Advertisement
ಮರುದಿನ ಬೆಳ್ಳಂಬೆಳಗ್ಗೆ ಎಲ್ಲರೂ ಜತೆಯಾಗಿ ಬಸ್ ಹತ್ತಿದೆವು. ಹುತ್ರಿ ಊರೇ ಬೆಟ್ಟದ ಮೇಲಿದೆ. ಬಸ್ಸು ತಿರುವು ಮುರುವಾಗಿ ಸಾಗುತ್ತಿರುವಾಗ ಘಾಟಿ ರಸ್ತೆಯಲ್ಲಿ ಇರುವಂತೆ ಭಾಸವಾಗಿ ಹೋ ಎಂದು ಒಟ್ಟಾಗಿ ಕೂಗಿದೆವು.
Related Articles
Advertisement
ನಮ್ಮ ತಂಡ ಹುತ್ರಿದುರ್ಗದ ದ್ವಾರದಲ್ಲಿ ಇಳಿಯುತ್ತಿದ್ದಂತೆ- “ವಿಶ್ವ ಪ್ರವಾಸೋದ್ಯಮ ದಿನಾಚರಣೆ 2023′ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಪ್ರವಾಸೋದ್ಯಮ ಇಲಾಖೆ, ತುಮಕೂರು ಎಂಬ ಫಲಕ ನಮ್ಮನ್ನು ಎದುರುಗೊಂಡಿತು. ಪ್ರವಾಸೋದ್ಯಮ ಇಲಾಖೆಯವರು ನೀಡಿದ ಗಿಳಿ ಹಸಿರು ಬಣ್ಣದ ಅಂಗಿಗಳನ್ನು ತೊಟ್ಟು ಅಲ್ಲಿಯೇ ಫಲಾಹಾರ ಸೇವಿಸಿದೆವು. ದ್ವಾರ ಸುತ್ತುವರೆಯುತ್ತಾ ಹತ್ತಬೇಕಾದ ಬೆಟ್ಟವನ್ನು ಅಂದಾಜು ಮಾಡಿಕೊಳ್ಳುತ್ತಿರುವಾಗ, ಕುಣಿಗಲ್ ಕ್ಷೇತ್ರದ ಶಾಸಕರಾದ ರಂಗನಾಥ್ ಅವರು ಅಗಮಿಸಿ, ನಮ್ಮನ್ನು ಹುರಿದುಂಬಿಸುತ್ತಾ ಕೋಟೆ ಹತ್ತಲು ಶುರು ಮಾಡಿದರು. ವಿಜ್ಞಾನ ಮತ್ತು ವೈದ್ಯಕೀಯ ವಿದ್ಯಾರ್ಥಿಯಾದ ಅವರು ಜೀವ ವೈವಿಧ್ಯತೆ ಮತ್ತು ಆರೋಗ್ಯದ ಬಗ್ಗೆ, ಚಾರಣದ ಮಹತ್ವದ ಬಗ್ಗೆ ತಿಳಿಸುತ್ತಾ ಕಾರ್ಯಕ್ರಮಕ್ಕೆ ಸಾಥ್ ಕೊಟ್ಟರು.
ಕರಡಿ, ಚಿರತೆಯ ತಾಣ…
ಪ್ರವಾಸೋದ್ಯಮ ಇಲಾಖೆಯ ಸಿಬ್ಬಂದಿ ಧೈರ್ಯ ತುಂಬುತ್ತಾ ಬೆಂಗಾವಲಾಗಿ ನಮ್ಮ ಜೊತೆ ನಡೆದರು. ಈ ವೇಳೆಗೆ ಮತ್ತೂಂದು ಕಾಲೇಜಿನ ವಿದ್ಯಾರ್ಥಿಗಳ ತಂಡವೂ ಜೊತೆಯಾಯಿತು. ಮಹಾತ್ಮ ಗಾಂಧಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎನ್.ಎಸ್.ಎಸ್ ಘಟಕದ ವಿದ್ಯಾರ್ಥಿಗಳು ಚಾರಣದುದ್ದಕ್ಕೂ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಿದರು. ಮೊದಲ ಹೆಬ್ಟಾಗಿಲು ದಾಟಿ ಮೇಲೆ ಹತ್ತುತ್ತಲೇ ಬಂಡೆಯ ಸುತ್ತೆಲ್ಲ ನೀರು ಒಸರಿ ಸಣ್ಣದಾಗಿ ಹರಿಯುತ್ತಿತ್ತು. ಒತ್ತೂತ್ತಾದ ದಪ್ಪನೆಯ ಬಂಡೆಗಳು, ಗಿಡ ಮರಗಳು, ಕುರುಚಲು ಸಸ್ಯಗಳು, ಆಳೆತ್ತೆರದ ಜೊಂಡೆ ಹುಲ್ಲನ್ನೆ ಕಣ್ಣರಳಿಸಿ ನೋಡುತ್ತಿದ್ದ ನಮಗೆ, ಇವೆಲ್ಲ ಕರಡಿ, ಚಿರತೆಗಳು ವಾಸ ಮಾಡುವ ಜಾಗ ಎಂದು ಸ್ಥಳೀಯರು ಹೇಳುತ್ತಿದ್ದುದು ನಿಜ ಎನಿಸುವಂತಿತ್ತು.
ಸೆಲ್ಫಿ, ಹಾಡು-ಹರಟೆ!
ಬಂಡೆಗಳನ್ನೇ ಕೊರೆದು ಮಾಡಿದ ಚಿಕ್ಕ ಮೆಟ್ಟಿಲು, ಕೈ ಹಿಡಿಗಳು, ಮಧ್ಯೆ ಕಿರುದಾರಿಗಳು ಎತ್ತರಕ್ಕೇರಿ ನೋಡಿದರೆ ಚಂದದ ನೋಟ. ದೂರ ದೂರಗಳಲ್ಲಿ ಕಾಣುವ ಕೆರೆಗಳು, ಹೊಲ, ತೋಟ, ಹಳ್ಳಿ, ಮೋಡಗಳಿಗೆ ಹತ್ತಿರವಾಗುತ್ತಿರುವ ನಾವುಗಳು. ಗಾಳಿ ತಣ್ಣಗೆ ತೀಡಿ ಹೋಗುತ್ತಿದ್ದರೆ ಹಕ್ಕಿಯಾಗಿ ಹಾರಿ
ಹೋಗುತ್ತಿದ್ದೇವೇನೋ ಎಂಬಂಥ ಸುಂದರ ಭ್ರಮೆ. ದಣಿವೇ ಇಲ್ಲದವರಂತೆ ಹತ್ತುತ್ತಿದ್ದ ವಿದ್ಯಾರ್ಥಿನಿ ಭಾಗ್ಯಳ ಗುಂಪು ಒಂದೆಡೆಯಾದರೆ, ಏದುಸಿರು ಬಿಡುತ್ತಾ ಅಲ್ಲಲ್ಲಿ ಕುಳಿತುಕೊಳ್ಳುತ್ತಿದ್ದ ಮತ್ತೂಬ್ಬ ವಿದ್ಯಾರ್ಥಿನಿ ಚಂದನಾಳ ಗುಂಪು ಇನ್ನೊಂದೆಡೆ. ಕೆಲವರು ಹಾಡು ಹರಟೆಯಲ್ಲಿ ತಲ್ಲೀನರಾಗಿ ಆಗಾಗ ಫೋಟೋ ತೆಗೆದುಕೊಳ್ಳುತ್ತಾ ನೆನಪುಗಳನ್ನು ಸಾಕ್ಷೀಕರಿಸಿಕೊಳ್ಳುತ್ತಿದ್ದರು.
ಪೂರ್ವಜರ ಜೊತೆಗೆ ಫೋಟೋ!
ಒಂದರ ನಂತರ ಒಂದರಂತೆ ಸಿಗುವ ಕೋಟೆ ಬಾಗಿಲುಗಳು ಮದ್ದಿನ ಮನೆ, ನಿಶಾನೆ ಗುಂಡು, ಕಲ್ಲಿನಲ್ಲಿ ಕೊರೆದಿರುವ ಎಣ್ಣೆ ಕುಳಿ, ಭಾರೀ ಗಾತ್ರದ ರಾಗಿ ಕಲ್ಲು, ನೋಡು ನೋಡುತ್ತಾ ಹೋದಂತೆ ನಮ್ಮೂರಿನ ಬಗ್ಗೆ ಹೆಮ್ಮೆಯಾಯಿತು. ಹುತ್ರಿದುರ್ಗಕ್ಕೆ ಸಮೀಪದ ಎಲಿಯೂರಿನವರಾದ ಭಗತ್, ದೀಪಕ್, ದುರ್ಗವನ್ನು ಬಹಳ ಸಲ ಹತ್ತಿ ಇಳಿದವರಾದ್ದರಿಂದ ಸ್ಥಳೀಯ ಕತೆಗಳನ್ನು ಹೇಳುತ್ತಾ ಇನ್ನಷ್ಟು ಕೌತುಕ ಮೂಡಿಸುತ್ತಿದ್ದರು. ಬೆಟ್ಟದ ತುದಿ ತಲುಪಿದ ಮೇಲೆ ಶಿವನ ಪುಟ್ಟ ದೇಗುಲ, ಅದಕ್ಕೆ ಹೊಂದಿಕೊಂಡಂತೆ ಇರುವ ನೀರಿನ ದೊಣೆ. ಹತ್ತಿದ ಆಯಾಸವನ್ನೆಲ್ಲ ಕರಗಿಸಿ ಹಸಿರ ಸಿರಿ, ಊರಿನ ಸೊಬಗು ಮತ್ತು ಕೋಟೆ ಕೊತ್ತಲಗಳ ಹಿರಿಮೆಯನ್ನು ಮನಗಾಣಿಸುತ್ತದೆ. ನಮ್ಮ ಪೋಟೋ ಹುಚ್ಚಿಗೆ ಅಲ್ಲಿದ್ದ ನಮ್ಮ “ಪೂರ್ವಜರೂ’ ಜತೆ ಸೇರಿದರು. ಕೋತಿಗಳೊಂದಿಗೆ ನಾವು ಫೋಟೋ ತೆಗೆಸಿಕೊಂಡೆವು. ಅಷ್ಟರಲ್ಲಿ ವಿದ್ಯಾರ್ಥಿ ವೆಂಕಟೇಶನು ಆನೆಗುಡ್ಡ, ಅಕ್ಕ ತಂಗಿ ಗುಡ್ಡಗಳನ್ನು ತೋರಿಸುವುದಾಗಿ ಕರೆದೊಯ್ದನು. ಒಂದು ಕಲ್ಲಿನ ಮೇಲೆ ಇನ್ನೊಂದು ಅದರ ಮೇಲೆ ಮತ್ತೂಂದು… ಹೀಗೆ ಕಿರಿದಾಗಿರುವ ಇಕ್ಕಟ್ಟಿನ ಸಂದಿಯಲ್ಲಿ ಕತ್ತಲೆಯಲ್ಲಿ ನುಸುಳಿ ಒಬ್ಬೊಬ್ಬರೇ ಹತ್ತಬಹುದಾದ ಜಾಗವೊಂದು ಚಾರಣಿಗರಿಗೆ ಹೇಳಿ ಮಾಡಿಸಿದಂತಿದೆ. ಹುಡುಗರೇ ಮಾಡುತ್ತಿದ್ದ ಸಾಹಸಕ್ಕೆ ಉಮಾ ಮತ್ತು ಗೆಳತಿಯರು ಸೆಡ್ಡು ಹೊಡೆದು, ಸೈ ಎನಿಸಿಕೊಂಡರು.
ಕೆಂಪೇಗೌಡರು ತಂಗುತ್ತಿದ್ದ ಜಾಗ, ಅಲ್ಲಿ ಶಿವಗಂಗೆಯ ಹೊಳಕಲ್ಲು ತೀರ್ಥಕ್ಕೆ ಕೊಂಡಿಯಾಗಿರುವ ಕೊಳ ಇನ್ನೂ ನೋಡಲಿರುವ ಸ್ಥಳಗಳು, ಕೇಳಬೇಕಿರುವ ಕಥೆಗಳು ಬಾಕಿ ಇವೆ ಎನ್ನುವಾಗಲೆ ಉಪನ್ಯಾಸಕರು ಹೊರಡುವಂತೆ ಸೂಚಿಸಿದರು. ಇಳಿಯುವಾಗ ಪಾತರಗಿತ್ತಿಗಳ ಬಣ್ಣ, ಕಾಡುಹೂವಿನ ಅಂದ ಸವಿಯುತ್ತಾ ಇಳಿದದ್ದು ಗೊತ್ತಾಗಲೇ ಇಲ್ಲ. ಹೀಗೆ ಇನ್ನಷ್ಟು ಪ್ರವಾಸಿ ಸ್ಥಳಗಳನ್ನು ಮತ್ತೆ ನೋಡಬೇಕೆನ್ನುವ ಹಂಬಲದೊಂದಿಗೆ ಹುತ್ರಿದುರ್ಗದ ಚಾರಣವನ್ನು ಕೊನೆಗೊಳಿಸಿದೆವು.
ಏಳು ಸುತ್ತಿನ ಕೋಟೆ…
ಹುತ್ರಿ ಗ್ರಾಮದ ಸುತ್ತ ದೊಡ್ಡ ಬೆಟ್ಟ, ಬಸವನ ದುರ್ಗದ ಬೆಟ್ಟ, ತಿರುಮಲ ಬೆಟ್ಟಗಳನ್ನು ಸೇರಿಸಿಕೊಂಡು ಕ್ರಿ. ಶ. 1534 ರಲ್ಲಿ ಏಳು ಸುತ್ತಿನ ಕೋಟೆ ಕಟ್ಟಿದ್ದರಿಂದ ಹುತ್ರಿ ದುರ್ಗ ಐತಿಹಾಸಿಕ ಪ್ರಾಮುಖ್ಯತೆ ಗಳಿಸಿದೆ. ಕಾಮಗಿರಿ, ದೇವಗಿರಿ, ಶಂಕರ ಕುಂಬಿ ಎಂಬ ವಿವಿಧ ಹೆಸರುಗಳೂ ಹುತ್ರಿದುರ್ಗಕ್ಕಿವೆ. ನಾಣ್ಯಗಳನ್ನು ಟಂಕಿಸುವ ಟಂಕಸಾಲೆ ಇಲ್ಲಿತ್ತಂತೆ. 1791-92 ರಲ್ಲಿ ನಡೆದ ಮೂರನೇ ಆಂಗ್ಲೋ- ಮೈಸೂರು ಯುದ್ಧದಲ್ಲಿ ಹುತ್ರಿದುರ್ಗ ಶಸ್ತ್ರಾಸ್ತ್ರ ಸಂಗ್ರಹಗಳ ನೆಲೆಯಾಗಿತ್ತು ಎಂಬುದನ್ನು ಕೇಳಿದ ಮೇಲಂತೂ ಆಂಗ್ಲೋ- ಮೈಸೂರು ಯುದ್ಧಗಳ ಕಥೆಗಳು ಒಂದೊಂದಾಗಿ ಮನಸ್ಸಿಗೆ ಬಂದವು.
ನಿರೂಪಣೆ:
ಬಿ. ಎಸ್. ದಾಕ್ಷಾಯಿಣಿ,
ಉಪನ್ಯಾಸಕರು
(ಮಾಹಿತಿ: ಸಹನಾ, ಅನಿತಾ, ಕುಣಿಗಲ್