Advertisement

ಮಕ್ಕಳ ಉದ್ಯಾನ ಜಾಗ ಕಬಳಿಸಲು ಹುನ್ನಾರ

02:21 PM Sep 29, 2019 | Suhan S |

ಕೋಲಾರ: ನಗರದಲ್ಲಿ ಮತ್ತೆ ಭೂ ಮಾಫಿಯಾ ತಲೆ ಎತ್ತಿದೆ. ನಗರಸಭೆಗೆ ಸೇರಿ ಉದ್ಯಾನ ಜಾಗದಲ್ಲಿ ಗುಡಿಸಲು ಮತ್ತು ಪೆಟ್ಟಿಗೆ ಅಂಗಡಿ ಆರಂಭಿಸಲಾಗಿದೆ. ಮಕ್ಕಳ ಉದ್ಯಾನ ಉಳಿಸಲು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ನಗರಸಭೆ ಮಾಜಿ ಸದಸ್ಯ ಎಸ್‌. ಆರ್‌.ಮುರಳಿಗೌಡ ಆಗ್ರಹಿಸಿದ್ದಾರೆ.

Advertisement

ಈ ಕುರಿತು ಹೇಳಿಕೆ ನೀಡಿರುವ ಅವರು, ಉದ್ಯಾನ ಜಾಗವನ್ನು ಉಳಿಸಿಕೊಳ್ಳಲು ಹಿರಿಯ ಅಧಿಕಾರಿಗಳು ನಡೆಸಿರುವ ಪ್ರಯತ್ನವು ನಿರೀಕ್ಷಿತ ಫಲ ಕೊಟ್ಟಿಲ್ಲ ಎಂದಿದ್ದಾರೆ. ನಗರದ ಟೇಕಲ್‌ ರಸ್ತೆಯಲ್ಲಿರುವ ಮಕ್ಕಳ ಉದ್ಯಾನ ಇದೀಗ ಭೂ ಕಬಳಿಕೆಯವರ ವಕ್ರದೃಷ್ಟಿಗೆ ಬಿದ್ದಿದೆ. ಸರ್ಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ಅಭಿವೃದ್ಧಿಪಡಿಸಲು ಕಾಮಗಾರಿಯು ಶುರುವಾಗಿದೆ. ಈ ವೇಳೆ ರಾತ್ರೋರಾತ್ರಿ ಇದೇ ಜಾಗದಲ್ಲಿ ಗುಡಿಸಲು ಹಾಕಲಾಗಿದೆ. ವಾರಸುದಾರರು ಸ್ಥಳದಲ್ಲಿಲ್ಲ ಎಂದು ತಿಳಿಸಿದ್ದಾರೆ.

ಚಟುವಟಿಕೆ ಇಲ್ಲ: ಕೋಲಾರದ 14ನೇ ವಾರ್ಡ್‌ ವ್ಯಾಪ್ತಿಯಲ್ಲಿನ ಟೇಕಲ್‌ ರಸ್ತೆಯಲ್ಲಿರುವ ವಿಶಾಲ ಸರ್ಕಾರಿ ಜಾಗದಲ್ಲಿ ರಾಜ್ಯ ಆಗ್ರೋ ಇಂಡಸ್ಟ್ರೀಸ್‌ ಕಾಪೋರೆಷನ್‌ ಸಂಸ್ಥೆಯಿತ್ತು. ಹಲವು ವರ್ಷಗಳ ಹಿಂದೆಯೇ ಈ ಸಂಸ್ಥೆಯು ನಷ್ಟದ ಕಾರಣದಿಂದ ಬೀಗ ಹಾಕಿತ್ತು. ಚಟುವಟಿಕೆಯಿಲ್ಲದೆ ವ್ಯರ್ಥವಾಗಿರುವ ಈ ಜಮೀನನ್ನು ತಮಗೆ ಕೊಡುವಂತೆ ವಿವಿಧ ಇಲಾಖೆಗಳು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದವು.

ನಗರಸಭೆಗೆ ನೋಂದಣಿ: ಏತನ್ಮಧ್ಯೆ, ಈ ಜಾಗದಲ್ಲಿ ಮಕ್ಕಳ ಆಟದ ಮೈದಾನ, ಮತ್ಸಾಲಯ ಹಾಗೂ ಗ್ರಂಥಾಲಯವನ್ನು ಅಭಿವೃದ್ಧಿ ಪಡಿಸಲು ಸ್ಥಳೀಯರು ಮನವಿ ಮಾಡಿದ್ದರು. ಹಲವು ಹಂತದ ಪರಿಶೀಲನೆ ನಂತರ ರಾಜ್ಯ ಸರ್ಕಾರದ ಆದೇಶದ ಮೇರೆಗೆ 2017ರಲ್ಲಿ ಅಂದಿನ ಜಿಲ್ಲಾಧಿಕಾರಿ ಈ ಜಮೀನನ್ನು

ನಗರಸಭೆಗೆ ಹಸ್ತಾಂತರ ಮಾಡುವಂತೆ ತಹಶೀಲ್ದಾರ್‌ ಗೆ ಆದೇಶಿಸಿದ್ದರು. ಜಿಲ್ಲಾಧಿಕಾರಿಗಳ ಆದೇಶದಂತೆ ಈ ಜಮೀನಿನ ದಾಖಲೆಗಳು ನಗರಸಭೆಯ ಹೆಸರಿಗೆ ಅಧಿಕೃತವಾಗಿ ನೋಂದಣಿಯಾಗಿದೆ. ಈ ಮಕ್ಕಳ ಉದ್ಯಾನ ಅಭಿವೃದ್ಧಿ ಮಾಡುವುದಕ್ಕಾಗಿ ಇಲ್ಲಿನ ನಗರಸಭೆಯಿಂದ ಅಮೃತ್‌ ಯೋಜನೆಯಡಿಯಲ್ಲಿ ಒಂದೂ ಮುಕ್ಕಾಲು ಕೋಟಿ ರೂ. ಅನ್ನು ಮೀಸಲಿರಿಸಲಾಗಿದೆ. ಈಗಾಗಲೇ ಆವರಣದಲ್ಲಿನ ಹಳೆ ಕಟ್ಟಡವನ್ನು ತೆರವುಗೊಳಿಸಿ ಸುತ್ತಲೂ ಗೋಡೆ ನಿರ್ಮಿಸಲು ಕಾಮಗಾರಿಯು ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದೆ. ಉಳಿದೆಲ್ಲ ಕೆಲಸಗಳು ವೇಗವಾಗಿ ನಡೆಯುವುದಕ್ಕೆ ನಗರಸಭೆಯು ಸಿದ್ದತೆಯನ್ನು ನಡೆಸುತ್ತಿದೆ.

Advertisement

ರಾತ್ರೋ ರಾತ್ರಿ ಗುಡಿಸಲು ಉದ್ಭವ: ಮಕ್ಕಳ ಆಟದ ಮೈದಾನದ ಅಭಿವೃದ್ಧಿಯ ವಿಷಯವಾಗಿ ಇಷ್ಟೆಲ್ಲಾ ಪ್ರಕ್ರಿಯೆಗಳು ನಡೆಯುತ್ತಿದ್ದಂತೆಯೇ, ಇದೇ ಮೈದಾನದ ಪಶ್ಚಿಮ ಭಾಗದಲ್ಲಿ ದಿಢೀರನೆ ಗುಡಿಸಲು ಮತ್ತು ಪೆಟ್ಟಿಗೆ ಅಂಗಡಿಗಳು ತಲೆ ಎತ್ತಿವೆ. ನಗರಸಭೆಯ ಸುಪರ್ದಿನಲ್ಲಿರುವ ಈ ಜಾಗದಲ್ಲಿ ರಾತ್ರೋ-ರಾತ್ರಿ ಗುಡಿಸಲು ಮತ್ತು ಪೆಟ್ಟಿಗೆ ಅಂಗಡಿಗಳನ್ನು ಇರಿಸಲಾಗಿದೆಯಾದರೂ ಅದರ ಮಾಲಿಕರು ಮಾತ್ರ ಯಾರೂ ಅಂತ ಗೊತ್ತಾಗಿಲ್ಲ. ಒಂದು ವಾರದಿಂದೀಚೆಗೆ ಆಟದ ಮೈದಾನದ ಆವರಣದಲ್ಲಿ ಅಕ್ರಮವಾಗಿ ಗುಡಿಸಲುಗಳು ಹಾಕುತ್ತಿರುವ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಸ್ಥಳೀಯರು ನಗರಸಭೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಶಾಸ್ತ್ರಕ್ಕೆಂದು ಸ್ಥಳಕ್ಕೆ ಬಂದಿದ್ದ ನಗರಸಭೆ ಅಧಿಕಾರಿಗಳು, ಅಕ್ರಮವಾಗಿ ಇರಿಸಲಾಗಿರುವ ಪೆಟ್ಟಿಗೆ ಅಂಗಡಿ ಮತ್ತು ಗುಡಿಸಲು ತೆರವು ಮಾಡಲು ಯಾವುದೇ ಕ್ರಮವನ್ನು ಜರುಗಿಸಿಲ್ಲ.

ನಗರಸಭೆಯ ಈ ದಿವ್ಯ ನಿರ್ಲಕ್ಷ್ಯದಿಂದಾಗಿ ಕೋಟ್ಯಂತರ ರೂ. ಮೌಲ್ಯದ ನಗರಸಭೆಯ ಜಮೀನು ಭೂಕಬಳಿಕೆದಾರರ ಪಾಲಾಗುತ್ತ ಎನ್ನುವ ಆತಂಕ ಇದೀಗ ಎದುರಾಗಿದೆ. ಇದರ ಜೊತೆಗೆ ಆಧುನಿಕ ಸೌಕರ್ಯಗಳನ್ನು ಒಳಗೊಂಡಿರುವ ಆಟದ ಮೈದಾನ ಹೊಂದುವ ಅವಕಾಶದಿಂದ ನಾಗರಿಕರು ವಂಚಿತರಾಗುವ ಸಾಧ್ಯತೆಗಳೂ ದಟ್ಟವಾಗಿದೆ. ತುರ್ತಾಗಿ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಮುರಳಿಗೌಡ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next