ನಮ್ಮೊಳಗಿನ ಪ್ರತಿಭೆ ಅವಕಾಶಗಳನ್ನು ಹುಡುಕುತ್ತಿರುತ್ತದೆ. ಆ ಅವಕಾಶಗಳನ್ನು ಹುಡುಕುವ ದಾರಿಯಲ್ಲಿ ಎಷ್ಟೋ ಬಾರಿ ಸೋತು ಸುಮ್ಮನಾಗುತ್ತೇವೆ. ಆದರೆ ಕೆಲವರು ಇರುತ್ತಾರೆ ತಮ್ಮೊಳಗಿನ ಪ್ರತಿಭೆಯನ್ನು ಹೊರ ತರುವುದು ಆಕಸ್ಮಿಕವಾಗಿ ಯಾವುದೋ ಒಂದು ಹಂತದಲ್ಲಿ. ಮಹಾರಾಷ್ಟ್ರದಲ್ಲಿ ಹುಟ್ಟಿ ಅಲ್ಲೇ ಶಾಲಾ – ಕಾಲೇಜು ಹಂತದ ಶಿಕ್ಷಣವನ್ನು ಮುಗಿಸಿದ ಸೃಷ್ಟಿ ತಾವುಡೆ. ಎಲ್ಲರಂತೆ ಕಾಲೇಜು ಮುಗಿದ ಬಳಿಕ ಮುಂದೇನು ಎನ್ನುವ ಪ್ರಶ್ನೆಯೊಂದಿಗೆ ಮನೆಯಲ್ಲಿ ಕುಳಿತಿದ್ದರು. ಕೆಲಸಕ್ಕೆ ಸೇರಿಕೊಳ್ಳುತ್ತೇನೆ ಎನ್ನುವುದು ಸೃಷ್ಟಿ ಅವರ ಮೊದಲ ಯೋಚನೆ ಆಗಿತ್ತು.
ಮಧ್ಯಮ ವರ್ಗದ ಕುಟುಂಬದಲ್ಲಿ ಅಪ್ಪ – ಅಮ್ಮನ ಸಹಕಾರ ಪ್ರೋತ್ಸಾಹ ಸೃಷ್ಟಿ ಅವರಿಗೆ ಸದಾ ಇತ್ತು. ಅದು 2020 ಆಗಷ್ಟೇ ಕೋವಿಡ್ ಬಂದು ಸಾವಿರಾರು ಮಂದಿಯ ಮಾನಸಿಕ ನೆಮ್ಮದಿಯನ್ನು ಕಸಿದುಕೊಂಡಿತ್ತು. ದೇಶಾದ್ಯಂತ ಲಾಕ್ ಡೌನ್ ಶುರುವಾಗಿತ್ತು. ಕೆಲಸಕ್ಕೆ ಸೇರಬೇಕೆಂದುಕೊಂಡಿದ್ದ ಸೃಷ್ಟಿ ಅತ್ತ ಕೆಲಸವೂ ಇಲ್ಲದೆ ಇತ್ತ ಮನೆಯಲ್ಲೇ ಇದ್ದು ಮಾನಸಿಕವಾಗಿ ಕುಗ್ಗಿ ಹೋಗಿ ಖಿನ್ನತೆಗೆ ಒಳಗಾಗುತ್ತಾರೆ.
ಪೆನ್, ಪೇಪರ್ ಹಿಡಿದು ಶುರುವಾಯಿತು ಅಕ್ಷರಯಾನ:
ಲಾಕ್ ಡೌನ್ ಕೆಲಸಕ್ಕೆ ಹೋಗುವ ಕನಸು ನುಚ್ಚು ನೂರಾದ ಬಳಿಕ ಸೃಷ್ಟಿ ಅದೊಂದು ದಿನ ಪೇಪರ್, ಪೆನ್ ಹಿಡಿದು ಕವಿತೆಯೊಂದನ್ನು ಬರೆಯುತ್ತಾರೆ. ದಿನ ಕಳೆದಂತೆ ಷಹರಿ, ಕವನ, ಕವಿತೆಯನ್ನು ಬರೆದು ಸೃಷ್ಟಿ ತನ್ನ ಸ್ನೇಹಿತರು, ಕುಟುಂಬದ ಸದಸ್ಯರಿಗೆ ಕಳುಹಿಸುತ್ತಾರೆ. ತಾನು ಬರೆಯಬಲ್ಲೆ ಎನ್ನುವುದು ಸೃಷ್ಟಿ ಅವರಿಗೆ ತಿಳಿಯುತ್ತದೆ.
ಬರೆದ ಕವಿತೆಗಳಿಗೆ ಬಂದ ಪ್ರತಿಕ್ರಿಯೆಗಳೇ ಸೃಷ್ಟಿ ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಕವಿತೆ, ಷಹರಿ ಓದುವ ಕಾರ್ಯಕ್ರಮದಲ್ಲಿ (ಸ್ಪಾಟ್ ಲೈಟ್ : ಕವಿತೆ ಓದುವ ಸ್ಪರ್ಧೆ) ಮೈಕ್ ಹಿಡಿದು ಮತ್ತಷ್ಟು ಆತ್ಮವಿಶ್ವಾಸದೊಂದಿಗೆ ಮುಖ ಪರಿಚಯವನ್ನು ಸೃಷ್ಟಿ ಅವರು ಪಡೆದುಕೊಳ್ಳುತ್ತಾರೆ.
ರ‍್ಯಾಪಿಂಗ್ ನಿಂದ ಅಲೆಯನ್ನು ಸೃಷ್ಟಿಸಿದ ‘ಸೃಷ್ಟಿ’ :
ಅದೊಂದು ದಿನ ಡೇಟಿಂಗ್ ಆ್ಯಪ್ ವೊಂದರಲ್ಲಿ ಪರಿಚಿತರಾದ ವ್ಯಕ್ತಿ ಸೃಷ್ಟಿ ಅವರಿಗೆ ನಿಮ್ಮ ಸಾಹಿತ್ಯ ಚೆನ್ನಾಗಿದೆ ನೀವ್ಯಾಕೆ ರ‍್ಯಾಪಿಂಗ್ ಮಾಡಬಾರದು ಎನ್ನುತ್ತಾರೆ. ಆತನ ಮಾತನ್ನು ಕೇಳಿದ ಬಳಿಕ ಸೃಷ್ಟಿ ಅದೊಂದು ದಿನ ಗಿಟಾರ್ ಹಿಡಿದುಕೊಂಡು ಮನೆಯಲ್ಲೇ ‘ಸುನ್ ಜಬ್ ಜಬ್’ ಹಾಡನ್ನು ಹಾಡಿ ಇನ್ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡುತ್ತಾರೆ. ಇದು ಸ್ವಲ್ಪ ಮಟ್ಟಿಗೆ ವೈರಲ್ ಆಗುತ್ತದೆ.
ಆ ಬಳಿಕ ಮತ್ತಷ್ಟು ರ‍್ಯಾಪ್ ಸಾಹಿತ್ಯವನ್ನು ಬರೆದು ತಾವೇ ಹಾಡುತ್ತಾರೆ. ತಮ್ಮದೇ ಯೂಟ್ಯೂಬ್ ಚಾನೆಲ್ ನಲ್ಲಿ ಅದನ್ನು ಅಪ್ಲೋಡ್ ಮಾಡುತ್ತಾರೆ. ‘ಆಫೀಸ್’ ಎನ್ನುವ ಹಾಡೊಂದು ಅವರು ಈ ಹಿಂದೆ ಬರೆದ ಹಾಡುಗಳಿಗಿಂತ ಜನಪ್ರಿಯವಾಗುತ್ತದೆ. 3 ಲಕ್ಷಕ್ಕೂ ಅಧಿಕ ಮಂದಿ ಸೃಷ್ಟಿಯ ಈ ಹಾಡನ್ನು ಕೇಳಿ, ಅವರನ್ನು ಫಾಲೋ ಮಾಡುತ್ತಾರೆ.
ಎಂಟಿವಿಯಲ್ಲಿ ಪ್ರಸಾರವಾಗುವ ಜನಪ್ರಿಯ ಹಿಪ್ ಹಾಪ್ ರ‍್ಯಾಪ್ ಶೋ ಹಸ್ಲ್ ನಲ್ಲಿ ಸ್ಪರ್ಧಿಯಾಗಿ ಭಾಗವಹಿಸುತ್ತಾರೆ. ದೇಶದಲ್ಲಿರುವ ಯುವ ರ‍್ಯಾಪರ್ ಗಳಿಗೆ ವೇದಿಕೆಯಾಗಿರುವ ಶೋನಲ್ಲಿ ಸೃಷ್ಟಿ ಮೊದಲ ಹೆಜ್ಜೆಯನ್ನಿಡುತ್ತಾರೆ. ಖ್ಯಾತ ರ‍್ಯಾಪರ್ ಗಾಯಕ ಬಾದ್ ಷಾ, ಡೀನೋ ಜೇಮ್ಸ್, ಡಿಎಂಸಿನಂತಹ ಖ್ಯಾತ ರ‍್ಯಾಪಿಂಗ್ ಗಳು ತೀರ್ಪುಗಾರರಾಗಿ ಹಸ್ಲ್ (Hustle 2.0) ಶೋ ನಡೆಸಿಕೊಡುತ್ತಾರೆ.
ದೊಡ್ಡ ವೇದಿಕೆ ಮೇಲೆ ಬಂದ ಸೃಷ್ಟಿ ಮುಂಬಯಿ ನಗರದ ಬಗ್ಗೆ ಹಾಡಿದ ರ‍್ಯಾಪ್ ಸೀಟಿನ ಮೇಲೆ ಕೂತಿದ್ದ ತೀರ್ಪುಗಾರರನ್ನು ಸೆಳೆಯುತ್ತದೆ. ಆ ರ‍್ಯಾಪಿಂಗ್ ನ ಒಂದೊಂದು ಪದಗಳಲ್ಲಿ ಮುಂಬಯಿ ನಗರದ ಆಗು – ಹೋಗು, ಆಚಾರ – ಆಹಾರ ,ಜೀವನ ಶೈಲಿಯ ಪರಿಚಯವಿರುತ್ತದೆ.
ಅಡಿಷನ್ ನಿಂದ ಆಯ್ಕೆ ಆದ ಬಳಿಕ ಸೃಷ್ಟಿ ಹಿಂದೆ ತಿರುಗಿ ನೋಡಲೇ ಇಲ್ಲ. ಅವರ ಒಂದೊಂದು ಹಾಡು ವೈರಲ್ ಆಗ ತೊಡಗಿತು. ಪ್ರತಿ ವಾರವೂ ಅವರ ಹಾಡುಗಳನ್ನೇ ಕೇಳುವ ದೊಡ್ಡ ವರ್ಗವೇ ಅವರ ಫಾಲೋವರ್ಸ್ ಆಗುತ್ತಾರೆ.
ಸೃಷ್ಟಿ ಅವರ ದೊಡ್ಡ ಶಕ್ತಿ ಎಂದರೆ ಅವರೊಬ್ಬ ಬರಹಗಾರ್ತಿ ಹಾಗೂ ಅವರ ರ‍್ಯಾಪ್ ಗೆ ಅವರ ಸಾಹಿತ್ಯವೇ ಬಲ. ‘ಚಿಲ್ ಕಿಂಡಾ ಗಯ್ ( Chill Kinda Guy) “ಮೇ ನಹಿ ತೋ ಕೌನ್ ಬೇʼ ( Main nahi Toh Koun) ಎನ್ನುವ ರ‍್ಯಾಪ್ ಹಾಡಿನಲ್ಲಿ ಜಡ್ಜ್ ಗಳನ್ನು ಮೋಡಿ ಮಾಡುತ್ತಾರೆ. ಈ ಹಾಡು ಬರೋಬ್ಬರಿ 65 ಮಿಲಿಯನ್ ಗೂ ಹೆಚ್ಚಿನ ವೀಕ್ಷಣೆ ಆಗಿದೆ. ‘ಛೋಟಾ ಡಾನ್’ ರ‍್ಯಾಪ್ ನಲ್ಲಿ ಹಾಸ್ಯವಾಗಿಯೇ ಹಣ ಹಾಗೂ ಕೆಲಸದ ಬಗ್ಗೆ ತೀಕ್ಷ್ಣವಾಗಿ ಹೇಳುತ್ತಾರೆ.
‘ಬಚ್ಪನ್’ ರ‍್ಯಾಪ್ ನಲ್ಲಿ ಬಾಲ್ಯದಲ್ಲಿನ ತಮ್ಮ ದಿನಚರಿ, ಕುಟುಂಬ, ನೋವು, ಯಾತನೆಯನ್ನು ಪದಗಳಲ್ಲಿ ಹೇಳುತ್ತಾರೆ. ಮಾತಿನ ಹಾಗೆಯೇ ಅವರ ಹಾಡು ಸಾಗುತ್ತದೆ. ಸಂಭಾಷಣೆಯ ರೀತಿಯಲ್ಲಿ ಸಾಮಾನ್ಯ ವಾಕ್ಯಗಳನ್ನು ಸಾಹಿತ್ಯವಾಗಿಸುವ ಶಕ್ತಿ ಅವರ ಬರವಣಿಗೆಯಲ್ಲಿದೆ.
ಹಸ್ಲ್ ಶೋನಲ್ಲಿ ಟಾಪ್ ರ‍್ಯಾಪರ್ ಗಳ ಸಾಲಿನಲ್ಲಿ ಸ್ಪರ್ಧಿಸಿ ಎಲ್ಲರ ಗಮನ ಸೆಳೆಯುವ ಸೃಷ್ಟಿಗೆ ಯಾವತ್ತೂ ತಾನೊಬ್ಬ ಹುಡುಗಿ ರ‍್ಯಾಪರ್ (Female Rapper) ಎನ್ನುವುದನ್ನು ಕರೆಸಿಕೊಳ್ಳಲು ಇಷ್ಟವಿಲ್ಲವಂತೆ ಕಾರಣ. ಹುಡುಗಿಯರು ಕೂಡ ಮೇನ್ ಸ್ಟ್ರೀಮ್ ಹುಡುಗರ ಹಾಗೆಯೇ ರ‍್ಯಾಪಿಂಗ್ ಎನ್ನುವುದು ಅವರ ಅನಿಸಿಕೆ. ಹಸ್ಲ್ ಶೋನಲ್ಲಿ ತಾನೂ ಇಷ್ಟುದಿನ ಇರುತ್ತೇನೆ. ನನ್ನ ಹಾಡುಗಳು ಇಷ್ಟೊಂದು ವೈರಲ್ ಆಗುತ್ತದೆ ಎನ್ನುವುದನ್ನು ನಾನು ಯಾವತ್ತೂ ನಿರೀಕ್ಷಿಸಿರಲಿಲ್ಲ ಎನ್ನುತ್ತಾರೆ ಸೃಷ್ಟಿ.
ನಾನು ರ‍್ಯಾಪರ್ ಆಗದಿದ್ರೆ ಬಹುಶಃ ನಾನು ಬರೆಯುತ್ತಿದ್ದೆ, ಆದರೆ ನಾ ಸಿನಿಮಾಕ್ಕೆ ಹಾಡು ಬರೆಯುತ್ತಾ ಹೋದಂತೆ ಒಂದಷ್ಟು ಹಣವನ್ನು ಗಳಿಸುತ್ತಿದ್ದೆ ಎಂದು ಸೃಷ್ಟಿ ಅವರು ಹೇಳುತ್ತಾರೆ. ಅಪ್ಪ ಅಮ್ಮ ನನ್ನ ಪಯಣಕ್ಕೆ ಪ್ರೋತ್ಸಾಹ ನೀಡುತ್ತಾರೆ. ನನ್ನ ರ‍್ಯಾಪ್ ಗಳ ಬಗ್ಗೆ ಅಪ್ಪ – ಅಮ್ಮನಿಗೆ ತುಂಬಾ ಜನ ಮೆಸೇಜ್ ಮಾಡುತ್ತಾರೆ. ಅವರು ನನ್ನ ಬಗ್ಗೆ ಹೆಮ್ಮೆ ಪಡುತ್ತಾರೆ ಎನ್ನುತ್ತಾರೆ ಸೃಷ್ಟಿ. 23 ವರ್ಷದ ಸೃಷ್ಟಿಯ ಹಸ್ಲ್ ಶೋ ಬಳಿಕ ಅವರನ್ನು ರ‍್ಯಾಪಿಂಗ್ ಕ್ವೀನ್, ಎಕ್ಸ್ ಪ್ರೆಷನ್ ಕ್ವೀನ್ ‘ಛೋಟಾ ಡಾನ್’ ಮುಂತಾದ ಬಿರುದನ್ನು ಜನ ನೀಡಿದ್ದಾರೆ.
– ಸುಹಾನ್ ಶೇಕ್