಲ್ಲಿ ಎದ್ದು ಕಾಣುತ್ತಿದೆ.