Advertisement

ರಸ್ತೆಯಲ್ಲಿ ಹುಡುಗಿ ಡ್ರಾಪ್‌ ಕೇಳಿದರೆ ಹುಷಾರ್‌…

12:23 PM Jun 16, 2017 | |

ಬೆಂಗಳೂರು: ವಾಹನ ಸವಾರರೇ ಎಚ್ಚರ! ರಾತ್ರಿ ಸಮಯದಲ್ಲಿ ರಸ್ತೆ ಬದಿಯಲ್ಲಿ ಯುವತಿಯರು ಕೈ ಅಡ್ಡಹಾಕಿ ಮೈ ಮಾಟ ಪ್ರದರ್ಶಿಸಿದರೇ ಮರುಳಾಗದಿರೀ? ಏಕೆಂದರೆ ನಿಮ್ಮ ಬಳಿಯಿರುವ ಹಣ, ಚಿನ್ನಾಭರಣ ಸುಲಿಗೆ ಮಾಡಲು ಯುವತಿಯ ಹಿಂದೆಯೇ ದರೋಡೆಕೋರರ ಗ್ಯಾಂಗ್‌ ಕೂಡ ಹೊಂಚು ಹಾಕುತ್ತಿರುತ್ತದೆ! ಹೌದು, ಯುವತಿಯೊಬ್ಬರನ್ನು ಮುಂದಿಟ್ಟುಕೊಂಡು ವಾಹನಸವಾರರನ್ನು ಸುಲಿಗೆ ಮಾಡುತ್ತಿದ್ದ 12 ಮಂದಿಯ ತಂಡವೊಂದನ್ನು ಎಲೆಕ್ಟ್ರಾನಿಕ್‌ ಸಿಟಿಯ ಪೊಲೀಸರು ಬಂಧಿಸಿದ್ದಾರೆ.

Advertisement

ಬೇಗೂರಿನ ಮೋನಿಷಾ, ಸಾವನ್‌ ಅಲಿಯಾಸ್‌ ಬಬ್ಲೂ, ಮುತ್ತು, ಪುನೀತ್‌, ತುಳಸಿರಾಂ, ಅರುಣ್‌ ಏಸುರಾಜ, ಸ್ಟೀಫ‌ನ್‌, ವಿಶ್‌, ಅಮರ್‌, ಶಾಂತಕುಮಾರ್‌, ದೀಪಕ್‌ ಜಾರ್ಜ್‌, ತಮಿಳುನಾಡಿನ ಕೇಶವಮೂರ್ತಿ ಬಂಧಿತ ಆರೋಪಿಗಳು. ಆರೋಪಿಗಳಿಂದ 15 ಲಕ್ಷ ರೂ ಮೌಲ್ಯದ 450 ಗ್ರಾಂ ಚಿನ್ನಾಭರಣಗಳು, ಮೊಬೈಲ್‌ಗ‌ಳು ಹಾಗೂ ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ. 

ನೈಸ್‌ ರಸ್ತೆಯಲ್ಲಿ ಯುವತಿಯನ್ನು ಮುಂದಿಟ್ಟುಕೊಂಡು ಸುಲಿಗೆ ಮಾಡಿದ ಸಂಬಂಧ ದಾಖಲಾದ ಮೂರು ಪ್ರಕರಣ ಜಾಡು ಹಿಡಿದು ತನಿಖೆ ನಡೆಸಲಾಗುತ್ತಿತ್ತು. ದೂರುದಾರರು ನೀಡಿದ ಮಾಹಿತಿ ಆಧರಿಸಿ ಮಫ್ತಿಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದಾಗ ಮೊದಲು ಮೊನೀಶಾಳನ್ನು ವಶಕ್ಕೆ ಪಡೆಯಲಾಯಿತು. ಬಳಿಕ ರಸ್ತೆ ಬದಿ ಅವಿತುಕೊಂಡಿದ್ದ ಪ್ರಮುಖ ಆರೋಪಿ ಬಬ್ಲೂ ಮತ್ತು ತಂಡವನ್ನು ಬಂಧಿಸಲಾಯಿತು.

ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಕಳೆದ ಮೂರು ತಿಂಗಳಿನಿಂದ ಇದೇ ಆರೋಪಿಗಳು ನೈಸ್‌ ರಸ್ತೆ, ಎಲೆಕ್ಟ್ರಾನಿಕ್‌ ಸಿಟಿ ಸೇರಿದಂತೆ ಮತ್ತಿತರ ಪ್ರದೇಶಗಳಲ್ಲಿ ಮೋನಿಶಾಳನ್ನು ಮುಂದಿಟ್ಟುಕೊಂಡು ವಾಹನಸವಾರರನ್ನು ಸುಲಿಗೆ ಮಾಡಿದ 25 ಪ್ರಕರಣಗಳ ಬಯಲಾಗಿದೆ. ಈಬಗ್ಗೆ ಹೆಬ್ಬಗೋಡಿ, ಹುಳಿಮಾವು ಠಾಣೆಗಳಲ್ಲಿಯೂ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದರು.

ಈ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಬಬ್ಲೂ ಹಾಗೂ ಮೋನಿಶಾ ಸ್ನೇಹಿತರಾಗಿದ್ದು, ಹಣ ಮಾಡುವ ಉದ್ದೇಶದಿಂದ ಈ ಕೃತ್ಯಕ್ಕೆ ಇಳಿದಿದ್ದಾಗಿ  ಬಾಯ್ಬಿಟ್ಟಿದ್ದಾರೆ. ನೈಸ್‌ ರಸ್ತೆ ಸೇರಿದಂತೆ ಹಲವೆಡೆ ರಾತ್ರಿ 10 ಗಂಟೆ ಸುಮಾರಿಗೆ ಮೋನಿಶಾ ರಸ್ತೆ ಬದಿ ನಿಂತುಕೊಂಡು ಬೈಕ್‌ ಹಾಗೂ ಕಾರುಗಳಲ್ಲಿ  ಬರುತ್ತಿದ್ದವರಿಗೆ ಡ್ರಾಪ್‌ ಕೇಳುವ ನೆಪದಲ್ಲಿ ಕೈ ಅಡ್ಡಹಾಕುತ್ತಿದ್ದಳು.

Advertisement

ಬಳಿಕ ಮೈ ಮಾಟ ಪ್ರದರ್ಶಿಸಿ ಲೈಂಗಿಕ ಕ್ರಿಯೆಗೆ ಬರುವಂತೆ ನಾಟಕವಾಡಿ ಸಮೀಪದ ನಿರ್ಜನ ಪ್ರದೇಶಕ್ಕೆ ಕರೆದೊಯ್ಯುತ್ತಿದ್ದಳು. ಈ ವೇಳೆಗಾಗಲೇ ಸ್ಥಳದಲ್ಲಿರುತ್ತಿದ್ದ ಬಬ್ಲೂ ಮತ್ತು ಆತನ ಸ್ನೇಹಿತರು, ಆತನನ್ನು ಮನಸೋ ಇಚ್ಛೆ  ಥಳಿಸಿ ಹಣ, ಚಿನ್ನಾಭರಣ, ಮೊಬೈಲ್‌ ಫೋನ್‌ ಕಿತ್ತುಕಂಡು ಕಳುಹಿಸುತ್ತಿದ್ದರು.

ಸುಲಿಗೆ ಮಾಡಿದ ಹಣದಲ್ಲಿ ಮಾದಕದ್ರವ್ಯ, ಮೋಜು ಮಸ್ತಿ!: ಆರೋಪಿ ಮೋನಿಶಾ ಸೇರಿದಂತೆ ಎಲ್ಲಾ ಆರೋಪಿಗಳೂ ಮಾದಕ ದ್ರವ್ಯ ವ್ಯಸನಿಗಳಾಗಿದ್ದಾರೆ. ದಾರಿಹೋಕರು ಹಾಗೂ ವಾಹನ ಸವಾರನನ್ನು ದೋಚಿದ ಹಣದಲ್ಲಿ ಗಾಂಜಾ , ಸೇರಿದಂತೆ ಮಾದಕದ್ರವ್ಯ ಸೇವನೆ, ಮೋಜು ಮಸ್ತಿಗೆ ಖರ್ಚು ಮಾಡುತ್ತಿದ್ದರು. ಮುಂಜಾನೆ 5ಗಂಟೆ ಸುಮಾರಿಗೆ  ಸುಲಿಗೆ ಕೃತ್ಯಗಳನ್ನು ಪೂರ್ಣಗೊಳಿಸುತ್ತಿದ್ದ ಆರೋಪಿಗಳು, ಒಮ್ಮೊಮ್ಮೆ ಸಮೀಪದ ನೀಲಗಿರಿ ತೋಪುಗಳಲ್ಲಿಯೇ ದಿನ ಕಳೆಯುತ್ತಿದ್ದರು. ರಾತ್ರಿಯಾಗುತ್ತಿದ್ದಂತೆ ಸುಲಿಗೆಗೆ ಮುಂದಾಗುತ್ತಿದ್ದರು ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು. 

ಪಿಯುಸಿಯಲ್ಲಿ ಶೇ  85  ಅಂಕ ಗಳಿಸಿದ್ದ ಬಬ್ಲೂ: ಪಿಯುಸಿಯಲ್ಲಿ ಶೇ 85 ರಷ್ಟು ಅಂಕಗಳಿಸಿ ಪದವಿ ವ್ಯಾಸಂಗ ಅರ್ಧದಲ್ಲಿಯೇ ಮೊಟಕುಗೊಳಿಸಿದ್ದ ಆರೋಪಿ ಸಾವಂತ್‌ ಅಲಿಯಾಸ್‌ ಬಬ್ಲೂ, ರೌಡಿಶೀಟರ್‌ ಚಪ್ಪರ್‌ ರಘು ಎಂಬಾತನ ತಂಡ ಸೇರಿಕೊಂಡಿದ್ದ. ಇದಾದ ಬಳಿಕ ಸುಲಿಗೆ, ದರೋಡೆ, ಕೊಲೆ ಯತ್ನ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ತಮಿಳುನಾಡಿನಲ್ಲಿ ಕೊಲೆ ಪ್ರಕರಣವೊಂದರ ಆರೋಪಿಯಾಗಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next